ಟೀಂ ಇಂಡಿಯಾದಿಂದ ಕಳಪೆ ಪ್ರದರ್ಶನ, ಕೈ ತಪ್ಪಿದ ಟಿ20 ಸರಣಿ
ಕಟಕ್, ಅ. 05: ಮೊದಲ ಟಿ20 ಪಂದ್ಯ ಸೋತು,ಇಲ್ಲಿನ ಬಾರಬತಿ ಸ್ಟೇಡಿಯಂನಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿಂದ ಕಣಕ್ಕಿಳಿದ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಪ್ರೇಕ್ಷಕರ ಆಕ್ರೋಶಕ್ಕೆ ತುತ್ತಾಯಿತು. ಎರಡನೇ ಟಿ20 ಪಂದ್ಯದಲ್ಲಿ 17.2 ಓವರ್ ಗಳಲ್ಲಿ 92 ರನ್ ಗಳಿಸಿದ್ದ ಭಾರತ ತಂಡವನ್ನು ದಕ್ಷಿಣ ಆಫ್ರಿಕಾ ತಂಡ ಆಲೌಟ್ ಮಾಡಿದ್ದಲ್ಲದೆ, ಉತ್ತಮ ಸರಾಸರಿಯಲ್ಲಿ ರನ್ ಚೇಸ್ ಮಾಡಿ ಸರಣಿಯನ್ನು ಗೆದ್ದುಕೊಂಡಿತು.
ಪ್ರೇಕ್ಷಕರು ಆಕ್ರೋಶಕ್ಕೆ ತುತ್ತಾಗಿ ಮೈದಾನಕ್ಕೆ ಬಾಟಲಿ ಎಸೆದು ಪಂದ್ಯಕ್ಕೆ ಆಗಾಗ ತಡೆ ಒಡ್ಡಿದರು. ಆದರೆ, ದಕ್ಷಿಣ ಆಫ್ರಿಕಾ ರನ್ ಸರಾಸರಿಯಲ್ಲಿ ಉತ್ತಮ ಅಂತರ ಕಾಯ್ದುಕೊಂಡು 17.1 ಓವರ್ ಗಳಲ್ಲಿ 96/4 ಗಳಿಸಿ 6 ವಿಕೆಟ್ ಗಳಿಂದ ಪಂದ್ಯ ತನ್ನದಾಗಿಸಿಕೊಂಡಿತು. ಈ ಮೂಲಕ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-0 ಮುನ್ನಡೆ ಪಡೆದುಕೊಂಡಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಕೋಲ್ಕತ್ತಾದಲ್ಲಿ ಅಕ್ಟೋಬರ್ 08 ರಂದು ನಡೆಯಲಿದೆ.

ಮೊದಲ ಪಂದ್ಯದ ಶತಕ ವೀರ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಉತ್ತಮ ಆರಂಭ ಒದಗಿಸಿದರೂ ಅನಗತ್ಯ ರನ್ ಕದಿಯುವ ಆತುರದಲ್ಲಿ ರನೌಟ್ ಗಳ ಮೂಲಕ ವಿಕೆಟ್ ಕಳೆದುಕೊಂಡು ಧೋನಿ ಪಡೆ ಸಂಕಷ್ಟಕ್ಕೆ ಒಳಗಾಯಿತು.
ಮೊದಲ 23 ಎಸೆತಗಳಲ್ಲಿ 28 ರನ್ ಗಳಿಸಿದ್ದ ಟೀಂ ಇಂಡಿಯಾ ಮುಂದಿನ 20 ರನ್ ಕಲೆ ಹಾಕುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮ 22 ರನ್, ಧವನ್ 11 ರನ್ ಗಳಿಸಿದ್ದು ಬಿಟ್ಟರೆ 22 ರನ್ ಗಳಿಸಿ ಸುರೇಶ್ ರೈನಾ ಹಾಗೂ ಅಶ್ವಿನ್ 11 ರನ್ ಗಳಿಸಿ ಪ್ರತಿರೋಧ ಒಡ್ಡಿದರು.
ದಕ್ಷಿಣ ಆಫ್ರಿಕಾ ಪರ ಆಲ್ಬಿ ಮಾರ್ಕೆಲ್ 3, ಮೊರಿಸ್ ಹಾಗೂ ಇಮ್ರಾನ್ ತಾಹೀರ್ ತಲಾ 2 ವಿಕೆಟ್ ಪಡೆದು ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಎರಡು ಅನಗತ್ಯ ರನೌಟ್ ಗಳು ಭಾರತಕ್ಕೆ ಮುಳುವಾಯಿತು.

ಪ್ರೇಕ್ಷಕರ ಆಕ್ರೋಶ: 93 ರನ್ ಗೆಲುವಿನ ಗುರಿ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾಕ್ಕೆ ಎಬಿ ವಿಲೆಯರ್ಸ್ ಮತ್ತೊಮ್ಮೆ ಉತ್ತಮ ಆರಂಭ ಒದಗಿಸಿದರು. ಆದರೆ, ಆರ್ ಅಶ್ವಿನ್ ಮೂರು ವಿಕೆಟ್(3/24) ಕಿತ್ತು ಟೀಂ ಇಂಡಿಯಾಕ್ಕೆ ಹುರುಪು ತುಂಬಿದರು.
ಅದರೆ, 11 ಓವರ್ ಆಗಿದ್ದಾಗ ಪ್ರೇಕ್ಷಕರು ಮೈದಾನಕ್ಕೆ ಬಾಟಲಿ ಎಸೆದು ಭಾರತದ ಕಳಪೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ದಕ್ಷಿಣ ಆಫ್ರಿಕಾ 64/3 ರನ್ ಸ್ಕೋರ್ ಮಾಡಿ ಡಕ್ ವರ್ತ್ ಲೂಯಿಸ್ ನಿಯಮ ಪ್ರಕಾರ 17ರನ್ ಹೆಚ್ಚು ಗಳಿಸಿ ಸುಸ್ಥಿತಿಯಲ್ಲಿತ್ತು.
ಅದರೆ, ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಕೊನೆಯದಾಗಿ 13 ಓವರ್ ಮುಗಿದಾಗ 70/3 ಸ್ಕೋರ್ ಆಗಿದ್ದಾಗ ಪಂದ್ಯ ಮತ್ತೆ ಸ್ಥಗಿತಗೊಂಡಿತು. ಡಿ/ಎಲ್ ಪ್ರಕಾರ ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ 15 ರನ್ ಮುಂದಿದೆ. 17.1 ಓವರ್ ಗಳಲ್ಲಿ 96/4 ಗಳಿಸಿ ಗೆಲುವಿನ ನಗೆ ಬೀರಿದೆ. ಜೆಪಿ ಡುಮಿನಿ ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವಿನ ರನ್ ಗಳಿಸಿದರು.
ಭಾರತದ ಎರಡನೇ ಅತಿ ಕಳಪೆ ಪ್ರದರ್ಶನ ಇದಾಗಿದೆ. ಈ ಹಿಂದೆ 2008 ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 74 ಸ್ಕೋರಿಗೆ ಸರ್ವಪತನ ಕಂಡಿತ್ತು. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications