BWF ವಿಶ್ವ ಚಾಂಪಿಯನ್‌ಶಿಪ್: ಪ್ರಣಯ್, ಲಕ್ಷ್ಯ ಸೇನ್ 3ನೇ ಸುತ್ತಿಗೆ ಲಗ್ಗೆ: ಪಿವಿ ಸಿಂಧುಗೆ ನಿರಾಸೆ
ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರ ಶೋಚನೀಯ ಆಟ 2023ರಲ್ಲಿ ಮುಂದುವರಿದಿದೆ. ಈ ವರ್ಷ ಬಹುತೇಕ ಸೋಲಿನ ಮೇಲೆ ಸೋಲು ಕಾಣುತ್ತಿರುವ ಸಿಂಧು ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನಲ್ಲಿ ತನ್ನ ಹಳೆಯ ಎದುರಾಳಿ ನೊಜೊಮಿ ಒಕುಹರಾ ವಿರುದ್ಧ ಸೋಲು ಅನುಭವಿಸಿದ್ದಾರೆ. ಮೊದಲ ಸುತ್ತಿನಲ್ಲಿ ಬೈ ಪಡೆದು ಎರಡನೇ ಸುತ್ತಿಗೆ ಪ್ರವೇಶಿಸಿದ್ದ ಸಿಂಧು ಈ ಹಂತದಲ್ಲಿ 14-21 14-21 ಅಂತರದಿಂದ ಸೋಲು ಕಂಡಿದ್ದಾರೆ.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆಯಾಗಿರುವ ಸಿಂಧು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪದೇ ತನ್ನ ಹೋರಾಟ ಅಂತ್ಯಗೊಳಿಸುತ್ತಿರುವುದು ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲು. ಸಿಂಧು ಸೋಲಿನೊಂದಿಗೆ ಸಿಂಗಲ್ಸ್ ಮಹಿಳೆಯದ ವಿಭಾಗದಲ್ಲಿ ಭಾರತದ ಪದಕದ ಕನಸು ಭಗ್ನಗೊಂಡಿದೆ.

ಆದರೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಎಚ್‌ಎಸ್ ಪ್ರಣಯ್ ಮತ್ತು ಲಕ್ಷ್ಯ ಸೇನ್ ಭಾರತೀಯ ಬ್ಯಾಡ್ಮಿಂಟನ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಈ ಇಬ್ಬರು ಶಟ್ಲರ್‌ಗಳು ಕೂಡ ಗೆಲುವು ಸಾಧಿಸಿದ್ದು ಪ್ರೀ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.
ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಒಟ್ಟು ಐದು ಪದಕದ ಸಾಧನೆ ಮಾಡಿರುವ ಸಿಂಧು, ಆರನೇ ಪದಕದ ಆಸೆಯನ್ನು ಕೈ ಬಿಟ್ಟಿದ್ದಾರೆ. ಈ ಮೂಲಕ ಈ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸದೆ ಇದೆ ಮೊದಲ ಬಾರಿಗೆ ಸಿಂಧು ನಿರ್ಗಮಿಸಿದ್ದಾರೆ.
ಮೊದಲ ಸೆಟ್‌ನಿಂದಲೂ ಜಪಾನ್ ಆಟಗಾರ್ತಿ ಮನಮೋಹಕ ಆಟದ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿದರು. ಅಲ್ಲದೆ ಸುಲಭವಾಗಿ ಮೊದಲ ಸೆಟ್ ತಮ್ಮದಾಗಿಸಿಕೊಂಡರು. ಎರಡನೇ ಸೆಟ್ ನಲ್ಲಿ ಕಮ್ ಬ್ಯಾಕ್ ಮಾಡುವ ಸಿಂಧು ಅವರ ಆಸೆಗೆ ಆರಂಭದಲ್ಲಿ ಯಶ ಸಿಕ್ಕಿತು. ಭರ್ಜರಿ ಕ್ರಾಸ್ ಕೋರ್ಟ್ ಹೊಡೆತ ಹಾಗೂ ಗ್ಯಾಪ್ ಶಾಟ್ ಗಳ ಮೂಲಕ ಅಂಕ ಬಾಚಿಕೊಂಡರು. ಒಂದು ಹಂತದಲ್ಲಿ 9-0 ಯಿಂದ ಮುನ್ನಡೆ ಸಾಧಿಸಿದ್ದ ಸಿಂಧು, ನಂತರ ಸತತ ಅಂಕಗಳನ್ನು ಬಿಟ್ಟು ಕೊಟ್ಟರು. ಪರಿಣಾಮ ಮೊದಲಾರ್ಧದಲ್ಲಿ ಮುನ್ನಡೆ ಹೊಂದಿದ್ದರೂ ಪಂದ್ಯವನ್ನು ಕಳೆದುಕೊಳ್ಳ ಬೇಕಾಯಿತು.
ಕಳೆದ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಗಾಯದ ಸಮಸ್ಯೆಯಿಂದ ಸಿಂಧು ಭಾಗವಹಿಸಿರಲಿಲ್ಲ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ 1 ಚಿನ್ನ, 2 ಬೆಳ್ಳಿ, 2 ಕಂಚು ಸಾಧನೆ ಮಾಡಿದ್ದ ಸಿಂಧುಗೆ ಮತ್ತೊಂದು ಪದಕದ ಆಸೆ ಕೈಗೂಡಲಿಲ್ಲ.
ಇನ್ನು 2021ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ನಲ್ಲಿ 21-11, 21-12 ರಿಂದ ಕೊರಿಯಾದ ಜಿಯೋನ್ ಹ್ಯೋಕ್ ಜಿನ್ ಅವರನ್ನು ಸೋಲಿಸಿದರು. ವಿಶ್ವದ 11ನೇ ಕ್ರಮಾಂಕದ ಭಾರತದ ಲಕ್ಷ್ಯ ಸೇನ್‌ಗೆ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಕುನ್ಲವುಡ್ ವಿಟಿಡ್ಸರ್ನ್ ಸವಾಲು ಎದುರಾಗಲಿದೆ. ಪುರುಷರ ಸಿಂಗಲ್ಸ್ ಇನ್ನೊಂದು ಪಂದ್ಯದಲ್ಲಿ ಎಚ್.ಎಸ್ ಪ್ರಣಯ್ 21-9, 21-14 ರಿಂದ ಇಂಡೋನೇಷಿಯಾದ ಚಿಕೋ ಔರಾ ದ್ವಿ ವಾರ್ಡೋಯೋ ವಿರುದ್ಧ ಸುಲಭ ಜಯ ಸಾಧಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications