ನಾಲ್ಕನೇ ಏಕದಿನ: ವಿರಾಟ್ ಕೊಹ್ಲಿ ಪಡೆಗೆ ಅಚ್ಚರಿಯ ಸೋಲು
ಆ್ಯಂಟಿಗುವಾ, ಜುಲೈ 3: ವೇಗಿ ಜೇಸನ್ ಹೋಲ್ಡರ್ ಅವರ ಕಟ್ಟುನಿಟ್ಟಾದ ಬೌಲಿಂಗ್ ನಿಂದಾಗಿ (9.4 ಓವರ್, 2 ಮೇಡನ್, 27 ರನ್, 5 ವಿಕೆಟ್) ಭಾರತೀಯ ಕ್ರಿಕೆಟ್ ತಂಡ, ಭಾರತೀಯ ಕಾಲಮಾನ ಸೋಮವಾರ ಬೆಳಗಿನ ಜಾವ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 19 ರನ್ ಗಳ ಸೋಲು ಕಂಡಿದೆ.
ಧೋನಿಯವರ (54 ರನ್, 114 ಎಸೆತ, 1 ಬೌಂಡರಿ) ಮಂದಗತಿಯ ಬ್ಯಾಟಿಂಗ್ ಕೂಡ ತಂಡದ ಗೆಲುವಿಗೆ ಮುಳುವಾಗಿದ್ದು ವಿಪರ್ಯಾಸ. 108 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಧೋನಿ, ಏಕದಿನ ಪಂದ್ಯಗಳ ಮಾದರಿಯಲ್ಲಿ ಅತಿ ನಿಧಾನದ ಅರ್ಧಶತಕ ಗಳಿಸಿದ ಬ್ಯಾಟ್ಸ್ ಮನ್ ಎಂಬ ಕುಖ್ಯಾತಿಗೆ ಪಾತ್ರರಾದರು. ಅಲ್ಲದೆ, 2001ರಿಂದೀಚೆಗೆ ಇಂಥದ್ದೊಂದು ನಿಧಾನದ ಅರ್ಧಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್ ಮನ್ ಎಂದೆನಿಸಿದರು.
ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ, ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ, 49.4 ಓವರ್ ಗಳಲ್ಲಿ ಕೇವಲ 178 ರನ್ ಗಳಿಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಸೋತಿದ್ದರೂ, ಐದು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.(ಚಿತ್ರ ಕೃಪೆ : ಪಿಟಿಐ)

ಮೊದಲು ಬ್ಯಾಟ್ ಮಾಡುವ ನಿರ್ಧಾರ
ಪಂದ್ಯಕ್ಕೂ ಮೊದಲು ಟಾಸ್ ಗೆದ್ದಿದ್ದ ವೆಸ್ಟ್ ಇಂಡೀಸ್ ಪಡೆ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ, ಭಾರತೀಯ ವೇಗಿಗಳಾದ ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ (ತಲಾ 3 ವಿಕೆಟ್) ಅವರ ದಾಳಿಗೆ ನಲುಗಿತು. ಸ್ಪಿನ್ನರ್ ಕುಲಭೂಷಣ್ ಜಾಧವ್ ಕೂಡಾ ತನ್ನ ಕೈಚಳಕದಿಂದ ಎರಡು ವಿಕೆಟ್ ತೆಗೆದು ವಿಂಡೀಸ್ ಪಡೆಗೆ ಪೆಟ್ಟುಕೊಟ್ಟರು. ಇದೆಲ್ಲದರ ಪರಿಣಾಮವಾಗಿ, ವಿಂಡೀಸ್ ತಂಡ, 189 ರನ್ ಗಳಿಸಿತು.

ಶಿಖರ್ ಧವನ್ ಬೇಗನೇ ಪೆವಿಲಿಯನ್ ಗೆ
ಆನಂತರ, ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಅಚ್ಚರಿಯು ಕಾದಿತ್ತು. ಆರಂಭದಲ್ಲಿಯೇ ಶಿಖರ್ ಧವನ್ (5) ಅವರನ್ನು ಅಲಿಝಾರಿ ಜೋಸೆಫ್ ಔಟ್ ಮಾಡಿ ಆಚೆ ಕಳುಹಿಸಿದರು. ಆನಂತರ ವಿರಾಟ್ ಕೊಹ್ಲಿ (3) ಜೇಸನ್ ಹೋಲ್ಡರ್ ಗೆ ಬಲಿಯಾದರು.

ಧೋನಿ, ರಹಾನೆ ಅರ್ಧಶತಕದ ಜತೆಯಾಟ
ಆನಂತರ ಮತ್ತೆ ದಾಳಿಗಿಳಿದ ಅಲಿಝಾರಿ ಜೋಸೆಫ್, ದಿನೇಶ್ ಕಾರ್ತಿಕ್ (2) ಔಟ್ ಮಾಡಿದರು. ಆಗ ಇನಿಂಗ್ಸ್ ಭಾರ ಹೊತ್ತಿದ್ದು ಧೋನಿ ಹಾಗೂ ಕ್ರೀಸ್ ನಲ್ಲಿದ್ದ ಮತ್ತೊಬ್ಬ ಆರಂಭಿಕ ಅಜಿಂಕ್ಯ ರಹಾನೆ. ಈ ಜೋಡಿ, 4ನೇ ವಿಕೆಟ್ ಗೆ 54 ರನ್ ಪೇರಿಸಿತು. ಆದರೆ, 31ನೇ ಓವರ್ ನಲ್ಲಿ ಬಿಶೂ ಅವರು ರಹಾನೆ (60 ರನ್, 91 ಎಸೆತ, 7 ಬೌಂಡರಿ) ಅವರನ್ನು ಪೆವಿಲಿಯನ್ ಗೆ ಅಟ್ಟಿ ಈ ಜೋಡಿ ಮುರಿದರು.

ಮಂಕಾದ ಧೋನಿ
ಅಲ್ಲಿಂದ ಮುಂದಕ್ಕೆ ಭಾರತದ ವಿಕೆಟ್ ಗಳು ಸತತವಾಗಿ ಉರುಳುತ್ತಿದ್ದರೂ ಕ್ರೀಸ್ ಗೆ ಹೊಂದಿಕೊಂಡಿದ್ದ ಧೋನಿ, ಕೊಂಚ ಪ್ರಯತ್ನಿಸಿದ್ದರೆ ಪಂದ್ಯವನ್ನು ಗೆಲ್ಲಿಸಬಹುದಿತ್ತೇನೋ. ಆದರೆ, ವಿಕೆಟ್ ಉಳಿಸಿಕೊಂಡು ಆಡಲು ಮುುಂದಾದ ಧೋನಿ, ಕೊನೆಗೆ ಆ ಅವಕಾಶವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾದರು.

178 ರನ್ ಮೊತ್ತಕ್ಕೆ ಭಾರತ ಆಲೌಟ್
ಇಲ್ಲಿಂದ ಮುಂದಕ್ಕೆ ಮಿಂಚಿದ ಜೇಸನ್ ಹೋಲ್ಡರ್, ಹಾರ್ದಿಕ್ ಪಾಂಡ್ಯ (20), ರವೀಂದ್ರ ಜಡೇಜಾ (11), ಉಮೇಶ್ ಯಾದವ್ (0) ಹಾಗೂ ಅಂತಿಮ ಕ್ರಮಾಂಕದ ಮೊಹಮ್ಮದ್ ಶಮಿ (1) ವಿಕೆಟ್ ಉರುಳಿಸಿದರು. ಇನಿಂಗ್ಸ್ ನ ಅಂತಿಮ ಹಂತದವರೆಗೂ ಕ್ರೀಸ್ ನಲ್ಲಿದ್ದ ಧೋನಿ, ಕಾಕ್ ವಿಲಿಯಮ್ಸ್ ಅವರ ಬೌಲಿಂಗ್ ಗೆ ಬಲಿಯಾದರು.
ಅಂತಿಮವಾಗಿ, ಭಾರತ 178 ರನ್ ಗಳಿಗೆ ತನ್ನ ಇನಿಂಗ್ಸ್ ನ ಗಂಟು ಮೂಟೆ ಕಟ್ಟಿತು.

ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 50 ಓವರ್ ಗಳಿಗೆ 9 ವಿಕೆಟ್ ಗೆ 189 (ಎವಿನ್ ಲಿವೀಸ್ 35, ಕೈಲ್ ಹೋಪ್ 35; ಉಮೇಶ್ ಯಾದವ್ 36ಕ್ಕೆ 3, ಹಾರ್ದಿಕ್ ಪಾಂಡ್ಯ 40ಕ್ಕೆ 3).
ಭಾರತ 49.4 ಓವರ್ ಗಳಲ್ಲಿ 179 (ಅಜಿಂಕ್ಯ ರಹಾನೆ 60, ಧೋನಿ 54; ಜೇಸನ್ ಹೋಲ್ಡರ್ 27ಕ್ಕೆ 5, ಜೋಸೆಫ್ 46ಕ್ಕೆ 2).
ಪಂದ್ಯಶ್ರೇಷ್ಠ: ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications