IND vs AUS: ಆಸೀಸ್ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ರಣಜಿ ಟ್ರೋಫಿ ಆಡಲೇಬೇಕಾದ ನಾಲ್ವರು ಪ್ರಮುಖ ಆಟಗಾರರು

2023ರ ಫೆಬ್ರವರಿಯಲ್ಲಿ ಭಾರತ ತಂಡ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸಲಿದೆ. ಫೆಬ್ರವರಿ 9ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
ರೋಹಿತ್ ಶರ್ಮಾ ನಾಯಕತ್ವ ಭಾರತ ತಂಡಕ್ಕೆ ಈ ಟೆಸ್ಟ್ ಸರಣಿಯು ಅತ್ಯಂತ ನಿರ್ಣಾಯಕವಾಗಿದ್ದು, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಲು ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 3-0 ಅಥವಾ 3-1 ಅಂತರದಲ್ಲಿ ಗೆಲ್ಲಬೇಕಾಗಿದೆ.
ಭಾರತ ಟೆಸ್ಟ್ ತಂಡವು ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕೋಷ್ಟಕದಲ್ಲಿ 68.9 ಗೆಲುವಿನ ಶೇಕಡಾವಾರು ಮತ್ತು 14 ಟೆಸ್ಟ್ ಪಂದ್ಯಗಳಿಂದ ಎಂಟು ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ.

ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ
ಸದ್ಯ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಇದಾದ ನಂತರ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕಿವೀಸ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮುನ್ನ ಶ್ರೀಲಂಕಾ ತಂಡಕ್ಕೆ ಆತಿಥ್ಯ ವಹಿಸಿದ್ದ ಭಾರತ ತಂಡ, ಎರಡು ಸರಣಿಗಳನ್ನು ಗೆದ್ದಿತ್ತು.
2023ರ ಆರಂಭದಿಂದಲೂ ಭಾರತ ತಂಡವು ನಿರಂತರವಾಗಿ ವೈಟ್-ಬಾಲ್ ಕ್ರಿಕೆಟ್ ಆಡುತ್ತಿರುವುದರಿಂದ, ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೂ ಮುನ್ನ, ಕೆಲವು ಮೊದಲ ಆಯ್ಕೆಯ ಭಾರತೀಯ ಆಟಗಾರರು ಕೆಂಪು ಚೆಂಡಿನ ಕ್ರಿಕೆಟ್ ಆಡಬೇಕಾಗಿದೆ. ಸದ್ಯ ಇದೀಗ ರಣಜಿ ಟ್ರೋಫಿ ನಡೆಯುತ್ತಿದ್ದು, ಕನಿಷ್ಠ ಒಂದು ರಣಜಿ ಪಂದ್ಯವನ್ನು ಆಡಿದರೆ, ಅದು ಭಾರತ ತಂಡಕ್ಕೆ ಸಹಾಯಕವಾಗಬಹುದು. ಆ ನಾಲ್ಕು ಆಟಗಾರರ ಪಟ್ಟಿ ಇಲ್ಲಿದೆ.

ಕೆಎಲ್ ರಾಹುಲ್- ಕರ್ನಾಟಕ
ಜನವರಿ 24ರಂದು ನಡೆಯಲಿರುವ ಜಾರ್ಖಂಡ್ ವಿರುದ್ಧ ಕರ್ನಾಟಕ ತಂಡ ಕೊನೆಯ ಗ್ರೂಪ್ ಸಿ ಪಂದ್ಯವನ್ನು ಆಡಲಿದೆ. ಆದರೆ, ಮದುವೆ ತಯಾರಿಯಲ್ಲಿರುವ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಆಡುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ. ಭಾರತದ ಈ ಸ್ಟಾರ್ ಬ್ಯಾಟ್ಸ್‌ಮನ್ ಸೋಮವಾರ, ಜನವರಿ 23ರಂದು ತನ್ನ ಗೆಳತಿ ಅಥಿಯಾ ಶೆಟ್ಟಿಯನ್ನು ಮದುವೆಯಾಗುತ್ತಿದ್ದಾರೆ.
ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ ಉಪನಾಯಕರಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ರೋಹಿತ್ ಶರ್ಮಾ ಜೊತೆ ಭಾರತದ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಸದ್ಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಮತ್ತು ಟಿ20 ಸರಣಿಯ ಭಾಗವಾಗಿಲ್ಲದ 30 ವರ್ಷದ ಕೆಎಲ್ ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸ ನಡೆಸಲಿದ್ದಾರೆ.
ಕೆಎಲ್ ರಾಹುಲ್ ಪ್ರತಿನಿಧಿಸುವ ಕರ್ನಾಟಕ ತಂಡ ಈಗಾಗಲೇ ರಣಜಿ ಟ್ರೋಫಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದ್ದು, ಜನವರಿ 31ರಿಂದ ಫೆಬ್ರವರಿ 4ರವರೆಗೆ ನಡೆಯಲಿರುವ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡುವ ಸಾಧ್ಯತೆ ಇದೆ.

ಶ್ರೇಯಸ್ ಅಯ್ಯರ್- ಮುಂಬೈ
ಕೆಎಲ್ ರಾಹುಲ್ ಅವರಂತೆ ಶ್ರೇಯಸ್ ಅಯ್ಯರ್ ಕೂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಬೆನ್ನುನೋವಿನಿಂದ ಶ್ರೇಯಸ್ ಅಯ್ಯರ್ ಏಕದಿನ ಸರಣಿಯಿಂದ ಹೊರಗುಳಿದರು.
ತನ್ನ ದೇಶೀಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸುವ ಮುಂಬೈನ ಕೊನೆಯ ರಣಜಿ ಟ್ರೋಫಿ ಗುಂಪಿನ ಪಂದ್ಯವನ್ನು ಆಡಲು ಶ್ರೇಯಸ್ ಅಯ್ಯರ್‌ಗೆ ಅಸಾಧ್ಯವೆನಿಸಿದ್ದರೂ, ಮುಂಬೈ ತಂಡ ನಾಕೌಟ್ ಹಂತಕ್ಕೆ ಅರ್ಹತೆ ಪಡೆದರೆ, ಜನವರಿ 31ರಂದು ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಆಡಬಹುದು.
ಗಾಯಾಳು ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಅತಿ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ. ಖಂಡಿತವಾಗಿಯೂ, 28 ವರ್ಷದ ಶ್ರೇಯಸ್ ಅಯ್ಯರ್‌ಗೆ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ.

ವಿರಾಟ್ ಕೊಹ್ಲಿ- ದೆಹಲಿ
ಸದ್ಯ ಆಧುನಿಕ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿ ಮುಂದುವರೆಯುತ್ತಿದ್ದಾರೆ. ಅದೇ ಫಾರ್ಮ್ ಅನ್ನು ಟೆಸ್ಟ್ ಸರಣಿಗೂ ಮುಂದುವರೆಸಬೇಕಿದೆ. ಏಕೆಂದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ವರ್ಷಗಳೇ ಕಳೆದಿವೆ.
ಮುಂದಿನ ತಿಂಗಳು ಭಾರತ ತಂಡ ತವರಿನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಬೇಕಾದರೆ, ಬ್ಯಾಟಿಂಗ್ ವಿಭಾಗಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿಯ ಫಾರ್ಮ್ ಮತ್ತು ಅನುಭವವು ಆತಿಥೇಯ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೂ ಮುನ್ನ ರಣಜಿ ಟ್ರೋಫಿಯಲ್ಲಿ ದೆಹಲಿ ತಂಡದ ಪರ ಆಡಲು ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಆಡಬಾರದೆಂದು ಹಲವು ಕ್ರಿಕೆಟ್ ಪಂಡಿತರು ಸಲಹೆ ನೀಡಿದ್ದಾರೆ.

ರವೀಂದ್ರ ಜಡೇಜಾ- ಸೌರಾಷ್ಟ್ರ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ರಣಜಿ ಟ್ರೋಫಿ ಪಂದ್ಯ ಆಡಲಿರುವ ಪಟ್ಟಿಯಲ್ಲಿರುವ ಏಕೈಕ ಹೆಸರು ರವೀಂದ್ರ ಜಡೇಜಾ ಆಗಿದ್ದಾರೆ.
ಕಳೆದ ವರ್ಷದ ಆಗಸ್ಟ್‌ನಿಂದ ತಂಡದಿಂದ ಹೊರಗುಳಿದಿರುವ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ತಮ್ಮ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ. ಮಂಗಳವಾರ, ಜನವರಿ 24ರಂದು ತಮಿಳುನಾಡು ವಿರುದ್ಧದ ಕೊನೆಯ ಪಂದ್ಯಕ್ಕಾಗಿ ಸೌರಾಷ್ಟ್ರ ತಂಡದ ಪರ ಆಡಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಭಾರತೀಯ ತಂಡದಲ್ಲಿ ರವೀಂದ್ರ ಜಡೇಜಾ ಆಯ್ಕೆಯಾಗಿದ್ದರೂ, ಅವರ ಲಭ್ಯತೆಯು ಫಿಟ್‌ನೆಸ್ ಮೇಲೆ ನಿಂತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications