2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಕೇವಲ ಎರಡು ತಿಂಗಳುಗಳು ಬಾಕಿ ಉಳಿದಿದ್ದು, ಸದ್ಯ ಎಲ್ಲಾ ಹತ್ತು ತಂಡಗಳು ದೊಡ್ಡ ಟೂರ್ನಿಗಾಗಿ ತಮ್ಮ ಸಿದ್ಧತೆಗಳನ್ನು ಅಂತಿಮಗೊಳಿಸುತ್ತಿವೆ.
ಇಯಾನ್ ಮಾರ್ಗನ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಅನುಭವಿ ಆಟಗಾರರಿಲ್ಲದೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಉಪಖಂಡದಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಇದೇ ವೇಳೆ, ಇಂಗ್ಲೆಂಡ್ ತಂಡದ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಹೊರಬಂದಿದೆ. ಭಾರತದಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ತನ್ನ ತಂಡದ ಅವಕಾಶಗಳನ್ನು ಮತ್ತಷ್ಟು ಹೆಚ್ಚಿಸಲು ಏಕದಿನ ತಂಡಕ್ಕೆ 2019ರ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ ಮರಳಲು ಸಿದ್ಧರಾಗಿದ್ದಾರೆ.
ಟೆಲಿಗ್ರಾಫ್ ವರದಿಯ ಪ್ರಕಾರ, ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ತಮ್ಮ ಏಕದಿನ ನಿವೃತ್ತಿ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿದೆ.
ಗಮನಾರ್ಹವಾಗಿ, 32 ವರ್ಷದ ಬೆನ್ ಸ್ಟೋಕ್ಸ್ ತಮ್ಮ ಕೆಲಸದ ಹೊರೆಯನ್ನು ನಿರ್ವಹಿಸಲು ಜುಲೈ 2022ರಲ್ಲಿ ಏಕದಿನ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿದರು. ಆದರೆ, ಮುಂಬರುವ 2023ರ ವಿಶ್ವಕಪ್‌ಗಾಗಿ ಬೆನ್ ಸ್ಟೋಕ್ಸ್ ಅವರ ಅನಿರೀಕ್ಷಿತ ವಾಪಸಾತಿಗಾಗಿ ಇಂಗ್ಲೆಂಡ್ ಅಭಿಮಾನಿಗಳು ಕಾತರರಾಗಿದ್ದಾರೆ.
ಇನ್ನು ಐಪಿಎಲ್ 2023ರಿಂದ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಸೀಮಿತಗೊಳಿಸಿತು. 2023ರ ಆಶಸ್ ಟೆಸ್ಟ್ ಸರಣಿಯ ಐದು ಟೆಸ್ಟ್‌ಗಳಲ್ಲಿ ಕೇವಲ 29 ಓವರ್‌ಗಳನ್ನು ಮಾತ್ರ ಬೌಲಿಂಗ್ ಮಾಡಿದರು.
ಟೆಲಿಗ್ರಾಫ್ ವರದಿ ಪ್ರಕಾರ, ಮುಂದಿನ ಇಂಗ್ಲೆಂಡ್‌ನ ಬೇಸಿಗೆಗೆ ಮುಂಚಿತವಾಗಿ ತನ್ನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಬೆನ್ ಸ್ಟೋಕ್ಸ್ ಅವರು 2024ರ ಐಪಿಎಲ್ ಪಂದ್ಯಾವಳಿಯನ್ನು ತಪ್ಪಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ತಿಳಿಸಿದೆ.
ಬೆನ್ ಸ್ಟೋಕ್ಸ್ ತಮ್ಮ ನಿವೃತ್ತಿ ನಿರ್ಧಾರ ದೃಢಪಡಿಸಿದರೆ, ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಶಕ್ತಿಯಾಗಲಿದ್ದಾರೆ ಮತ್ತು ಫಿನಿಶರ್ ಪಾತ್ರ ವಹಿಸಲಿದ್ದಾರೆ.
ಕ್ರೈಸ್ಟ್‌ಚರ್ಚ್‌ನಲ್ಲಿ ಜನಿಸಿದ ಕ್ರಿಕೆಟಿಗ ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್ ವಿರುದ್ಧ 2019ರ ವಿಶ್ವಕಪ್ ಫೈನಲ್‌ನ ಸೂಪರ್ ಓವರ್‌ನಲ್ಲಿ ಗೆಲ್ಲುವ ಮೊದಲು ಅಜೇಯ 84 ರನ್ ಗಳಿಸುವ ಮೂಲಕ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಜೋಫ್ರಾ ಆರ್ಚರ್ ಮರಳುವ ನಿರೀಕ್ಷೆಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್
2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಹತ್ತು ತಂಡಗಳು ಸೆಪ್ಟೆಂಬರ್ 05ರೊಳಗೆ ವಿಶ್ವಕಪ್‌ಗಾಗಿ ತಮ್ಮ ಪ್ರಾಥಮಿಕ ತಂಡವನ್ನು ಪ್ರಕಟಿಸಬೇಕಾಗುತ್ತದೆ. ಸೆಪ್ಟೆಂಬರ್ 27ರವರೆಗೆ ತಂಡಗಳು ತಮ್ಮ ತಂಡಗಳಲ್ಲಿ ಬದಲಾವಣೆಗಳನ್ನು ಮಾಡಬಹುದು.
ಗಮನಾರ್ಹವಾಗಿ, ಇಂಗ್ಲೆಂಡ್ ತಂಡ ಸೆಪ್ಟೆಂಬರ್ 8ರಿಂದ ನ್ಯೂಜಿಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಏಕದಿನ ಸರಣಿಯಲ್ಲಿ ಮತ್ತು ಸೆಪ್ಟೆಂಬರ್ 20ರಿಂದ ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿಶ್ವಕಪ್‌ಗೆ ಮುನ್ನ ಭಾಗವಹಿಸಲಿದೆ.
ಬೆನ್ ಸ್ಟೋಕ್ಸ್ ಹೊರತಾಗಿ, ಇಂಗ್ಲೆಂಡ್ ತಂಡವು ವೇಗಿ ಜೋಫ್ರಾ ಆರ್ಚರ್ ಅವರನ್ನು ಅಕ್ಟೋಬರ್ 5ರಿಂದ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್‌ಗೆ ಮರಳಿ ಕರೆತರಲು ಪ್ರಯತ್ನಿಸಲಿದೆ.
ಪ್ರತಿ ತಂಡವು 2023ರ ಏಕದಿನ ವಿಶ್ವಕಪ್‌ಗಾಗಿ 15 ಸದಸ್ಯರ ಅಂತಿಮ ತಂಡವನ್ನು ಪ್ರಕಟಿಸಬಹುದು ಮತ್ತು ಮೂರು ಪ್ರಯಾಣಿಕ ಮೀಸಲು ಆಟಗಾರರನ್ನು ಘೋಷಿಸಬಹುದು.