ಹೊರಗೆ ಹೊಳಪು, ಒಳಗೆ ಹುಳುಕು!! ಭಾರತದ ವಿಶ್ವಕಪ್ ಕನಸು ಭಗ್ನಗೊಳಿಸುತ್ತಾ ಈ 5 ಸಮಸ್ಯೆಗಳು?
ಏಷ್ಯಾಕಪ್ ಟೂರ್ನಿಯ ಮೂಲಕ ಭಾರತ ತಂಡ ವಿಶ್ವಕಪ್‌ಗೆ ಕೊನೆಯ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ. ಏಷ್ಯಾದ ಬಲಿಷ್ಠ ತಂಡಗಳ ಜೊತೆಗೆ ಕಾದಾಟ ನಡೆಸುತ್ತಿದ್ದು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಇನ್ನು ಇದೇ ಸಂದರ್ಭದಲ್ಲಿ ವಿಶ್ವಕಪ್‌ನಂಥಾ ಟೂರ್ನಿಗಾಗಿ ತಂಡದ ಸಂಯೋಜನೆಯನ್ನು ಅಂತಿಮಗೊಳಿಸಲು ಇದು ಅತ್ಯುತ್ತಮ ಸಿದ್ಧತೆಯೂ ಆಗಿದೆ ಎನ್ನುವುದು ಗಮನಾರ್ಹ.
ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಈಗಾಗಲೇ ತನ್ನ 15ರ ಪಡೆಯನ್ನು ಪ್ರಕಟಿಸಿದೆ. ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿರುವ ರೋಹಿತ್ ಶರ್ಮಾ ಪಡೆ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದಾಗಿದೆ ಎನ್ನುವುದು ನಿಸ್ಸಂಶಯ. ಅದರಲ್ಲೂ ಟೂರ್ನಿ ಭಾರತದಲ್ಲಿಯೇ ನಡೆಯುತ್ತಿರುವುದು ಭಾರತ ತಂಡದ ಆತ್ಮವಿಶ್ವಾಸಕ್ಕೆ ಮತ್ತೊಂದು ಕಾರಣ.

ಆದರೆ ಭಾರತ ತಂಡದಲ್ಲಿ ಕೆಲ ನ್ಯೂನ್ಯತೆಗಳು ಕಣ್ಣಿಗೆ ರಾಚುವಂತಿದೆ. ಅವುಗಳನ್ನು ಸರಿಪಡಿಸಿಕೊಳ್ಳದ ಹೊರತು ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ ಟೂರ್ನಿ ಗೆಲ್ಲುವುದು ಕೂಡ ಕಷ್ಟ. ಹಾಗಾದರೆ ಭಾರತ ತಂಡದ ವಿಶ್ವಕಪ್ ಕನಸನ್ನೇ ಭಗ್ನಗೊಳಿಸಬಹುದಾದ ಐದು ಸಮಸ್ಯೆಗಳು ಯಾವುದು? ಇಲ್ಲಿದೆ ಮಾಹಿತಿ
ಎಡಗೈ ದಾಂಡಿಗರನ್ನು ಹಿನ್ನೆಟ್ಟಿಸಲು ಬಲಗೈ ಸ್ಪಿನ್ನರ್‌ಗಳೇ ಇಲ್ಲ!
ಟೀಮ್ ಇಂಡಿಯಾದ ಸ್ಪಿನ್ ವಿಭಾಗದಲ್ಲಿ ಹೆಚ್ಚು ವೈವಿಧ್ಯತೆ ಇಲ್ಲದಿರುವುದು ತಂಡಕ್ಕೆ ಭಾರೀ ಹಿನ್ನಡೆಯುಂಟಾಗುವ ಸಾಧ್ಯತೆಯಿದೆ. ಮುಖ್ಯ ಸ್ಪಿನ್ನರ್ ಆಗಿ ಕುಲ್‌ದೀಪ್ ಯಾದವ್ ಅವಕಾಶ ಪಡೆದುಕೊಂಡಿದ್ದು ಉತ್ತಮ ಲಯದಲ್ಲಿರುವುದು ತಂಡಕ್ಕೆ ಖಂಡಿತಾ ನೆರವಾಗಲಿದೆ. ಆದರೆ ವಿಶ್ವಕಪ್‌ಗೆ ಆಯ್ಕೆಯಾಗಿರುವ ಇನ್ನಿಬ್ಬರು ಆಲ್‌ರೌಂಡರ್ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಒಂದೇ ರೀತಿಯ ಕೌಶಲ್ಯವನ್ನು ಹೊಂದಿದವರಾಗಿದ್ದಾರೆ.
ಅದೂ ಅಲ್ಲದೆ ಈ ಮೂವರು ಸ್ಪಿನ್ನರ್‌ಗಳು ಕೂಡ ಎಡಗೈ ಸ್ಪಿನ್ನರ್‌ಗಳೇ ಆಗಿರುವುದರಿಂದಾಗಿ ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಪ್ರಮುಖ ತಂಡಗಳು ಬಲಿಷ್ಠವಾದ ಎಡಗೈ ಆಟಗಾರರನ್ನು ಹೊಂದಿದ್ದು ಅವರನ್ನು ಕಟ್ಟಿ ಹಾಕಲು ಬಲಗೈ ಸ್ಪಿನ್ನರ್‌ನ ಅಗತ್ಯ ಖಂಡಿತಾ ಇತ್ತು. ಇದೀಗ ತಂಡದ ಆಯ್ಕೆ ಆಗಿರುವ ಕಾರಣ ಈ ಆಟಗಾರರು ತಮ್ಮ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲೇಬೇಕಿದೆ.
ಎಡಗೈ ವೇಗಿಗಳ ವಿರುದ್ಧ ಮುಂದುವರಿದ ಅಗ್ರಕ್ರಮಾಂಕದ ಪರದಾಟ
ಇನ್ನು ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರರು ಎಡಗೈ ವೇಗಿಗಳ ವಿರುದ್ಧ ಸತತವಾಗಿ ಹಿನ್ನಡೆಯನ್ನು ಅನುಭವಿಸುತ್ತಾ ಬಂದಿದ್ದಾರೆ. ಏಷ್ಯಾಕಪ್‌ನಲ್ಲಿಯೂ ಅದು ಮುಂದುವರಿದಿತ್ತು. ತಂಡದ ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ವಿರಾಟ್ ಕೊಹ್ಲಿಯಂತಾ ಅನುಭವಿ ಆಟಗಾರರು ಹಾಗೂ ಶುಬ್ಮನ್ ಗಿಲ್ ಕೂಡ ಇದ್ದಾರೆ. ಈ ಸಮಸ್ಯೆಯಿಂದ ಹೊರಬರುವುದು ಬಹಳ ಮುಖ್ಯವಾಗಿದೆ. ಇಲ್ಲವಾದರೆ ಭಾರತ ತಂಡದ ಮಧ್ಯಮ ಕ್ರಮಾಂಕದ ಮೇಲೆ ಅನಗತ್ಯ ಒತ್ತಡ ಬೀಳಲಿದೆ. ಇದು ಫಲಿತಾಂಶದ ಮೇಲೆ ಋಣಾತ್ಮಕ ಪರಿಣಾಮ ಬೀರುವುದು ನಿಶ್ಚಿತ.
ಗಾಯಗೊಂಡಿರುವ ಆಟಗಾರರಿಗೆ ನೇರವಾಗಿ ಅವಕಾಶ
ಇನ್ನು ಟೀಮ್ ಇಂಡಿಯಾ ಕೆಲ ಪ್ರಮುಖ ಆಟಗಾರರು ಗಾಯದಿಂದ ಚೇತರಿಸಿಕೊಂಡು ನೇರವಾಗಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಆಟಗಾರರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಡುವುದಕ್ಕೂ ಮುನ್ನ ಅದಕ್ಕೆ ಪೂರ್ವಾಭ್ಯಾಸಗಳನ್ನು ನಡೆಸುತ್ತಾರೆ. ಶ್ರೇಯಸ್ ಐಯ್ಯರ್, ಕೆಎಲ್ ರಾಹುಲ್ ಅವರಂತಾ ಪ್ರಮುಖ ಆಟಗಾರರು ಗಾಯದಿಂದ ಚೇತರಿಸಿಕೊಂಡಂತೆಯೇ ನೇರವಾಗಿ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ವಿಶ್ವಕಪ್‌ನ ಆರಂಭಕ್ಕೆ ಇನ್ನು ಒಂದು ತಿಂಗಳಿಗೂ ಕಡಿಮೆ ಸಮಯವಿದ್ದು ಇಂಥಾ ಸಂದರ್ಭದಲ್ಲಿ ಈ ಆಟಗಾರರ ಲಯ, ಪ್ಯಾಚ್ ಫಿಟ್‌ನೆಸ್ ಎಲ್ಲವೂ ಪ್ರಶ್ನಾರ್ಥಕವಾಗಿಯೇ ಉಳಿದುಕೊಂಡಿದೆ.
ವಿಕೆಟ್ ಕೀಪರ್ ಆಗಿ ರಾಹುಲ್ ಫಿಟ್‌ನೆಸ್ ಅನುಮಾನ
ಇನ್ನು ಟೀಮ್ ಇಂಡಿಯಾದ ಆಟಗಾರ ಕೆಎಲ್ ರಾಹುಲ್ ಈಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಇಂಥಾ ಸಂದರ್ಭದಲ್ಲಿ ರಾಹುಲ್‌ಗೆ ಇಶಾನ್ ಕಿಶನ್ ಬದಲಿಗೆ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನು ನೀಡಿದರೆ ಅದನ್ನು ನಿರ್ವಹಿಸಲು ಸಂಪೂರ್ಣವಾಗಿ ಸಮರ್ಥವಾಗಿರುವುದು ಅನುಮಾನ. ಬ್ಯಾಟರ್ ಆಗಿ ರಾಹುಲ್ ಮಿಂಚಿದರೂ ವಿಕೆಟ್ ಕೀಪರ್ ಆಗಿ ಅವರಿಂದ ಪೂರ್ಣ ಸಾಮರ್ಥ್ಯ ಪ್ರದರ್ಶಿಸುವುದು ಅಸಾಧ್ಯ. ಇದು ಕೂಓಡ ತಂಡಕ್ಕೆ ಹಿನ್ನಡೆಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ.
ಫೀಲ್ಡಿಂಗ್‌ನಲ್ಲಿ ಸತತ ವೈಫಲ್ಯ
ಇನ್ನು ಟೀಮ್ ಇಂಡಿಯಾದ ಕಳಪೆ ಫೀಲ್ಡಿಂಗ್ ಕೂಡ ವಿಶ್ವಕಪ್‌ನಲ್ಲಿ ದೊಡ್ಡ ಹಿನ್ನಡೆಗೆ ಕಾರಣವಾಗಬಹುದಾದ ಮತ್ತೊಂದು ಅಂಶ. 2021ರ ಈಚೆಗೆ ಭಾರತ ತಂಡದ ಫೀಲ್ಡಿಂಗ್ ಕ್ಷಮತೆ ಅತ್ಯಂತ ಕಳಪೆಯಾಗಿದೆ ಎನ್ನುವುದನ್ನು ಅಂಕಿಅಂಶಗಳು ಬಹಿರಂಗಪಡಿಸುತ್ತಿದೆ. ಇತ್ತೀಚೆಗೆ ಏಷ್ಯಾಕಪ್ ಟೂರ್ನಿಯಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿಯೂ ಭಾರತ ಫೀಲ್ಡಿಂಗ್ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಫೀಲ್ಡಿಂಗ್ ವಿಭಾಗದಲ್ಲಿ ಭಾರತ ಸರ್ವ ಪ್ರಯತ್ನವನ್ನು ಮಾಡಿದರೆ ಮಾತ್ರವೇ ತಂಡಕ್ಕೆ ಯಶಸ್ಸು ಸಾಧ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications