ಜಗತ್ತಿಗೆ ಕಾಯಕವೇ ಕೈಲಾಸವೆಂಬ ಸಂದೇಶ ಕೊಟ್ಟವರು ಶಿವ ಶರಣ ಬಸವಣ್ಣನವರು. ಇಂದಿಗೂ ಸಹ, ಅನೇಕ ಜನರು ಈ ಸಂದೇಶದಿಂದ ಪ್ರಭಾವಿತರಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಬೆಂಗಳೂರಿನ ಆಟೋ ರಿಕ್ಷಾ ಚಾಲಕ. ಅವರು ತಮ್ಮ ಕಾಯಕವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ಈ ಆಟೋ ರಿಕ್ಷಾ ಚಾಲಕ ಬೇರೆ ಯಾರು ಅಲ್ಲ, ಕರ್ನಾಟಕ ಟೇಬಲ್ ಟೆನಿಸ್ ತಂಡದ ಮಾಜಿ ಕೋಚ್ ಗುರುಮೂರ್ತಿ ಎನ್.
ಗುರುಮೂರ್ತಿ ಅವರು ಕೋವಿಡ್-19 ಬರುವವರೆಗೂ ಕರ್ನಾಟಕ ಟೇಬಲ್ ಟೆನಿಸ್ ತಂಡದ ಕೋಚ್ ಆಗಿದ್ದರು. ಕೋವಿಡ್ ವೇಳೆ ಅದೆಷ್ಟೋ ಜನರ ಬದುಕು ಬೀದಿ ಬದಿಗೆ ಬಂದಿತ್ತು. ಗುರುಮೂರ್ತಿ ಅವರು ಕೂಡ ಕೋವಿಡ್ ಪರಿಣಾಮವನ್ನು ಎದುರಿಸಬೇಕಾಯಿತು.

ಬೆಂಗಳೂರಿನ ಬೆಂಗಳೂರಿನ ಮಲ್ಲೇಶ್ವರಂ ಮೂಲದವರಾದ ಗುರುಮೂರ್ತಿ ವೃತ್ತಿಪರ ಟೇಬಲ್ ಟೆನಿಸ್ ಆಟಗಾರ. ಜೊತೆಗೆ ಕೋವಿಡ್ ಸಂದರ್ಭದಲ್ಲಿ ಕರ್ನಾಟಕ ಟೇಬಲ್ ಟೆನಿಸ್ ತಂಡದ ಕೋಚ್ ಆಗಿದ್ದ ಅವರು ಕಾರಣಾಂತರಗಳಿಂದ ತಮ್ಮ ಹುದ್ದೆಯನ್ನು ಕಳೆದುಕೊಳ್ಳಬೇಕಾಯಿತು.
ಇದಾದ ನಂತರ ಧೈರ್ಯ ಕಳೆದುಕೊಳ್ಳದ ಗುರುಮೂರ್ತಿ ಸ್ವಂತ ಉದೋಗ್ಯ ಶುರು ಮಾಡಿದರು. ಯಾವುದೇ ಹಿಂಜರಿಕೆ ಇಲ್ಲದೆ ಗುರುಮೂರ್ತಿ ಸ್ವಾಭಿಮಾನಿ ಆಟೋ ರಿಕ್ಷಾ ಚಾಲಕರಾಗಿದ್ದಾರೆ. ಅಂದು ಖ್ಯಾತ ಟೇಬಲ್ ಟೆನ್ನಿಸ್ ಕೋಚ್ ಆಗಿದ್ದ ಗುರುಮೂರ್ತಿ ಇಂದು ಆಟೋ ರಿಕ್ಷಾ ಚಾಲಕರಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಗುರುಮೂರ್ತಿ ಅವರು ದಿನನಿತ್ಯ ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ಓಡಿಸುವ ಮೂಲಕ ಜೀವನ ನಡೆಸುತ್ತಿದ್ದಾರೆ.