ಭಾರತದ ದಿಗ್ಗಜ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಈ ವರ್ಷಾರಂಭದಲ್ಲಿಯೇ ಅಂತಾರಾಷ್ಟ್ರೀಯ ಟೆನಿಸ್‌ಗೆ ವಿದಾಯ ಘೋಷಿಸಿದ್ದರು. ಆದರೆ ಇದೀಗ ವಿಂಬಲ್ಡನ್ ಅಂಗಳದಲ್ಲಿ ಮತ್ತೆ ಕಣಕ್ಕಿಳಿಯಲು ಭಾರತೀಯ ಸಾನಿಯಾ ಸಜ್ಜಾಗಿದ್ದಾರೆ. ಅಂದಹಾಗೆ ಸಾನಿಯಾ ಮಿರ್ಜಾ ಪ್ರಮುಖ ವಿಂಬಲ್ಡನ್ ಡ್ರಾದಲ್ಲಿ ಕಣಕ್ಕಿಳಿಯುತ್ತಿಲ್ಲ. ಲೇಡಿಸ್ ಲೆಜೆಂಡ್ಸ್ ಇನ್ವಿಟೇಶನ್ ಡಬಲ್ಸ್ ವಿಭಾಗದಲ್ಲಿ ಸಾನಿಯಾ ಕಣಕ್ಕಿಳಿಯಲಿದ್ದಾರೆ.
ಗ್ರೇಟ್ ಬ್ರಿಟನ್‌ನ ಜೋಹಾನ್ನಾ ಕೊಂಟಾ ಅವರೊಂದಿಗೆ ಜೊತೆಗಾರ್ತಿಯಾಗಿ ಸಾನಿಯಾ ಕಣಕ್ಕಿಳಿಯಲಿದ್ದಾರೆ. 32 ವುಸ್ಸಿನ ಜೋಹನ್ನಾ ಕೊಂಟಾ ಗ್ರೇಟ್ ಬ್ರಿಟನ್ ಪರವಾಗಿ ಆಡುವುದಕ್ಕೂ ಮುನ್ನ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದರು. ಆದರೆ 2021 ಆವೃತ್ತಿಯ ಅಂತ್ಯದಲ್ಲಿ ವೃತ್ತಿಪರ ಟೆನಿಸ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ.

ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ ಅವರು ಈ ವರ್ಷದ ವಿಂಬಲ್ಡನ್‌ನಲ್ಲಿ ಈ ಇಬ್ಬರು ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ. ಪಂದ್ಯಾವಳಿಯ ವೇಳಾಪಟ್ಟಿಯನ್ನು ಸಾನಿಯಾ ಮಿರ್ಜಾ ತಂದೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಸಾನಿಯಾ ಮಿರ್ಜಾ ಅವರ ಮಾಜಿ ಡಬಲ್ಸ್ ಪಾಲುದಾರ ಮಾರ್ಟಿನಾ ಹಿಂಗಿಸ್ ಮತ್ತು ನಾಲ್ಕು ಬಾರಿ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಕಿಮ್ ಕ್ಲಿಸ್ಟರ್ಸ್ ಸೇರಿದಂತೆ ಹಲವಾರು ನಿವೃತ್ತ ತಾರೆಗಳು ಭಾಗವಹಿಸಲಿದ್ದಾರೆ.
ಭಾರತದ ಅನುಭವಿ ರೋಹನ್ ಬೋಪಣ್ಣ ಅವರು ವಿಂಬಲ್ಡನ್ 2023 ರ ಮುಖ್ಯ ಡ್ರಾದಲ್ಲಿ ಭಾಗವಹಿಸುವ ಏಕೈಕ ಭಾರತೀಯರಾಗಿದ್ದಾರೆ. 43 ವರ್ಷದ ಬೋಪಣ್ಣ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ. ಇಂಡೋ-ಆಸ್ಟ್ರೇಲಿಯನ್ ಜೋಡಿಯು ಜುಲೈ 5 ರಂದು ಪುರುಷರ ಡಬಲ್ಸ್ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಅರ್ಜೆಂಟೀನಾದ ಗಿಲ್ಲೆರ್ಮೊ ಡುರಾನ್ ಮತ್ತು ತೋಮಸ್ ಮಾರ್ಟಿನ್ ಎಟ್ಚೆವೆರಿ ಅವರನ್ನು ಎದುರಿಸಲಿದ್ದಾರೆ.
ಈ ಮೂಲಕ ಭಾರತೀಯ ಟೆನಿಸ್ ತಾರೆ ಬೋಪಣ್ಣ ಅವರು ವಿಂಬಲ್ಡನ್‌ನಲ್ಲಿ 13ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಂತಾಗುತ್ತದೆ. ಇದಕ್ಕೂ ರೋಹನ್ ಬೋಪಣ್ಣ ಪ್ರತಿಕ್ರಿಯೆ ನೀಡಿದ್ದು ಡೇವಿಸ್ ಕಪ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ ಆದರೆ ದೇಹವು ಸಹಕರಿಸುವವರೆಗೆ ಎಟಿಪಿ ಪ್ರವಾಸದಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಘೋಷಿಸಿದ್ದರು.
ವಿಂಬಲ್ಡನ್ 2023ರ ಮುಖ್ಯ ಸುತ್ತಿನ ಪಂದ್ಯಗಳು ಜುಲೈ 3ರಿಂದು ಪ್ರಾರಂಭವಾಗಲಿದೆ. ಪ್ರತಿಷ್ಠಿತ ಈವೆಂಟ್‌ನ ಅರ್ಹತಾ ಪಂದ್ಯಗಳು ಜೂನ್ 26 ರಂದು ಪ್ರಾರಂಭವಾಗಿ ಜೂನ್ 29 ರಂದು ಅಂತ್ಯವಾಗಿದೆ. ಭಾರತದ ಅಂಕಿತಾ ರೈನಾ ಮಾತ್ರ ದೇಶದಿಂದ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಿ ಆಟಗಾರ್ತಿಯಾಗಿದ್ದಾರೆ. 30ರ ಹರೆಯದ ಅಂಕಿತಾ ಅರ್ಹತಾ ಸುತ್ತಿನ ಮೊದಲ ಸುತ್ತಿನಲ್ಲಿ ಸ್ಪೇನ್‌ನ ಬೌಜಾಸ್ ಮನೈರೊ ವಿರುದ್ಧ ಮೂರು ಸೆಟ್‌ಗಳ ಸೆಣೆಸಾಟದಲ್ಲಿ ಸೋತು ಹೋರಾಟ ಅಂತ್ಯಗೊಳಿಸಿದರು.
ಇನ್ನು ಇದಕ್ಕೂ ಮುನ್ನ ವರ್ಷದ ಮೊದಲ ಗ್ರ್ಯಾನ್‌ಸ್ಲ್ಯಾಮ್ ಆದ ಆಸ್ಟ್ರೇಲಿಯನ್ ಓಪನ್‌ನ ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಅವರು ಸಾನಿಯಾ ಮಿರ್ಜಾ ಅವರೊಂದಿಗೆ ಕಣಕ್ಕಿಳಿದಿದ್ದರು. ಈ ಟೂರ್ನಿಯಲ್ಲಿ ಭಾರತದ ಜೋಡಿ ಫೈನಲ್ ಹಂತಕ್ಕೆ ತಲುಪಿ ರನ್ನರ್‌ಅಪ್ ಸ್ಥಾನವನ್ನು ಪಡೆದುಕೊಂಡಿತ್ತು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾನಿಯಾ ಮಿರ್ಜಾಗೆ ವಿದಾಯದ ಪಂದ್ಯವಾಗಿವೂ ಆಗಿತ್ತು.