
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರ 11ನೇ ದಿನದ ಸ್ಪರ್ಧೆಯಲ್ಲಿ ಭಾರತ ಶುಭಾರಂಭ ಮಾಡಿದೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಏಸ್ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕ ಜಯಿಸಿದ್ದಾರೆ. ಈ ಮೂಲಕ ಭಾರತವು ಚಿನ್ನದ ಪದಕದ ಮೂಲಕ ದಿನದಲ್ಲಿ ಶುಭಾರಂಭ ಮಾಡಿದ್ದು, ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 19ನೇ ಚಿನ್ನದ ಪದಕ ಗೆದ್ದಿದೆ.
CWG 2022: ಶ್ರೀಲಂಕಾದ 10 ಕ್ರೀಡಾಪಟುಗಳು ನಾಪತ್ತೆ!: ಲಂಕಾ ಕ್ರೀಡಾಪಟುಗಳ ಈ ಚಾಳಿಯ ಇತಿಹಾಸವೇ ವಿಚಿತ್ರ!
ಆರಂಭದಿಂದಲೇ ಅಗ್ರೆಸ್ಸಿವ್ ಆಗಿ ಪದಕ ಜಯಿಸಿದ ಪಿ.ವಿ. ಸಿಂಧು ಮೊದಲ ಮಿಡ್ ಗೇಮ್ ಬ್ರೇಕ್‌ನಲ್ಲಿ 11-8 ರಿಂದ ಮುನ್ನಡೆ ಸಾಧಿಸಿದ್ದರು. ನಂತರದಲ್ಲಿ ಎದುರಾಳಿಗೆ ಎಲ್ಲಿಯೂ ಅವಕಾಶ ನೀಡದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಉತ್ತಮ ಸರ್ವ್ ಹಾಗೂ ಪ್ಲೇಸ್‌ಮೆಂಟ್ ಮೂಲಕ ಮೊದಲ ಗೇಮ್ ಅನ್ನು 21-15 ಪಾಯಿಂಟ್ಸ್ ಅಂತರದಲ್ಲಿ ಜಯಗಳಿಸಿದರು.
ಎರಡನೇ ಗೇಮ್‌ನಲ್ಲೂ ಕೂಡ ಯಾವುದೇ ಅವಕಾಶ ನೀಡದ ಪಿ.ವಿ ಸಿಂಧು ಎದುರಾಳಿ ವಿರುದ್ಧ ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾದರು. ಎರಡನೇ ಮಿಡ್ ಗೇಮ್ ಬ್ರೇಕ್‌ನಲ್ಲಿ 11-6 ರಿಂದ ಮುನ್ನಡೆ ಸಾಧಿಸಿದರು. ಇದಾದ ಬಳಿಕ ಎದುರಾಳಿ ಆಟಗಾರ್ತಿ ಕೊಂಚ ಪ್ರತಿರೋಧ ಒಡ್ಡಿದರೂ ಸಹ ತಾಳ್ಮೆ ಕಳೆದುಕೊಳ್ಳದ ಪಿ.ವಿ ಸಿಂಧು ಎರಡನೇ ಗೇಮ್ ಅನ್ನು 21-13 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕ ಜಯಿಸಿದರು.
ಈ ಗೆಲುವಿನ ಮೂಲಕ ಭಾರತವು ಬ್ಯಾಡ್ಮಿಂಟನ್‌ನಲ್ಲಿ ಮತ್ತೊಂದು ಪದಕ ಜಯಿಸಿದ್ದು, ಒಟ್ಟಾರೆ ಕ್ರೀಡಾಕೂಟದಲ್ಲಿ 19 ಚಿನ್ನದ ಪದಕ 15 ಬೆಳ್ಳಿ, 22 ಕಂಚಿನ ಪದಕಗಳೊಂದಿಗೆ ಒಟ್ಟಾರೆ 56 ಪದಕಗಳನ್ನ ಗೆದ್ದುಕೊಂಡಿದೆ. ಈ ಮೂಲಕ ನ್ಯೂಜಿಲೆಂಡ್ ಅನ್ನು ಹಿಂದಿಕ್ಕಿ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.