2ನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ಭಾರತದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಮೊದಲನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಯಶಸ್ವಿಯಾಗಿ ಅಂತ್ಯವಾಗಿದ್ದು ಭಾರತದ ವಿರುದ್ಧ ಫೈನಲ್ ಪಂದ್ಯವನ್ನು ಗೆದ್ದ ನ್ಯೂಜಿಲೆಂಡ್ ಚಾಂಪಿಯನ್ ಪಟ್ಟಕ್ಕೇರಿದೆ. ಎರಡು ವರ್ಷಗಳ ಕಾಲ ನಡೆದ ಈ ಟೂರ್ನಿಯಲ್ಲಿ ಆರಂಭದಿಂದಲೂ ಭಾರತ ಮುನ್ನಡೆಯನ್ನು ಕಾಯ್ದುಕೊಂಡು ಬಂದಿತ್ತು. ಈ ಮೂಲಕ ಅರ್ಹವಾಗಿಯೇ ಫೈನಲ್ ಪ್ರವೇಶವನ್ನು ಪಡೆದುಕೊಂಡಿತ್ತು. ಆದರೆ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ ಕಾರಣ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾವನ್ನು ನ್ಯೂಜಿಲೆಂಡ್ ಬಳಗ 8 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಸೋಲಿಸಿತ್ತು. ಆದರೆ ಈಗ ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯಗಳ ಆರಂಭಕ್ಕೆ ದಿನಗಣನೆ ಶುರುವಾಗಿದೆ. 2023ರಲ್ಲಿ ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ನಡೆಯಲಿದೆ.
ಸದ್ಯ ಭಾರತದ ಫ್ಯೂಚರ್ ಟೂರ್ ಪ್ರೋಗ್ರಾಮ್(ಎಫ್‌ಟಿಪಿ) ಪ್ರಕಾರ ಭಾರತ ಒಟ್ಟು ಆರು ಟೆಸ್ಟ್ ಸರಣಿಗಳು ಈ ಚಾಂಪಿಯನ್‌ಶಿಪ್‌ನ ಹಾದಿಯಲ್ಲಿ ನಿಗದಿಯಾಗಿವೆ. ಇದರಲ್ಲಿ ಮೂರು ತವರಿನಲ್ಲಿ ನಡೆಯುವ ಸರಣಿಗಳಾದರೆ ಮೂರು ವಿದೇಶದಲ್ಲಿ ನಡೆಯುವ ಸರಣಿಗಳಾಗಿದೆ.
ಹಾಗಾದರೆ ಭಾರತದ ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಭಿಯಾನ ಹೇಗಿರಲಿದೆ? ಮುಂದೆ ಓದಿ

ಇಂಗ್ಲೆಂಡ್ ಪ್ರವಾಸದಿಂದಲೇ ಆರಂಭ
ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿಯನ್ನು ಇಂಗ್ಲೆಂಡ್‌ನಿಂದಲೇ ಆರಂಭಿಸಲಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆಗಸ್ಟ್ ತಿಂಗಳಿನಿಂದ ಆರಂಭವಾಗುವ ಐದು ಪಂದ್ಯಗಳ ಸರಣಿ ಭಾರತಕ್ಕೆ ಮೊದಲ ಸವಾಲಾಗಿದೆ. ಆಗಸ್ಟ್ 4ರಿಂದ ಆರಂಭವಾಗುವ ಈ ಸರಣಿ ಸೆಪ್ಟೆಂಬರ್ 14ರ ವರೆಗೆ ನಡೆಯಲಿದೆ.
* ಆಗಸ್ಟ್ 4-8: ಇಂಗ್ಲೆಂಡ್ ವಿರುದ್ಧ ಭಾರತ, ಮೊದಲ ಟೆಸ್ಟ್, ಟ್ರೆಂಟ್ ಬ್ರಿಡ್ಜ್
* ಆಗಸ್ಟ್ 12-16: ಇಂಗ್ಲೆಂಡ್ ವಿರುದ್ಧ ಭಾರತ, ಎರಡನೇ ಟೆಸ್ಟ್, ಲಾರ್ಡ್ಸ್
* ಆಗಸ್ಟ್ 25-29: ಇಂಗ್ಲೆಂಡ್ ವಿರುದ್ಧ ಭಾರತ, ಮೂರನೇ ಟೆಸ್ಟ್, ಹೆಡಿಂಗ್ಲಿ
* ಸೆಪ್ಟೆಂಬರ್ 2-6: ಇಂಗ್ಲೆಂಡ್ ವಿರುದ್ಧ ಭಾರತ, ನಾಲ್ಕನೇ ಟೆಸ್ಟ್, ಕೆನ್ನಿಂಗ್ಟನ್ ಓವಲ್
* ಸೆಪ್ಟೆಂಬರ್ 10-14: ಇಂಗ್ಲೆಂಡ್ ವಿರುದ್ಧ ಭಾರತ, ಐದನೇ ಟೆಸ್ಟ್, ಓಲ್ಡ್ ಟ್ರಾಫರ್ಡ್

ನ್ಯೂಜಿಲೆಂಡ್ ತಂಡದ ಭಾರತ ಪ್ರವಾಸ-2021
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ಅನುಭವಿಸಿದ ಹಿನ್ನೆಡೆಗೆ ತಿರುಗೇಟು ನೀಡಲು ಉತ್ತಮ ಅವಕಾಶವಿದೆ. ಈ ವರ್ಷ ನ್ಯೂಜಿಲೆಂಡ್ ತಂಡ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಲಿದೆ. ನವೆಂಬರ್ ತಿಂಗಳಿನಲ್ಲಿ ಈ ಸರಣಿ ಆಯೋಜನೆಯಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಟಿ20 ವಿಶ್ವಕಪ್‌ನ ಬೆನ್ನಿಗೆ ಈ ಸರಣಿ ನಡೆಯುವ ಸಾಧ್ಯತೆಯಿದೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ 2021/22
ಭಾರತ ದಕ್ಷಿಣ ಆಫ್ರಿಕಾಗೆ ಪ್ರವಾಸ ತೆರಳಿ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು 2021ರ ಡಿಸೆಂಬರ್ ಹಾಗೂ 2022ರ ಜನವರಿ ತಿಂಗಳ ಅವಧಿಯಲ್ಲಿ ಈ ಸರಣಿ ಆಯೋಜನೆಯಾಗಲಿದೆ.

ಶ್ರೀಲಂಕಾ ತಂಡದ ಭಾರತ ಪ್ರವಾಸ
ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ಭಾರತ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಭಾಗಿಯಾಗಲಿದೆ. ಶ್ರೀಲಂಕಾ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು ಇದರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಮೂರು ಪಂದ್ಯಗಳ ಟೆಸ್ಟ್ ಸರಣಿಯೂ ಕೂಡಿದೆ. ಈ ಟೆಸ್ಟ್ ಸರಣಿಯ ಜೊತೆಗೆ 3 ಪಂದ್ಯಗಳ ಟಿ20 ಸರಣಿ ಕೂಡ ನಡೆಯಲಿದೆ. 2022ರ ಆವೃತ್ತಿಯ ಐಪಿಎಲ್‌ಗೂ ಮುನ್ನ ಈ ಸರಣಿ ಆಯೋಜನೆಯಾಗುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸ
2022ರಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಪ್ರವಾಸ ಕೈಗೊಂಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯವನ್ನು ಆಡಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುವ ಈ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳು ಇರಲಿವೆ. ಇದು ಮುಂದಿನ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ.

ಬಾಂಗ್ಲಾದೇಶಕ್ಕೆ ಭಾರತ ಪ್ರವಾಸ
ಈಗಿನ ವೇಳಾಪಟ್ಟಿಯ ಪ್ರಕಾರ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಸರಣಿಯನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ಈ ಸರಣಿ ಆಯೋಜನೆಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications