ಮಂಗಳವಾರ, ಡಿಸೆಂಬರ್ 19ರಂದು ದುಬೈನ ಕೋಕಾ-ಕೋಲಾ ಅರೇನಾದಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಬೌಲಿಂಗ್ ವಿಭಾಗವನ್ನು ಬಲಪಡಿಸಲು ನೋಡಿತು.
ಆರ್‌ಸಿಬಿ ಫ್ರಾಂಚೈಸಿಯು ಪ್ರತಿ ಬಾರಿಯಂತೆ ಈ ಬಾರಿಯೂ ಐಪಿಎಲ್ ಹರಾಜಿನಲ್ಲಿ ಆಟಗಾರರಿಗೆ ಬಿಡ್ ಮಾಡುವಾಗ ಪ್ರತಿ ಬಾರಿಯೂ ಎಡುವುತ್ತದೆ. ಅದು ಈ ಬಾರಿಯೂ ಮುಂದುವರೆದಿದೆ.

ಗಮನಾರ್ಹ ಸಂಗತಿಯೆಂದರೆ, ಕಳೆದ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಗುಜರಾತ್ ಟೈಟನ್ಸ್ ಪರ ಆಡಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್ ಹೊಡೆಸಿಕೊಂಡಿದ್ದ ಬೌಲರ್ ಯಶ್ ದಯಾಳ್ ಅವರನ್ನು 5 ಕೋಟಿ ರೂಪಾಯಿ ಕೋಟ್ಟು ಖರೀದಿ ಮಾಡಿದೆ.
ಈ ನಿರ್ಧಾರದ ಬಗ್ಗೆ ಆರ್‌ಸಿಬಿ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಏಕೆಂದರೆ, ಕಳೆದ ವರ್ಷದ ಟೂರ್ನಿಯಲ್ಲಿ ಕೆಕೆಆರ್ ತಂಡದ ರಿಂಕು ಸಿಂಗ್ ಯಾವ ಮಟ್ಟಕ್ಕೆ ಫೇಮಸ್ ಆದರು ಎನ್ನುವುದು ಎಲ್ಲರಿಗೂ ಗೊತ್ತಿದೆ.
ರಿಂಕು ಸಿಂಗ್ ಆ ಮಟ್ಟಕ್ಕೆ ಫೇಮಸ್ ಆಗೋಕೆ ಮೊದಲನೇ ಕಾರಣ ಕೊನೆಯ ಓವರ್‌ವೊಂದರಲ್ಲಿ 5 ಎಸೆತಗಳಿಗೆ 5 ಸಿಕ್ಸರ್ ಬಾರಿಸಿದ್ದರು. ಆ ಓವರ್ ಬೌಲ್ ಮಾಡಿದ್ದೇ ಈ ಯಶ್ ದಯಾಳ್ ಎನ್ನುವುದು ಆರ್‌ಸಿಬಿ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ.
ಒಂದೇ ಓವರ್‌ನಲ್ಲಿ 5 ಸಿಕ್ಸರ್ ಹೊಡೆಸಿಕೊಂಡಿದ್ದ ಬೌಲರ್‌ಗೆ 5 ಕೋಟಿ ರೂಪಾಯಿ ಕೊಟ್ಟಿದ್ದೀರಾ. ನಿಮಗೆ ಆಟಗಾರರನ್ನು ಖರೀದಿಸಲು ಬರದಿದ್ದರೆ ನಮಗೆ ಹೇಳಿ ಅಂತ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ಇದಕ್ಕೂ ಮುನ್ನ ಯಶ್ ದಯಾಳ್ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಕಾಣಿಸಿಕೊಂಡಿದ್ದಾರೆ. ಗುಜರಾತ್ ಟೈಟನ್ಸ್ ಮತ್ತು ಆರ್‌ಸಿಬಿ ಫ್ರಾಂಚೈಸಿಗಳು ಬಿಡ್ಡಿಂಗ್ ವಾರ್‌ನಲ್ಲಿ ಪಾಲ್ಗೊಂಡವು.
ಒಂದು, ಎರಡು, ಮೂರು, ನಾಲ್ಕು ಕೋಟಿ ಮೈಲುಗಲ್ಲುಗಳನ್ನು ದಾಟಿ ಗುಜರಾತ್ ಟೈಟನ್ಸ್ 4.20 ಕೋಟಿ ರೂಪಾಯಿಗೆ ತಲುಪಿಸಿತು. ಆದರೆ, ಆರ್‌ಸಿಬಿ ಬಿಡ್ ಅನ್ನು 5 ಕೋಟಿ ರೂಪಾಯಿಗೆ ಏರಿಸಿತು ಮತ್ತು ಒಪ್ಪಂದ ಮಾಡಿಕೊಂಡಿತು.
ಇದಕ್ಕೂ ಮುನ್ನ ಅಲ್ಜಾರಿ ಜೋಸೆಫ್‌ಗಾಗಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್‌ಸಿಬಿ ಫ್ರಾಂಚೈಸಿಗಳ ನಡುವೆ ಪೈಪೋಟಿ ನಡೆದಿತ್ತು. ಕೊನೆಗೆ ಅಲ್ಜಾರಿ ಜೋಸೆಫ್ ಅವರನ್ನು ಆರ್‌ಸಿಬಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮೂಲಬೆಲೆ 1 ಕೋಟಿ ರೂಪಾಯಿ ಹೊಂದಿದ್ದ ವೆಸ್ಟ್ ಇಂಡೀಸ್ ಮಾರಕ ವೇಗಿ ಅಲ್ಜಾರಿ ಜೋಸೆಫ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೇಂಟ್ಸ್, ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಬಿಡ್ಡಿಂಗ್ ವಾರ್ ನಡೆಸಿದವು. ಅಂತಿಮವಾಗಿ 11.50 ಕೋಟಿ ರೂಪಾಯಿಗೆ ಆರ್‌ಸಿಬಿ ಪಾಲಾದರು.