
ಪ್ಯಾರೀಸ್, ಮೇ 28: ಮುಖ್ಯವಾಗಿ ಟೆನಿಸ್, ಬ್ಯಾಡ್ಮಿಂಟನ್ ನಂಥ ಆಟಗಳಲ್ಲಿ ಹೀಗಾಗುವುದಿದೆ. ಇಲ್ಲೂ ಹೀಗಾಗಿದೆ. ಸೋಮವಾರ ಪ್ಯಾರಿಸ್ ನಲ್ಲಿ ನಡೆದ 'ಫ್ರೆಂಚ್ ಓಪನ್' ಟೆನಿಸ್ ಪಂದ್ಯಾಟದ ಮೊದಲ ಸುತ್ತಿನಲ್ಲಿ ಜಪಾನ್ ನ ನವೋಮಿ ಒಸಾಕಾ ಅವರು ಅಮೆರಿಕಾದ ಸೋಫಿಯಾ ಕೆನಿನ್ ವಿರುದ್ಧ ಗೆದ್ದು-ಸೋತು-ಗೆದ್ದಿದ್ದಾರೆ.
ಕೆನಿನ್ ವಿರುದ್ಧ ಒಸಾಕಾ 6-2, 7-5ರ ಗೆಲುವು ದಾಖಲಿಸಿ ದ್ವಿತೀಯ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡರಾದರೂ ಪಂದ್ಯದ ವೇಳೆ ಒಸಾಕ ಬೆಸ್ಟ್-ವೊರ್ಸ್ಟ್ ಆಟ ಪ್ರದರ್ಶಿಸಿದ್ದು ಗಮನ ಸೆಳೆಯಿತು.
ವಿಶ್ವ 21ನೇ ಶ್ರೇಯಾಂಕಿತೆ ಒಸಾಕಾ ಕೋರ್ಟ್ 3ರಲ್ಲಿ ಅಮೆರಿಕಾ ಆಟಗಾರ್ತಿಯ ವಿರುದ್ಧ ಸ್ಪರ್ಧೆಗಿಳಿದಿದ್ದರು. ಮೊದಲ ಸೆಟ್ಟನ್ನು ಎದುರಾಳಿ ಸೋಫಿಯಾಗೆ ಬರೀ 2 ಅಂಕಗಳನ್ನು ಬಿಟ್ಟುಕೊಟ್ಟು ಜಯಿಸಿದರು. ಆದರೆ ನೋಡುಗರಿಗೆ 'ಮಂಡೆಬೆಚ್ಚ' (ತಲೆಬಿಸಿ) ಮಾಡಿದ್ದು ದ್ವಿತೀಯ ಸೆಟ್.
20ರ ಹರೆಯದ ನವೋಮಿ ಎರಡನೇ ಸೆಟ್ ಆರಂಭದಲ್ಲೇ ಕೆನಿನ್ ಗೆ 0-2 ಅಂತರದ ಮುನ್ನಡೆ ಕೊಟ್ಟರು. ಇದಾಗಿ ಮರುಕ್ಷಣವೇ ತಿರುಗಿಬಿದ್ದ ಒಸಾಕ ಸಾಲು ಸಾಲಾಗಿ ಅಂಕ ಕದಿಯುತ್ತಾ ಬಂದು ಎದುರಾಳಿ ವಿರುದ್ಧ 5-2ರ ಅಂತರ ಕಾಯ್ದುಕೊಂಡರು.
ಅನಂತರ ಮತ್ತೆ ಒಸಾಕಾರ ನೀರಾಸ ಆಟ ಮುಂದುವರೆಯಿತು. ಸಂದರ್ಭ ಬಳಸಿಕೊಂಡ ಕೆನಿನ್ 3 ಪಾಯಿಂಟ್ ಗಳನ್ನು ಖಾತೆಗೆ ಸೇರಿಸಿಕೊಂಡರು. ಇಬ್ಬರ ಅಂಕ ಆಗ 6-5ಕ್ಕೆ ಬಂದಿತ್ತು. ಇತ್ತ ಒಸಾಕಾ ಈಗ ಗೆಲ್ಲುತ್ತಾರೆ ಈಗ ಗೆಲ್ಲುತ್ತಾರೆ ಅಂತ ಕಾದು ಕುಂತಿದ್ದವರೆಲ್ಲ ತಲೆ ಕೆರೆದುಕೊಳ್ಳಬೇಕಾಯ್ತು.
ಒಸಾಕಾ 1 ಅಂಕವನ್ನು ಗಳಿಸಿ ಪಂದ್ಯ ಗೆದ್ದುಕೊಳ್ಳುವುದರ ಬದಲು ಎದುರಾಳಿಯನ್ನು ತನ್ನ ಅಂಕದ ಸಮೀಪಕ್ಕೆ ಬಂದು ನಿಲ್ಲುವಂತೆ ಮಾಡಿದ್ದನ್ನು ನೋಡಿ ಪಂದ್ಯ ವೀಕ್ಷಿಸುತ್ತಿದ್ದವರೆಲ್ಲ ಅವಕ್ಕಾಗುವಂತಾಯಿತು. ಇನ್ನೇನು ಒಸಾಕಾ ಸೋತೇಬಿಟ್ಟರು ಅಂದುಕೊಳ್ಳುವಷ್ಟರಲ್ಲಿ ಒಸಾಕಾ 7-5ರ ಗೆಲುವು ದಾಖಲಿಸಿದರು. ಇತ್ತ ಟೆನ್ಶನ್ ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದವರೆಲ್ಲ ಒಂದು ಸಮಾಧಾನದ ನಿಟ್ಟುಸಿರು ಬಿಟ್ಟರು!