ಐಪಿಎಲ್: ಇದುವರೆಗೆ ಒಮ್ಮೆಯೂ ಫ್ರಾಂಚೈಸಿ ಬದಲಿಸದೇ ಇರುವ ಐವರು ಆಟಗಾರರಿವರು

ಎಲ್ಲಾ ಯೋಜನೆಯಂತೆ ನಡೆದರೆ ಮುಂಬರುವ ಮಾರ್ಚ್ 26ರಿಂದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದೆ. ಸದ್ಯ ಬಿಸಿಸಿಐ ನಡೆಸುತ್ತಿರುವ ಯೋಜನೆಗಳ ಪ್ರಕಾರ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲ್ಲಾ ಪಂದ್ಯಗಳೂ ಕೂಡ ಸಂಪೂರ್ಣವಾಗಿ ಭಾರತದ ನೆಲದಲ್ಲಿಯೇ ನಡೆಯಲಿವೆ. ಸದ್ಯ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಂಬೈ ಹಾಗೂ ಪುಣೆ ನಗರಗಳಲ್ಲಿ ನಡೆಯುವುದಾಗಿ ಮಾಹಿತಿಗಳು ಹರಿದಾಡುತ್ತಿದ್ದು, ಪ್ಲೇ ಆಫ್ ಹಂತದ ಪಂದ್ಯಗಳನ್ನು ಅಹಮದಾಬಾದ್ ನಗರದ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಸಲು ಚಿಂತನೆಗಳು ನಡೆಯುತ್ತಿವೆ. ಹೀಗೆ ಟೂರ್ನಿ ಆಯೋಜನೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ದಿನದಿಂದ ದಿನಕ್ಕೆ ಕುತೂಹಲಗಳು ಹೆಚ್ಚಾಗುತ್ತಿವೆ.
ಅದರಲ್ಲಿಯೂ ಇತ್ತೀಚಿಗಷ್ಟೆ ನಡೆದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಈ ಕುತೂಹಲದ ಮಟ್ಟವನ್ನು ದುಪ್ಪಟ್ಟು ಮಾಡಿದೆ. ಯಾವ ಆಟಗಾರರು ಯಾವ ಫ್ರಾಂಚೈಸಿ ಪಾಲಾಗಲಿದ್ದಾರೆ ಎಂಬ ಅಭಿಮಾನಿಗಳ ಕುತೂಹಲ ಹಾಗೂ ಪ್ರಶ್ನೆಗಳಿಗೆ ಈ ಮೆಗಾ ಹರಾಜು ಪ್ರಕ್ರಿಯೆ ಉತ್ತರವನ್ನು ನೀಡಿದೆ. ಫೆಬ್ರವರಿ 12 ಮತ್ತು 13ರಂದು ನಡೆದ ಈ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಇನ್ನು ಈ ಆಟಗಾರರನ್ನು ಖರೀದಿಸಲು ಎಲ್ಲಾ 10 ಫ್ರಾಂಚೈಸಿಗಳು ಖರ್ಚು ಮಾಡಿರುವ ಒಟ್ಟು ಮೊತ್ತ 551.7 ಕೋಟಿ ರೂಪಾಯಿಗಳು.
ಹೀಗೆ ನಡೆದ ದೊಡ್ಡಮಟ್ಟದ ಹರಾಜಿನ ಮೂಲಕ ಐಪಿಎಲ್‌ಗೆ ತಾವು ಪದಾರ್ಪಣೆ ಮಾಡಿದಾಗಿನಿಂದ ಕಳೆದ ಬಾರಿಯ ಐಪಿಎಲ್ ಟೂರ್ನಿಯವರೆಗೂ ಒಂದೇ ಫ್ರಾಂಚೈಸಿ ಪರ ಆಡಿದ್ದ ಪ್ರಮುಖ ಆಟಗಾರರಾದ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಶ್ರೇಯಸ್ ಅಯ್ಯರ್, ಕೃನಾಲ್ ಪಾಂಡ್ಯ ಮತ್ತು ಶುಬ್ ಮನ್ ಗಿಲ್ ಈ ಬಾರಿ ಬೇರೆ ಫ್ರಾಂಚೈಸಿಗಳಿಗೆ ಬಿಕರಿಯಾಗಿದ್ದು, ಇದೇ ಮೊದಲ ಬಾರಿಗೆ ಬೇರೆ ತಂಡವೊಂದರ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ. ಹೀಗೆ ಇಷ್ಟು ವರ್ಷಗಳ ಕಾಲ ಒಂದೇ ಫ್ರಾಂಚೈಸಿ ಪರ ಆಡುತ್ತಿದ್ದ ಈ ಆಟಗಾರರು ಈ ಬಾರಿ ಬೇರೆ ತಂಡವನ್ನು ಪ್ರತಿನಿಧಿಸುತ್ತಿದ್ದರೆ ಕೆಲ ಆಟಗಾರರು ಮಾತ್ರ ಈ ಬಾರಿಯೂ ಕೂಡ ಇಷ್ಟು ವರ್ಷಗಳಲ್ಲಿ ತಾವು ಪ್ರತಿನಿಧಿಸಿರುವ ತಂಡದ ಪರವೇ ಕಣಕ್ಕಿಳಿಯಲಿದ್ದಾರೆ. ಹೀಗೆ ಈ ಬಾರಿಯೂ ಕೂಡ ಫ್ರಾಂಚೈಸಿಯನ್ನು ಬದಲಿಸದೆ ತಮ್ಮ ಹಳೆಯ ಫ್ರಾಂಚೈಸಿ ಪರವೇ ಕಣಕ್ಕಿಳಿಯುತ್ತಿರುವ ಐವರು ಕ್ರಿಕೆಟಿಗರ ಪಟ್ಟಿ ಈ ಕೆಳಕಂಡಂತಿದೆ.

1. ವಿರಾಟ್ ಕೊಹ್ಲಿ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿ ಪರ 200ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ಏಕೈಕ ಕ್ರಿಕೆಟಿಗ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ. ಹೀಗೆ ವಿಶೇಷವಾದ ದಾಖಲೆಯನ್ನು ತನ್ನ ಹೆಸರಿನಲ್ಲಿ ಹೊಂದಿರುವ ವಿರಾಟ್ ಕೊಹ್ಲಿ ಉದ್ಘಾಟನಾ ಐಪಿಎಲ್ ಆವೃತ್ತಿಯಿಂದ ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯವರೆಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವೇ ಆಟವನ್ನು ಆಡಿದ್ದಾರೆ. ಹಾಗೂ ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಿಟೈನ್ ಆಗಿರುವ ವಿರಾಟ್ ಕೊಹ್ಲಿ ಈ ಬಾರಿಯ ಟೂರ್ನಿಯಲ್ಲಿಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿಯಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.

2. ಜಸ್ಪ್ರೀತ್ ಬೂಮ್ರಾ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಟಗಾರರನ್ನು ಹೆಚ್ಚಾಗಿ ಬದಲಾಯಿಸದೇ ಇರುವ ತಂಡವೆಂದರೆ ಅದು ಮುಂಬೈ ಇಂಡಿಯನ್ಸ್. ತಮ್ಮ ತಂಡದ ಪರ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ತಂಡದಿಂದ ಕೈ ಬಿಟ್ಟರೂ ಸಹ ಹರಾಜು ಪ್ರಕ್ರಿಯೆಯಲ್ಲಿ ಮತ್ತೆ ತಂಡಕ್ಕೆ ಖರೀದಿಸುವ ಗುಣ ಇರುವ ಮುಂಬೈ ಇಂಡಿಯನ್ಸ್ ಜಸ್ಪ್ರೀತ್ ಬೂಮ್ರಾ ಅವರನ್ನು ಈ ಬಾರಿಯೂ ಕೂಡ ರಿಟೈನ್ ಮಾಡಿಕೊಂಡಿದೆ. ಹೀಗೆ 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದ ಜಸ್ಪ್ರೀತ್ ಬುಮ್ರಾ ಇಲ್ಲಿಯವರೆಗೂ ಕೂಡ ಮುಂಬೈ ಇಂಡಿಯನ್ಸ್ ತಂಡದ ಪರವೇ ಆಟವನ್ನು ಆಡುತ್ತಿದ್ದಾರೆ.

3. ರಿಷಭ್ ಪಂತ್
2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಗಿನ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸೇರಿದ್ದ ರಿಷಭ್ ಪಂತ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಡೆಲ್ಲಿ ಫ್ರಾಂಚೈಸಿ ಪರವೇ ಆಡುತ್ತಾ ಬಂದಿರುವ ರಿಷಭ್ ಪಂತ್ ಬೇರೆ ಯಾವುದೇ ಫ್ರಾಂಚೈಸಿ ಪರವೂ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿದಿಲ್ಲ.

4. ಸುನಿಲ್ ನರೈನ್
2012ರ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಸೇರಿದ್ದ ಸುನಿಲ್ ನರೈನ್ ಇಲ್ಲಿಯವರೆಗೂ ಕೂಡ ಅದೇ ಫ್ರಾಂಚೈಸಿಯ ಪರ ಆಡುತ್ತಿದ್ದಾರೆ. ಈ ಬಾರಿಯ ಟೂರ್ನಿಯ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ದಶಕವನ್ನು ಪೂರೈಸಲಿರುವ ಸುನಿಲ್ ನರೈನ್ ಇದುವರೆಗೂ ಬೇರೆ ಯಾವುದೇ ಐಪಿಎಲ್ ಫ್ರಾಂಚೈಸಿಯ ಪರ ಆಟವನ್ನು ಆಡಿಲ್ಲ.

5. ಕೀರನ್ ಪೊಲಾರ್ಡ್
2009ರ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದ ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಅವರನ್ನು 2010ರಲ್ಲಿ ಖರೀದಿಸಿದ ಮುಂಬೈ ಇಂಡಿಯನ್ಸ್ ತಂಡ ಇಲ್ಲಿಯವರೆಗೂ ಕೂಡ ತಂಡದಿಂದ ಬಿಟ್ಟುಕೊಟ್ಟಿಲ್ಲ. ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯಲ್ಲಿಯೂ ಮುಂಬೈ ಇಂಡಿಯನ್ಸ್ ತಂಡದಲ್ಲಿಯೇ ರಿಟೈನ್ ಆದ ಕೀರನ್ ಪೊಲಾರ್ಡ್ ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಬೇರೆ ಯಾವುದೇ ತಂಡದ ಜೆರ್ಸಿಯನ್ನು ತೊಟ್ಟಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications