ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕವನ್ನು ಬಾರಿಸುವುದು ಸುಲಭದ ಸಾಧನೆಯಲ್ಲ. ಅದಕ್ಕೆ ಸಾಕಷ್ಟು ತಾಳ್ಮೆ ಹಾಗೂ ಕೌಶಲ್ಯದ ಅಗತ್ಯವಿದೆ. ಯಾವುದೇ ಮಾದರಿಯಲ್ಲಾದರೂ ಶತಕದ ಸಾಧನೆ ಮಾಡುವುದು ಅದು ದೊಡ್ಡ ಸಾಧನೆಯೇ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾರಿಸುವ ಪ್ರತಿ ಶತಕಕ್ಕೂ ಅದರದ್ದೇ ಆದ ಘನತೆಯಿದೆ, ಮೌಲ್ಯವಿದೆ. ಹಾಗಾಗಿಯೇ ಸಾಕಷ್ಟು ಕ್ರಿಕೆಟಿಗರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸುವುದು ಅತ್ಯುತ್ತಮ ಸಾಧನೆ ಎಂದು ಬಣ್ಣಿಸುತ್ತಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇನ್ನು ಕೂಡ ಸಾಕಷ್ಟು ಸ್ಟಾರ್ ಆಟಗಾರರು ಶತಕದ ಸಾಧನೆ ಮಾಡಿಲ್ಲ. ಆದರೆ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಕೆಲ ಆಟಗಾರರು ಬೌಲರ್‌ಗಳು ಟೆಸ್ಟ್ ಮಾದರಿಯಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಭಾರತೀಯ ಬೌಲರ್‌ಗಳಾದ ಅನಿಲ್ ಕುಂಬ್ಳೆ, ಅಜಿತ್ ಅಗರ್ಕರ್ ಹಾಗೂ ಹರ್ಭಜನ್ ಸಿಂಗ್ ಕೂಡ ಈ ಸಾಧನೆ ಮಾಡಿದ ಆಟಗಾರರು. ಭಾರತೀಯ ಕ್ರಿಕೆಟ್ ಅಭಿಮಾನಿಗಳಾಗಿ ಈ ಮಾಹಿತಿ ನಿಮಗೆ ಅರಿವಿನಲ್ಲಿರುತ್ತದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಕೆಲ ಬೌಲರ್‌ಗಳು ಟೆಸ್ಟ್ ಮಾದರಿಯಲ್ಲಿ ಶತಕ ಸಿಡಿಸಿದ್ದಾರೆ. ಈ ಬೌಲರ್‌ಗಳು ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದಾರೆ ಎಂಬುದು ನಿಮಗೆ ತಿಳಿದರೆ ಖಂಡಿತಾ ಅಚ್ಚರಿ ಪಡುವಿರಿ. ಹಾಗಾದರೆ ಆ ಬೌಲರ್‌ಗಳು ಯಾರು? ಮುಂದೆ ಓದಿ..

ಶ್ರೀಲಂಕಾದ ಮಾಜಿ ವೇಗದ ಬೌಲರ್ ಚಮಿಂಡಾ ವಾಸ್ ಟೆಸ್ಟ್ ಮಾದರಿಯಲ್ಲಿ ಶತಕ ಸಿಡಿಸಿದ ಸಾಧನೆ ಮಾಡಿದ ವೇಗದ ಬೌಲರ್. 2007ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಚಮಿಂಡಾ ವಾಸ್ ಭರ್ಜರಿ ಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶದ ವಿರುದ್ಧ ಇನ್ನಿಂಗ್ಸ್ ಮತ್ತು 234 ರನ್‌ಗಳ ಅಂತರದಿಂದ ಗೆದ್ದುಕೊಂಡಿತು.
ಇನ್ನು ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಜಾನ್ಸನ್ ಹೆಸರಿನಲ್ಲಿಯೂ ಒಂದು ಟೆಸ್ಟ್ ಶತಕವಿದೆ ಎಂದರೆ ನೀವು ನಂಬುತ್ತೀರಾ! ಬೌಲಿಂಗ್‌ನಲ್ಲಿ ಯಾವಾಗಲೂ ಆಕ್ರಮಣಕಾರಿ ಮನೋಭಾವ ಹೊಂದಿದ್ದ ಜಾನ್ಸನ್ ಸ್ಲೆಡ್ಜಿಂಗ್ ಹಾಗೂ ತೀಕ್ಷ್ಣ ದಾಳಿಗೆ ಖ್ಯಾತರು. ಅದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಜಾನ್ಸನ್ ಕೂಡ ಒಂದು ಶತಕವನ್ನು ಬಾರಿಸಿದ್ದಾರೆ. 2009ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಾನ್ಸನ್ ಈ ಸಾಧನೆ ಮಾಡಿದ್ದಾರೆ. ಆದರೆ ಈ ಪಂದ್ಯವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಹಾಗೂ 20 ರನ್‌ಗಳ ಅಂತರದಿಂದ ಸೋತಿತ್ತು.
ಈ ಪಟ್ಟಿಯಲ್ಲಿ ಇಬ್ಬರು ಬೌಂಗ್ಲಾದೇಶದ ಬೌಲರ್‌ಗಳು ಕಾಣಿಸಿಕೊಂಡಿದ್ದಾರೆ. ಮೊದಲನೆಯದಾಗಿ ಬಾಂಗ್ಲಾದೇಶದ ಸ್ಪಿನ್ನರ್ ಮೊಹಮ್ಮದ್ ರಫೀಕ್ 2004ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಅವೇ ಪಂದ್ಯದಲ್ಲಿ 111 ರನ್ ಬಾರಿಸಿ ಮಿಂಚಿದ್ದರು. ಆ ಪಂದ್ಯದಲ್ಲಿ ರಫೀಕ್ ಅವರ ಬೌಲಿಂಗ್ ಸಾಧನೆಯಿಂದಾಗಿ ಪಂದ್ಯವನ್ನು ಬಾಂಗ್ಲಾದೇಶ ಡ್ರಾ ಮಾಡಿಕೊಂಡಿತ್ತು.
ಈ ಪಟ್ಟಿಯಲ್ಲಿರುವ ಮತ್ತೋರ್ವ ಬೌಲರ್ ಸೋಹಗ್ ಗಜಿ. ಬಾಂಗ್ಲಾದೇಶದ ಈ ಬೌಲರ್ ಟೆಸ್ಟ್ ಕ್ರಿಕೆಟ್‌ನ ಅಪರೂಪದ ದಾಖಲೆಯೊಂದನ್ನು ಕೂಡ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಒಂದೇ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶೇಷ ದಾಖಲೆ ಬರೆದಿದ್ದಾರೆ ಸೋಹಗ್ ಗಜಿ. 2013ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಜಹುರ್ ಅಹ್ಮದ್ ಚಧರಿ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿದ್ದಾರೆ ಸೋಹಗ್ ಗಜಿ.