ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ರನ್ ಬಾರಿಸಿ ಕೆಟ್ಟ ದಾಖಲೆ ಬರೆದಿರುವ 5 ತಂಡಗಳಿವು!

ಟಿ ಟ್ವೆಂಟಿ ಕ್ರಿಕೆಟ್ ಎಂದರೆ ಹೊಡಿ ಬಡಿ ಆಟ. ಕಡಿಮೆ ಎಸೆತಗಳಲ್ಲಿ ಹೆಚ್ಚು ಹೆಚ್ಚು ರನ್ ಹೊಳೆ ಹರಿಯುವ ಕ್ರಿಕೆಟ್ ಮಾದರಿಯಾಗಿರುವ ಟಿ ಟ್ವೆಂಟಿ ಕ್ರಿಕೆಟ್ ಎಂದರೆ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚುಮೆಚ್ಚು. ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಹೋಲಿಸಿಕೊಂಡರೆ ವೇಗವಾಗಿ ಮುಗಿಯುವ ಈ ಕ್ರಿಕೆಟ್ ಮಾದರಿಯಲ್ಲಿ ಹಲವಾರು ಪ್ರತಿಷ್ಠಿತ ಟೂರ್ನಿಗಳು ಕೂಡ ಆಯೋಜನೆಯಾಗಿವೆ. ಹಲವಾರು ಪ್ರಮುಖ ತಂಡಗಳ ನಡುವೆ ಆಗಾಗ ಟಿಟ್ವೆಂಟಿ ಸರಣಿಗಳು ಆಯೋಜನೆಯಾದರೆ, ಟಿ ಟ್ವೆಂಟಿ ಮಾದರಿಯಲ್ಲಿ ಐಸಿಸಿ ವಿಶ್ವಕಪ್ ಟೂರ್ನಿ ಕೂಡ ಜರುಗುತ್ತದೆ.
ಹೀಗೆ 2003ರಲ್ಲಿ ಹುಟ್ಟಿದ ಈ ಚುಟುಕು ಕ್ರಿಕೆಟ್ ಮಾದರಿ ಸದ್ಯ ಜನಪ್ರಿಯವಾಗಿದ್ದು, ಹಲವಾರು ಟಿ ಟ್ವೆಂಟಿ ಕ್ರಿಕೆಟ್ ಫ್ರಾಂಚೈಸಿ ಲೀಗ್‌ಗಳೂ ಸಹ ಆಯೋಜನೆಯಾಗಿವೆ. ಹೌದು, ಇತ್ತೀಚಿನ ದಿನಗಳಲ್ಲಿ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳ ಅಬ್ಬರ ಹೆಚ್ಚಾಗಿದ್ದು, ಈ ಟೂರ್ನಿಗಳಲ್ಲಿ ತಂಡಗಳು ಹರಿಸುವ ರನ್ ಹೊಳೆ ವೀಕ್ಷಿಸಲು ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಕಾತರರಾಗಿ ಕಾಯುತ್ತಿರುತ್ತಾರೆ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳೆಂದರೆ ಈ ಕಾಯುವಿಕೆ ತುಸು ಹೆಚ್ಚೇ ಇರುತ್ತದೆ ಎಂದರೆ ತಪ್ಪಾಗಲಾರದು. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ಒಳ್ಳೆಯ ರನ್ ಹೊಳೆ ಹರಿಯಲಿದ್ದು, ಈಗಾಗಲೇ ಹಲವಾರು ಪಂದ್ಯಗಳಲ್ಲಿ ರನ್ 200ರ ಗಡಿ ದಾಟಿದ ಉದಾಹರಣೆಗಳು ಕೂಡ ಇವೆ. ಅದೇ ರೀತಿ ಇದೇ ಜನಪ್ರಿಯ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯ ಕೆಲ ಪಂದ್ಯಗಳಲ್ಲಿ ತಂಡಗಳು ಅಲ್ಪ ಮೊತ್ತ ಕಲೆಹಾಕಿದ ಕೆಟ್ಟ ದಾಖಲೆಗಳು ಕೂಡ ಇವೆ.
ಹೀಗೆ ಐಪಿಎಲ್ ಇತಿಹಾಸದಲ್ಲಿ ದಾಖಲಾಗಿರುವ 5 ಕಡಿಮೆ ರನ್ ಮೊತ್ತದ ಇನ್ನಿಂಗ್ಸ್‌ನ ವಿವರ ಈ ಕೆಳಕಂಡಂತಿದೆ.

5. ಕೋಲ್ಕತ್ತ ನೈಟ್ ರೈಡರ್ಸ್
ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ನೀರಸ ಪ್ರದರ್ಶನವನ್ನು ನೀಡಿತ್ತು. 2 ಬಾರಿ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 2008ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಿಂತ ಕಳಪೆ ಪ್ರದರ್ಶನ ನೀಡಿದ್ದೇ ಹೆಚ್ಚು. ಇನ್ನು ಈ ಆವೃತ್ತಿಯಲ್ಲಿ ಇದೇ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಕೇವಲ 67 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕಲೆಹಾಕಿದ್ದ ಈ ಮೊತ್ತ ಐಪಿಎಲ್ ಇತಿಹಾಸದಲ್ಲಿ ತಂಡವೊಂದು ದಾಖಲಿಸಿದ ಐದನೇ ಕಡಿಮೆ ಮೊತ್ತ ಎನಿಸಿಕೊಂಡಿದೆ.

4. ಡೆಲ್ಲಿ ಡೇರ್‌ಡೆವಿಲ್ಸ್
2019ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡ ಡೆಲ್ಲಿ ಫ್ರಾಂಚೈಸಿ ಆ ಆವೃತ್ತಿಗೂ ಮುನ್ನ ಡೆಲ್ಲಿ ಡೇರ್‌ಡೆವಿಲ್ಸ್ ಎಂಬ ಹೆಸರನ್ನು ಹೊಂದಿತ್ತು. ಸದ್ಯ ಇತ್ತೀಚಿನ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿರುವ ಡೆಲ್ಲಿ ತಂಡ ಈ ಹಿಂದಿನ ಆವೃತ್ತಿಗಳಲ್ಲಿ ತೀರಾ ಕಳಪೆ ಪ್ರದರ್ಶನವನ್ನು ನೀಡಿರುವ ಸಾಕಷ್ಟು ಉದಾಹರಣೆಗಳಿವೆ. 2017ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ತಂಡ 67 ರನ್ ಕಲೆಹಾಕಿತ್ತು. ಈ ಮೊತ್ತ ಐಪಿಎಲ್ ಇತಿಹಾಸದಲ್ಲಿ ತಂಡವೊಂದು ದಾಖಲಿಸಿದ ನಾಲ್ಕನೇ ಕಡಿಮೆ ಮೊತ್ತ ಎನಿಸಿಕೊಂಡಿದೆ.

3. ಡೆಲ್ಲಿ ಡೇರ್‌ಡೆವಿಲ್ಸ್
ಮೊದಲೇ ಹೇಳಿದಂತೆ ಡೆಲ್ಲಿ ಫ್ರಾಂಚೈಸಿ ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ತೀರಾ ಕೆಟ್ಟ ಪ್ರದರ್ಶನವನ್ನು ನೀಡಿದ್ದು, 66 ರನ್‌ಗಳ ಅಲ್ಪ ಮೊತ್ತ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ. 2017ರ ಐಪಿಎಲ್ ಆವೃತ್ತಿಯ ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 66 ರನ್ ಕಲೆಹಾಕಿ ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತ ಗಳಿಸಿದ ಮೂರನೇ ತಂಡ ಎಂದೂ ಕೂಡ ಎನಿಸಿಕೊಂಡಿದೆ.

2. ರಾಜಸ್ಥಾನ್ ರಾಯಲ್ಸ್
2008ರಲ್ಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದ ರಾಜಸ್ಥಾನ್ ರಾಯಲ್ಸ್ 2009ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 58 ರನ್ ಕಲೆ ಹಾಕುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತ ಕಲೆಹಾಕಿದ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

1. ರಾಯಲ್ ಚಾಲೆಂಜರ್ಸ್ ಬೆಂಗಳೂರು
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಹಾಗೂ ಅತಿ ಕಡಿಮೆ ರನ್ ಕಲೆಹಾಕಿರುವ ತಂಡ ಎಂಬ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೆಸರಿನಲ್ಲಿ ಹೊಂದಿದೆ. 2017ರಲ್ಲಿ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 49 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ ಕಡಿಮೆ ಮೊತ್ತ ದಾಖಲಿಸಿರುವ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications