6 ಎಸೆತಗಳಲ್ಲಿ 6 ಸಿಕ್ಸರ್: ದಾಖಲೆ ಬರೆದ 15 ವರ್ಷದ ಭಾರತದ ಬ್ಯಾಟ್ಸ್‌ಮನ್ ಕೃಷ್ಣ ಪಾಂಡೆ

ಭಾರತದ ಯುವ ಬ್ಯಾಟರ್ 15 ವರ್ಷದ ಕೃಷ್ಣ ಪಾಂಡೆ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸುವ ಮೂಲಕ ಇಡೀ ಕ್ರಿಕೆಟ್ ಲೋಕವನ್ನ ತನ್ನತ್ತ ತಿರುಗುವಂತೆ ಮಾಡಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಪಾಂಡಿಚೇರಿ ಟಿ10 ಲೀಗ್‌ನಲ್ಲಿ ರಾಯಲ್ಸ್ ಪರ ಆಡುವ ಕೃಷ್ಣ ಪಾಂಡೆ ಶನಿವಾರ ಮಧ್ಯಾಹ್ನ ಪೇಟ್ರಿಯಾಟ್ಸ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವುದರ ಜೊತೆಗೆ ಒಂದು ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ.
158ರನ್‌ಗಳನ್ನ ಬೆನ್ನತ್ತಿದ ರಾಯಲ್ಸ್ ತಂಡದ ಅಮೋಘ ಆಟವಾಡಿದ ಕೃಷ್ಣ ಪಾಂಡೆ ಗಮನಾರ್ಹ ಪ್ರದರ್ಶನ ನೀಡಿದರು. ಪಾಂಡೆ ಕ್ರೀಸ್‌ಗೆ ಕಾಲಿಟ್ಟಾಗ, ಅವರ ತಂಡವು ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಾಯಿಸುವಲ್ಲಿ ಯಶಸ್ವಿಯಾಗುವ ಮೂಲಕ ಪಾಂಡೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ರು.
ಪೇಟ್ರಿಯಾಟ್ಸ್ ಬೌಲರ್ ನಿತೇಶ್ ಠಾಕೂರ್ ಅವರು ಚೇಸಿಂಗ್‌ನ ಆರನೇ ಓವರ್‌ನಲ್ಲಿ ಪಾಂಡೆಗೆ ಬೌಲಿಂಗ್ ಮಾಡಿದರು. ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ ಕೃಷ್ಣ ಪಾಂಡೆ ನಂಬಲಾಗದ ಇನ್ನಿಂಗ್ಸ್ ಆಡುವುದರ ಜೊತೆಗೆ ಆರು ಎಸೆತಗಳಲ್ಲಿ ಆರು ಬಾರಿ ಚೆಂಡನ್ನ ಬೌಂಡರಿ ಗೆರೆ ದಾಟಿಸಿದರು. ಈ ಓವರ್‌ನಲ್ಲಿ ರಾಯಲ್ಸ್ 37ರನ್ ಗಳಿಸಿತು.
ಪುದುಚೇರಿಯ ಕ್ರಿಕೆಟ್ ಅಸೋಸಿಯೇಶನ್ ಪುದುಚೇರಿ ಸೀಚೆಮ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 15 ವರ್ಷದ ಕೃಷ್ಣ ಪಾಂಡೆ ಒಟ್ಟಾರೆ 19 ಎಸೆತಗಳಲ್ಲಿ 83 ರನ್ ಗಳಿಸಿದರು. ಪಾಂಡೆ ಅವರ ಈ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್ ಹಾಗೂ ಎರಡು ಬೌಂಡರಿ ಸೇರಿದ್ದವು. ಅವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 436.80ರಷ್ಟಿದ್ದು ಅವರ ಸ್ಫೋಟಕ ಬ್ಯಾಟಿಂಗ್‌ಗೆ ಸಾಕ್ಷಿಯಾಯಿತು.
ಭಾರತದ ಪರ 2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಓವರ್‌ಗೆ ಆರು ಸಿಕ್ಸರ್ ಸಿಡಿಸಿದ್ದರು. ಇನ್ನು ವಿಂಡೀಸ್‌ನ ಕ್ರಿಸ್‌ಗೇಲ್ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಓವರ್‌ಗೆ ಆರು ಸಿಕ್ಸರ್ ಸಿಡಿಸಿದ್ದ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications