2021ರ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಗದಿದ್ದ ಈ ಐವರಿಗೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಖಚಿತ!

ಇತ್ತೀಚಿನ ದಿನಗಳಲ್ಲಿ ಭಾರತ ಟಿ ಟ್ವೆಂಟಿ ತಂಡ ಸಾಕಷ್ಟು ಬದಲಾವಣೆಗಳು ಹಾಗೂ ಹೊಸತನಗಳನ್ನು ಹೊಂದಿದೆ. ಕಳೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರಿ ಮುಖಭಂಗಕ್ಕೊಳಗಾದ ನಂತರ ನಾಯಕತ್ವದ ಬದಲಾವಣೆಯಿಂದ ಹಿಡಿದು ವಿವಿಧ ಸರಣಿಗಳಿಗೆ ವಿವಿಧ ಆಟಗಾರರ ತಂಡಗಳನ್ನು ರಚಿಸುವುದರ ಮೂಲಕ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಾಗಿ ಆಟಗಾರರನ್ನು ತಯಾರಿಸುವದರಲ್ಲಿ ನಿರತರಾಗಿದ್ದಾರೆ ಬಿಸಿಸಿಐ ಆಯ್ಕೆಗಾರರು ಮತ್ತು ತರಬೇತುದಾರರು.
ಇನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಇಲ್ಲಿಯವರೆಗೂ ಕನಿಷ್ಠವೆಂದರೂ 5 ಯುವ ಆಟಗಾರರು ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದು, ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಗುಳಿದಿದ್ದ ಅನುಭವಿ ಆಟಗಾರರು ಕೂಡ ಈ ಸಮಯದಲ್ಲಿ ತಂಡಕ್ಕೆ ಮರುಪ್ರವೇಶವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತ ಟಿ ಟ್ವೆಂಟಿ ತಂಡದ ಆಟಗಾರರ ಸಂಖ್ಯೆ ದೊಡ್ಡಮಟ್ಟದಲ್ಲಿದ್ದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗುವ ತಂಡದಲ್ಲಿ ಯಾವ ಆಟಗಾರರು ಸ್ಥಾನ ಪಡೆದುಕೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಅಕ್ಟೋಬರ್ ತಿಂಗಳಿನಿಂದ ಆಸ್ಟ್ರೇಲಿಯಾ ನೆಲದಲ್ಲಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಕಳೆದ ವರ್ಷ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ಪಡೆದುಕೊಳ್ಳದೇ ಇದ್ದ ಈ ಕೆಳಕಂಡ ಐವರು ಕ್ರಿಕೆಟಿಗರಿಗೆ ಈ ವರ್ಷದ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ.

1. ದಿನೇಶ್ ಕಾರ್ತಿಕ್
ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸಮಯದಲ್ಲಿ ದಿನೇಶ್ ಕಾರ್ತಿಕ್ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಬಹುತೇಕ ಮುಕ್ತಾಯಗೊಂಡಿದ್ದು ಇನ್ನೇನು ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮರಳಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ದಿನೇಶ್ ಕಾರ್ತಿಕ್ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ ಟ್ವೆಂಟಿ ಸರಣಿಯಲ್ಲಿ 4 ಪಂದ್ಯಗಳನ್ನಾಡಿ 158.62 ಸ್ಟ್ರೈಕ್ ರೇಟ್ ಜತೆಗೆ 92 ರನ್ ಚಚ್ಚಿ ಅಬ್ಬರಿಸಿದ್ದರು. ನಂತರ ಇದೀಗ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಆಯ್ಕೆಯಾಗಿರುವ ದಿನೇಶ್ ಕಾರ್ತಿಕ್ ಅವರನ್ನು ಬಿಸಿಸಿಐ ಮುಂದಿನ ಐಸಿಸಿ ಟೂರ್ನಿಗಳಿಗೆ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂಬ ಸೂಚನೆಯನ್ನು ನೀಡಿದೆ. ಅದರಲ್ಲಿಯೂ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಅಬ್ಬರದ ಬ್ಯಾಟಿಂಗ್ ನಡೆಸುವ ಸಾಮರ್ಥ್ಯವಿರುವ ದಿನೇಶ್ ಕಾರ್ತಿಕ್ ಬರೋಬ್ಬರಿ 183.33 ಸ್ಟ್ರೈಕ್ ರೇಟ್ ಹೊಂದಿದ್ದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಟಿಕೆಟ್ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

2. ಯುಜುವೇಂದ್ರ ಚಾಹಲ್
ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರಿಗೆ ಬಿಸಿಸಿಐ ಅವಕಾಶ ನೀಡದೇ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆದರೆ ತನ್ನ ಛಲ ಬಿಡದ ಯುಜ್ವೇಂದ್ರ ಚಾಹಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 17 ಪಂದ್ಯಗಳನ್ನಾಡಿ 27 ವಿಕೆಟ್ ಪಡೆದು ಉತ್ತಮ ಪ್ರದರ್ಶನವನ್ನು ನೀಡಿ ಇದೀಗ ಮತ್ತೆ ಟೀಮ್ ಇಂಡಿಯಾಗೆ ಮರಳಿದ್ದಾರೆ. ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 4 ಪಂದ್ಯಗಳಲ್ಲಿ 6 ವಿಕೆಟ್ ಪಡೆದ ಯುಜುವೇಂದ್ರ ಚಾಹಲ್ ಅವರನ್ನು ತಂಡದ ನಾಯಕ ರೋಹಿತ್ ಶರ್ಮಾ ಸಾಕಷ್ಟು ಬೆಂಬಲಿಸುತ್ತಿದ್ದಾರೆ. ಇನ್ನು ಮುಂಬರುವ ವಿದೇಶಿ ನೆಲದ ಸರಣಿಗಳಲ್ಲಿ ಯುಜುವೇಂದ್ರ ಚಾಹಲ್ ಇದೇ ರೀತಿಯ ಉತ್ತಮ ಪ್ರದರ್ಶನವನ್ನು ನೀಡಿದರೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ಸಿಗುವುದು ಖಚಿತ ಎನ್ನಬಹುದು.

3. ಹರ್ಷಲ್ ಪಟೇಲ್
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆದುಕೊಳ್ಳಬಹುದಾದ ಆಟಗಾರರ ಸಾಲಿನಲ್ಲಿ ಹರ್ಷಲ್ ಪಟೇಲ್ ಹೆಸರು ಮುಂಚೂಣಿಯಲ್ಲಿದೆ. ಹರ್ಷಲ್ ಪಟೇಲ್ ಒಟ್ಟಾರೆ 14 ಪಂದ್ಯಗಳನ್ನಾಡಿದ್ದು 19 ವಿಕೆಟ್ ಪಡೆದಿದ್ದಾರೆ ಹಾಗೂ ಕಳೆದೆರಡು ಐಪಿಎಲ್ ಟೂರ್ನಿಗಳಲ್ಲಿ 30 ಪಂದ್ಯಗಳನ್ನಾಡಿ ಬರೋಬ್ಬರಿ 51 ವಿಕೆಟ್‍ಗಳನ್ನು ಪಡೆದಿದ್ದು ಭರವಸೆಯ ಆಟಗಾರ ಎನಿಸಿಕೊಂಡಿದ್ದಾರೆ. ಸದ್ಯ ಟೀಮ್ ಇಂಡಿಯಾದ ಸರಣಿಗಳಲ್ಲಿ ಸಾಲುಸಾಲು ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಹರ್ಷಲ್ ಪಟೇಲ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗುವ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

4. ಅವೇಶ್ ಖಾನ್
ಹರ್ಷಲ್ ಪಟೇಲ್ ರೀತಿಯೇ ಯುವ ಆಟಗಾರ ಅವೇಶ್ ಖಾನ್ ಕೂಡ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿವೆ. ಐಪಿಎಲ್ ಟೂರ್ನಿಗಳಲ್ಲಿ ಹೆಚ್ಚಿನ ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿರುವ ಅವೇಶ್ ಖಾನ್ ಈಗಾಗಲೇ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 4 ವಿಕೆಟ್‍ಗಳ ಗೊಂಚಲನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಅವೇಶ್ ಖಾನ್ ಬೌಲಿಂಗ್ ಶೈಲಿ ಆಸ್ಟ್ರೇಲಿಯ ಪಿಚ್‌ಗಳಲ್ಲಿ ಪರಿಣಾಮಕಾರಿಯಾಗಿರಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಟಿ ಟ್ವೆಂಟಿ ವಿಶ್ವಕಪ್ ಟಿಕೆಟ್ ಸಿಗುವ ಸಾಧ್ಯತೆಗಳಿವೆ.

5. ದೀಪಕ್ ಹೂಡಾ
ಸದ್ಯ ಆರಂಭಿಕ ಆಟಗಾರನಾಗಿ ಹಾಗೂ ಮಧ್ಯಮ ಕ್ರಮಾಂಕದ ಆಟಗಾರನಾಗಿ ಕಣಕ್ಕಿಳಿದು ಸ್ಪೋಟಕ ಇನಿಂಗ್ಸ್ ಕಟ್ಟಬಲ್ಲ ಆಟಗಾರನೆಂದು ಗುರುತಿಸಿಕೊಂಡಿರುವ ದೀಪಕ್ ಹೂಡಾ ಖಚಿತವಾಗಿಯೂ ಬಿಸಿಸಿಐ ಆಯ್ಕೆಗಾರರ ಮನ ಗೆದ್ದಿದ್ದಾರೆ. ಅದರಲ್ಲಿಯೂ ಐರ್ಲೆಂಡ್ ವಿರುದ್ಧ ಶತಕ ಸಿಡಿಸಿದ ದೀಪಕ್ ಹೂಡಾ ಈಗಾಗಲೇ ತಮ್ಮ ಸಾಮರ್ಥ್ಯವೇನು ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ. ದೀಪಕ್ ಹೂಡಾರ ಉತ್ತಮ ಹೊಡೆತಗಳನ್ನು ಕಂಡಿರುವ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ತಂಡಕ್ಕೆ ದೀಪಕ್ ಹೂಡಾ ಅಗತ್ಯತೆ ಏನು ಎಂಬುದನ್ನು ಮನಗಂಡಿದ್ದಾರೆ. ಹೀಗಾಗಿ ದೀಪಕ್ ಹೂಡಾ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗುವ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಖಚಿತ ಎನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications