ಅಕ್ಟೋಬರ್ 2015ರಲ್ಲಿ ಸ್ಥಾಪನೆಯಾದ ಭಾರತೀಯ ಖಾಸಗಿ ವಲಯದ ಬ್ಯಾಂಕ್ IDFC FIRST, ಮುಂದಿನ ಮೂರು ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ ತವರಿನ ಪಂದ್ಯಗಳಿಗೆ ಶೀರ್ಷಿಕೆ ಹಕ್ಕುಗಳನ್ನು ಗೆದ್ದುಕೊಂಡಿದೆ.
ಶುಕ್ರವಾರ, ಆಗಸ್ಟ್ 25ರಂದು ದಕ್ಷಿಣ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಮುಚ್ಚಿದ ಬಾಗಿಲಿನ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಮಾಸ್ಟರ್‌ಕಾರ್ಡ್‌ನಿಂದ ಶೀರ್ಷಿಕೆ ಹಕ್ಕನ್ನು IDFC FIRST ಬ್ಯಾಂಕ್ ತನ್ನ ತೆಕ್ಕೆಗೆ ತೆಗೆದುಕೊಂಡಿತು.

IDFC FIRST ಬ್ಯಾಂಕ್ ಹರಾಜು ಪ್ರಕ್ರಿಯೆ ಸ್ಪರ್ಧೆಯಲ್ಲಿ ಸೋನಿ ಸ್ಪೋರ್ಟ್ಸ್ ಅನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಪ್ರಸಾರ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಸೋನಿ ಸ್ಪೋರ್ಟ್ಸ್ ಮೊದಲ ಬಾರಿಗೆ ಭಾರತದ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಡ್ಡಿಂಗ್ ಪ್ರಕ್ರಿಯೆಗೆ ಪ್ರವೇಶಿಸಿರುವುದು ಕುತೂಹಲಕಾರಿಯಾಗಿತ್ತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆರಂಭದಲ್ಲಿ ಮೂಲ ಬೆಲೆಯನ್ನು 3.8 ಕೋಟಿಗೆ ನಿಗದಿಪಡಿಸಿತು. ಆದರೆ ಮಾರುಕಟ್ಟೆ ಪರಿಸ್ಥಿತಿಗಳನ್ನು ಮರುಪರಿಶೀಲಿಸಿದ ನಂತರ ಅವರು ಅದನ್ನು 2.4 ಕೋಟಿಗೆ ಇಳಿಸಲಾಯಿತು.
IDFC FIRST (ಐಡಿಎಫ್‌ಸಿ ಫಸ್ಟ್) ಬ್ಯಾಂಕ್ ಪ್ರತಿ ಅಂತಾರಾಷ್ಟ್ರೀಯ ಪಂದ್ಯಕ್ಕೆ 4.2 ಕೋಟಿ ರೂಪಾಯಿ ಬಿಡ್‌ನೊಂದಿಗೆ ಹಕ್ಕುಗಳನ್ನು ಗೆದ್ದುಕೊಂಡಿದೆ. ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 56 ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲಿವೆ. ಪ್ರತಿ ಅಂತಾರಾಷ್ಟ್ರೀಯ ಪಂದ್ಯದ ಹಿಂದಿನ ಮೌಲ್ಯ 3.8 ಕೋಟಿ ರೂಪಾಯಿ ಆಗಿತ್ತು.
IDFC FIRST ಬ್ಯಾಂಕ್ ಮತ್ತು ಸೋನಿ ಸ್ಪೋರ್ಟ್ಸ್ ಹೊರತುಪಡಿಸಿ ಯಾವುದೇ ಇತರ ಕಂಪನಿಗಳು ಶೀರ್ಷಿಕೆ ಹಕ್ಕುಗಳಿಗಾಗಿ ಬಿಡ್ ಮಾಡಲು ಮುಂದೆ ಬರಲಿಲ್ಲ.
ಖಾಸಗಿ ಬ್ಯಾಂಕ್ ಮತ್ತು ಬಿಸಿಸಿಐ ನಡುವಿನ ಹೊಸ ಒಪ್ಪಂದವು ಏಷ್ಯಾ ಕಪ್ ನಂತರ ಮತ್ತು 50 ಓವರ್‌ಗಳ ಏಕದಿನ ವಿಶ್ವಕಪ್‌ಗೆ ಮೊದಲು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಕಾರ್ಯರೂಪಕ್ಕೆ ಬರಲಿದೆ.
ಐಡಿಎಫ್‌ಸಿ ಫಸ್ಟ್ ಪ್ರಾಯೋಜಕತ್ವದಿಂದ ಬಿಸಿಸಿಐ ಸುಮಾರು 235 ಕೋಟಿ ರೂಪಾಯಿ ಆದಾಯ ಗಳಿಸಲಿದೆ. ಒಪ್ಪಂದವು ಆಗಸ್ಟ್ 2026ರವರೆಗೆ ಇರಲಿದೆ.
ಕ್ರಿಕ್‌ಬಜ್ ಪ್ರಕಾರ, ತಾಂತ್ರಿಕ ಕಾರಣಗಳಿಂದಾಗಿ ಕಾರ್ಪೋರೇಟ್ ಘಟಕವನ್ನು ಪ್ರತಿನಿಧಿಸುವ ಯಾವುದೇ ಏಜೆನ್ಸಿಗೆ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಮತಿಸಲಾಗಿಲ್ಲ.
ಆಗಸ್ಟ್ 31ರಂದು ಬಿಸಿಸಿಐ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆ
ಡಿಸ್ನಿ-ಸ್ಟಾರ್ ಜೊತೆಗಿನ ಒಪ್ಪಂದದ ಅವಧಿ ಮುಗಿದ ಬಳಿಕ ಬಿಸಿಸಿಐ ಯಾವುದೇ ಹೊಸ ಮಾಧ್ಯಮ ಪಾಲುದಾರರನ್ನು ಹೊಂದಿಲ್ಲ. ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವ ಅಸಾಧಾರಣ ಪ್ರತಿಕ್ರಿಯೆಯನ್ನು ಪಡೆದ ನಂತರ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಪ್ರತ್ಯೇಕಿಸಲು ಸಿದ್ಧವಾಗಿದೆ.
ಬಹುನಿರೀಕ್ಷಿತ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆ ಗುರುವಾರ, ಆಗಸ್ಟ್ 31ರಂದು ನಡೆಯಲಿದೆ. ಮಾರ್ಚ್ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ನಂತರ ಡಿಸ್ನಿ-ಸ್ಟಾರ್ ಜೊತೆಗಿನ ಒಪ್ಪಂದವು ಕೊನೆಯಾಗಿತ್ತು.
ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಸೆಪ್ಟೆಂಬರ್‌ನಲ್ಲಿ ಮತ್ತೊಂದು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಭಾರತಕ್ಕೆ ಆಗಮಿಸುತ್ತಿದೆ. ಮೊದಲ ಬಾರಿಗೆ ಭಾರತದಲ್ಲಿ ಸಂಪೂರ್ಣವಾಗಿ ನಡೆಯಲಿರುವ ವಿಶ್ವಕಪ್‌ಗೆ ಮುಂಚಿತವಾಗಿ ಉಭಯ ತಂಡಗಳು ಕೊನೆಯ ಹಂತದ ತಯಾರಿಯಲ್ಲಿ ಭಾಗಿಯಾಗಲಿವೆ.