ಇಂಗ್ಲೆಂಡ್ ಪ್ರವಾಸ ಕೈಗೊಂಡು ಐತಿಹಾಸಿಕ ಹಿನ್ನಲೆಯ ಆಶಸ್ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿರುವ ಆಸ್ಟ್ರೇಲಿಯಾ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದರೆ ಮೂರನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿದೆ. ಈ ಮೂಲಕ ರೋಚಕ ಕದನದಲ್ಲಿ ಇಂಗ್ಲೆಂಡ್ ತಂಡ ವಿಜಯ ಸಾಧಿಸಿ ಸರಣಿಯಲ್ಲಿನ ಹಿನ್ನಡೆಯ ಅಂತರವನ್ನು ಕಡಿಮೆಗೊಳಿಸಿದೆ.
ಸರಣಿಯ ಮೊದಲ ಎರಡು ಪಂದ್ಯಗಳಂತೆಯೇ ಈ ಪಂದ್ಯ ಕೂಡ ತೀವ್ರ ಪೈಪೊಟಿಯಿಂದ ಕೂಡಿತ್ತು. ಕೊನೆಯ ದಿನಕ್ಕೆ ಪಂದ್ಯ ಕಾಲಿಡದಿದ್ದರೂ ರೋಚಕತೆಗೇನೂ ಕಡಿಮೆಯಿರಲಿಲ್ಲ. ಕೊನೆಯ ಕ್ಷಣದವರೆಗೂ ಎರಡು ತಂಡಗಳಿಗೂ ಗೆಲುವಿನ ಅವಕಾಶ ಇದ್ದ ಕಾರಣ ಅಭಿಮಾನಿಗಳು ಸಾಕಷ್ಟು ಕಾತರದಿಂದ ನೋಡುವಂತೆ ಮಾಡಿತ್ತು ಈ ಪಂದ್ಯ. ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಅಂತಿಮವಾಗಿ ಗೆಲುವಿನ ನಗೆ ಬೀರಿತ್ತು.

ಇನ್ನು ಈ ಪಂದ್ಯದಲ್ಲಿ ಕೆಲ ಪ್ರಮುಖ ದಾಖಲೆಗಳು ಪತನವಾಗಿದ್ದು ಹೊಸ ದಾಖಲೆಗಳು ಸೃಷ್ಟಿಯಾಗಿದೆ. ಈ ಪಂದ್ಯದಲ್ಲಿ ದಾಖಲಾದ ಐದು ಪ್ರಮುಖ ದಾಖಲೆಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ ಮುಂದೆ ಓದಿ..
ಆಶಸ್ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್‌ಗಳ ಪಟ್ಟಿಯಲ್ಲಿ(ವಿಕೆಟ್ ಕೀಪರ್ ಹೊರತುಪಡಿಸಿ) ಸ್ಟೀವ್ ಸ್ಮಿತ್ ಮೊದಲ ಸ್ಥಾನದಲ್ಲಿದಲ್ಲಿ ಇಂಗ್ಲೆಂಡ್‌ನ ಇಯಾನ್ ಬೋಥಮ್ ಜೊತೆಗೆ ಜಂಟಿಯಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಆಶಸ್ ಸರಣಿಯಲ್ಲಿ 54 ಕ್ಯಾಚ್‌ಗಳನ್ನು ಸ್ಮಿತ್ ಪಡೆದಿದ್ದು ಬೋಥಮ್ ಜೊತೆಗೆ ಈ ವಿಶೇಷ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇನ್ನು ಒಂದು ಕ್ಯಾಚ್ ಪಡೆದರೆ ಸಂಪೂತರ್ಣವಾಗಿ ಈ ದಾಖಲೆಯನ್ನು ತಮ್ಮ ಹೆಸರಗೆ ಬರೆದುಕೊಳ್ಳಲಿದ್ದಾರೆ ಸ್ಮಿತ್. ಅಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ ಐದು ಕ್ಯಾಚ್‌ಗಳನ್ನು ಪಡೆಯುವ ಮೂಲಕ ಎರಡು ಬಾರಿ ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿಯೂ ಒಂದು ಇನ್ನಿಂಗ್ಸ್‌ನಲ್ಲಿ ಸ್ಮಿತ್ ಐದು ಕ್ಯಾಚ್ ಪಡೆದುಕೊಂಡಿದ್ದರು.
ಇನ್ನು ಇಂಗ್ಲೆಂಡ್‌ನ ವೇಗಿ ಆಲ್‌ರೌಂಡರ್ ಬ್ಯಾಟಿಂಗ್‌ನಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ಮಾರ್ಕ್ ವುಡ್ ಒಟ್ಟು 7 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇದರಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದಿರುವುದು ಕೂಡ ಸೇರಿದೆ. ಅಲ್ಲದೆ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಾರ್ಕ್ ವುಡ್ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.
ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮಾರ್ಕ್ ವುಡ್ 8 ಎಸೆತಗಳಲ್ಲಿ 24 ರನ್ ಬಾರಿಸಿದರೆ ಎರಡನೇ ಇನ್ನಿಂಗ್ಸ್‌ನಲ್ಲಿ 8 ಎಸೆತಗಳಲ್ಲಿ 16 ರನ್ ಬಾರಿಸಿದರು. ಅಂದರೆ ಈ ಪಂದ್ಯದಲ್ಲಿ ಅವರ ಒಟ್ಟಾರೆ ಸ್ಟ್ರೈಕ್‌ರೇಟ್ 250.00. ಇದು ಕನಿಷ್ಠ 15 ಎಸೆತಗಳನ್ನು ಎದುರಿಸಿದ ಬ್ಯಾಟರ್‌ಗಳ ಪೈಕಿ ಟೆಸ್ಟ್ ಕ್ರಿಕೆಟ್‌ನ ಇಇಹಾಸದಲ್ಲಿಯೇ ಒಂದು ಪಂದ್ಯದಲ್ಲಿನ ಅತಿ ಹೆಚ್ಚಿನ ಸ್ಟ್ರೈಕ್‌ರೇಟ್ ಎನಿಸಿಕೊಂಡಿದೆ. ಇದಕ್ಕೂ ಮುನ್ನ 1902ರಲ್ಲಿ ಆಸ್ಟ್ರೇಲಿಯಾದ ಬಿಲ್ ಹೊವೆಲ್ 218.75ರ ಸ್ಟ್ರೈಕ್‌ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದು ಈವರೆಗಿನ ದಾಖಲೆಯಾಗಿತ್ತು.
ಇನ್ನು ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 100ನೇ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ 100+ ಪಂದ್ಯಗಳಲ್ಲಿ ಆಡಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾದರು. ಈ ಮೂಲಕ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ 100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನು ಆಡಿದ ಅತಿ ಹೆಚ್ಚು ಆಟಗಾರರನ್ನು ಹೊಂದಿದಂತಾಗಿದೆ. ಸ್ಟೀವ್ ಸ್ಮಿತ್ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 16ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ಇದ್ದು 15 ಆಟಗಾರರ ನೂರಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದಾರೆ.
ಇನ್ನು ಇಂಗ್ಲೆಂಡ್ ಯುವ ಆಟಗಾರ ಹ್ಯಾರಿ ಬ್ರೂಕ್ ಅತ್ಯಂತ ಕಡಿಮೆ ಎಸೆತಗಳಲ್ಲಿ 1000 ರನ್‌ಗಳನ್ನು ಬಾರಿಸಿ ಟೆಸ್ಟ್ ಇತಿಹಾಸದಲ್ಲಿ ಪ್ರಮುಖ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೆಡಿಂಗ್ಲೆ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ತನ್ನ ಐದನೇ ಅರ್ಧ ಶತಕ ಪೂರ್ತಿಗೊಳಿಸಿದ ಬ್ರೂಕ್ ಟೆಸ್ಟ್ ಕ್ರಿಕೆಟ್‌ನಲ್ಇ 1058 ಎಸೆತಗಳಲ್ಲಿ 1000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ ನ್ಯೂಜಿಲೆಂಡ್‌ನ ಕಾಲಿನ್ ಡಿ ಗ್ರ್ಯಾಂಡ್‌ಹೊಮ್ಮೆ ಈ 1140 ಎಸೆತಗಳಲ್ಲಿ ಈ ದಾಖಲೆ ಬರೆದಿದ್ದರು.
ಆಸ್ಟ್ರೇಲಿಯಾ ನೀಡಿದ 251 ರನ್‌ಗಳ ಗುರಿಯನ್ನು ಇಂಗ್ಲೆಂಡ್ ತಂಡ ಬೆನ್ನಟ್ಟಿ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ತಮ್ಮ ಹೆಸರಿಗೆ ವಿಶೇಷ ದಾಖಲೆಯೊಂದನ್ನು ಬರೆದುಕೊಂಡಿದ್ದಾರೆ. ಅತಿ ಹೆಚ್ಚು ಪಂದ್ಯಗಳಲ್ಲಿ 250ಕ್ಕೂ ಅಧಿಕ ರನ್‌ಗಳನ್ನು ಬೆನ್ನಟ್ಟಿದ ನಾಯಕ ಎಂಬ ದಾಖಲೆ ಈಗ ಸ್ಟೋಕ್ಸ್ ಪಾಲಾಗಿದೆ.
ಬೆನ್ ಸ್ಟೋಕ್ಸ್ ಈವರೆಗೆ 16 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿಕೊಂಡಿದ್ದು ಈ ಅವಧಿಯಲ್ಲಿ ಇಂಗ್ಲೆಂಡ್ ತಂಡ 12 ಗೆಲುವು ಮತ್ತು ನಾಲ್ಕು ಸೋಲುಗಳನ್ನು ಅನುಭವಿಸಿದೆ. ಆ 12 ಗೆಲುವುಗಳಲ್ಲಿ ಎಂಟು ಗೆಲುವುಗಳು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಚೇಸಿಂಗ್‌ನಲ್ಲಿ ಬಂದಿವೆ. ಕುತೂಹಲಕಾರಿ ಸಂಗತಿಯೆಂದರೆ ಅದರಲ್ಲಿ 5 ಗೆಲುವುಗಳನ್ನು ಇಂಗ್ಲೆಂಡ್ ತಂಡ 250ಕ್ಕೂ ಅಧಿಕ ರನ್‌ಗಳನ್ನು ಬೆನ್ನಟ್ಟಿ ಗೆದ್ದುಕೊಂಡಿದೆ. ಈ ಮೂಲಕ ಟೆಸ್ಟ್‌ನಲ್ಲಿ ಅತಿ ಹೆಚ್ಚು ಬಾರಿ 250ಕ್ಕೂ ಅಧಿಕ ರನ್‌ಗಳನ್ನು ಬೆನ್ನಟ್ಟಿದ ನಾಯಕ ಎನಿಸಿಕೊಂಡಿದ್ದಾರೆ ಸ್ಟೋಕ್ಸ್. ಇದಕ್ಕೂ ಮುನ್ನ ಈ ದಾಖಲೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಹೆಸರಿನಲ್ಲಿದ್ದು ಧೋನಿ ನಾಯಕಯತ್ವದಲ್ಲಿ ಭಾರತ 4 ಬಾರಿ ಈ ಸಾಧನೆ ಮಾಡಿತ್ತು.