
ಬರ್ಮಿಂಗ್‌ಹ್ಯಾಮ್, ಮಾರ್ಚ್ 8: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಸವಾಲು ಅಂತ್ಯಗೊಂಡಿದೆ. ಸೈನಾ ಅವರು ತೈ ಝು ಯಿಂಗ್ ಎದುರು ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಶುಕ್ರವಾರ (ಮಾರ್ಚ್ 8) ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೈನಾ, ಚೈನೀಸ್ ತೈಪೆಯ ತೈ ಝು ಯಿಂಗ್ ಎದುರು 15-21, 19-21ರ ನೇರ ಸೆಟ್ ಸೋಲು ಅನುಭವಿಸಿದರು. ಮುನ್ನಡೆ ನಿಟ್ಟಿನಲ್ಲಿ ಸೈನಾ ಪ್ರಯತ್ನಿಸಿದರಾದರೂ ಎರಡು ಬಾರಿಯ ಹಾಲಿ ಚಾಂಪಿಯನ್ ತೈ ಝು ಯಿಂಗ್ ಇದಕ್ಕೆ ಅವಕಾಶ ಕೊಡಲಿಲ್ಲ.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಸೈನಾ ವಿರುದ್ಧ ತೈ ಝು ಯಿಂಗ್ ಅವರು ಹಿಂದಿನ ಸತತ 13 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ತೈ ಝು ಯಿಂಗ್ ವಿರುದ್ಧ ಸೈನಾ 2013ರಲ್ಲಿ ಕಡೇಯ ಸಾರಿ ಗೆಲುವನ್ನು ಕಂಡಿದ್ದರು.