
ಪ್ಯಾರೀಸ್, ಜೂ. 9: ಪ್ರತಿಷ್ಠಿತ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) ನ ವನಿತಾ ಸಿಂಗಲ್ಸ್ ಫೈನಲ್ ನಲ್ಲಿ ರುಮೇನಿಯನ್ ಆಟಗಾರ್ತಿ ಸಿಮೋನಾ ಹಾಲೆಪ್ ಅವರು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಈ ಗೆಲುವಿನೊಂದಿಗೆ ಸಿಮೋನಾ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಸಂಭ್ರಮಿಸಿದ್ದಾರೆ.
ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಹಾಲೆಪ್ ಅವರು ಅಮೆರಿಕದ ಸ್ಲೋಯೆನ್ ಸ್ಟೀಫನ್ಸ್ ಎದುರು 3-6, 6-4, 6-1ರ ರೋಚಕ ಗೆಲುವು ದಾಖಲಿಸಿದರು. ಇತ್ತ ಸ್ಟೀಫನ್ಸ್ ಕೂಡ ಎದುರಾಳಿಗೆ ಪ್ರಬಲ ಪೈಪೋಟಿ ನೀಡಿ ಗಮನ ಸೆಳೆದರು.
ಆರಂಭಿಕ ಸೆಟ್ ನಲ್ಲಿ 3-6ರ ಮುನ್ನಡೆ ಸಾಧಿಸಿದ ಅಮೆರಿಕಾ ಆಟಗಾರ್ತಿ ಹುಮ್ಮಸ್ಸು ತೋರಿಸಿದರಾದರೂ ಹಾಲೆಪ್ ಮುಂದಿನ ಸೆಟ್ ಗೆದ್ದುಕೊಂಡರು. ನಿರ್ಣಾಯಕ ಸೆಟ್ ನಲ್ಲಿ ಮುನ್ನಡೆ ಕಾಯ್ದುಕೊಂಡ ಹಾಲೆಪ್ ಗೆಲುವು ತನ್ನದಾಗಿಸಿದರು.
ಹಾಲೆಪ್ ಒಂದೂ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಿಲ್ಲವಾದ್ದರಿಂದ ಇಂದಿನ ಹಣಾಹಣಿಯಲ್ಲಿ ಸ್ಟೀಫನ್ಸ್ ಗೆ ಪ್ರಬಲ ಪೈಪೋಟಿ ನೀಡುವಲ್ಲಿ ಯಶಸ್ವಿಯಾದರು. ಅದೂ ಅಲ್ಲದೆ ಹಾಲೆಪ್ ಸದ್ಯ ವಿಶ್ವ ನಂ. 1 ಸ್ಥಾನದಲ್ಲಿರುವುದರಿಂದ ಪ್ರತಿಷ್ಠೆ ನಿಟ್ಟಿನಲ್ಲೂ 10ನೇ ಶ್ರೇಯಾಂಕಿತ ಎದುರಾಳಿ ಸ್ಟೀಫನ್ಸ್ ಎದುರು ಗೆದ್ದು ಬೀಗಿದರು.
ಕಳೆದ ಮೇ 21ರಿಂದ ಆರಂಭವಾಗಿರುವ ಪ್ರತಿಷ್ಠಿತ ರೋಲ್ಯಾಂಡ್ ಗ್ಯಾರೋಸ್ (ಫ್ರೆಂಚ್ ಓಪನ್) ಟೆನಿಸ್ ಪಂದ್ಯಾಟಕ್ಕೆ ನಾಳೆ (ಜೂ. 10) ಪುರುಷರ ಸಿಂಗಲ್ಸ್ ಫೈನಲ್ ನೊಂದಿಗೆ ತೆರೆ ಬೀಳಲಿದೆ.