ಟಿ20 ವಿಶ್ವಕಪ್ ಇತಿಹಾಸದಲ್ಲಿ 6 ಮರೆಯಲಾಗದ ಘಟನೆಗಳಿವು!

ಅಬುಧಾಬಿ: ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. 16 ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ. ಈವರೆಗೆ ಒಟ್ಟು ಆರು ಟಿ20 ವಿಶ್ವಕಪ್ ಆವೃತ್ತಿಗಳು ನಡೆದಿವೆ. ಈ ವರ್ಷ ನಡೆಯುತ್ತಿರುವುದು ಏಳನೇ ಆವೃತ್ತಿ. ಆರಂಭಿಕ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಪಟ್ಟ ಗೆದ್ದಿತ್ತು.
ಅತೀ ಹೆಚ್ಚು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡವೆಂಬ ಹಿರಿಮೆ ಹಾಲಿ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ತಂಡದ್ದು. ವಿಂಡೀಸ್ ಎರಡು ಬಾರಿ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಿದೆ. ಅಂದ್ಹಾಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಅಪರೂಪದ ಕ್ಷಣಗಳು ನಡೆದಿವೆ. ಅವು ಯಾವತ್ತಿಗೂ ನೆನಪಿನಲ್ಲಿ ಉಳಿಯುವ ವಿಶೇಷ ಕ್ಷಣಗಳು. ಅಂಥ ಆರು ಅಪರೂಪದ ಕ್ಷಣಗಳ ಮಾಹಿತಿ ಇಲ್ಲಿವೆ.

1. ಯುವರಾಜ್ ಸಿಂಗ್ ಆರ್ಭಟ, ಸಿಕ್ಸ್ ಸಿಕ್ಸ್
ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ವಿಶೇಷ ಘಟನೆಗಳ ಸಾಲಿನಲ್ಲಿ ಮೊದಲನೆಯದಾಗಿ ಬರುವ ಘಟನೆ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಬಾರಿಸಿರುವ ಸಿಕ್ಸ್ ಸಿಕ್ಸ್ ವಿಶ್ವದಾಖಲೆ. ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಮೊದಲ ಸಿಕ್ಸ್ ಸಿಕ್ಸ್ ದಾಖಲೆ ಇದಾಗಿ ಗುರುತಿಸಿಕೊಂಡಿದೆ. ವಿಶ್ವಕಪ್ ಉದ್ಘಾಟನಾ ಆವೃತ್ತಿಯಲ್ಲಿ ಅಂದರೆ 2017ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಯುವಿ, ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಸಿಕ್ಸ್ ಸಿಕ್ಸ್ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತ 18 ರನ್ ಜಯ ಗಳಿಸಿತ್ತು. ಅಲ್ಲದೆ ಅದೇ ಆವೃತ್ತಿಯ ಫೈನಲ್‌ನಲ್ಲಿ ಪಾಕ್ ಸೋಲಿಸಿ ಭಾರತ ಟ್ರೋಫಿ ಗೆದ್ದಿತ್ತು.

2. ಕ್ರಿಕೆಟ್ ಜಗತ್ತಿಗೆ ಶಾಕ್ ನೀಡಿದ್ದ ಡಚ್
2009ರ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿತ್ತು. ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಇಂಗ್ಲೆಂಡ್ ವಿರುದ್ಧ ನೆದರ್ಲ್ಯಾಂಡ್ಸ್ ತಂಡ 4 ವಿಕೆಟ್‌ಗಳ ಜಯ ದಾಖಲಿಸಿತ್ತು. ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಡಚ್ ತಂಡ ಗೆಲ್ಲಲು ಇಂಗ್ಲೆಂಡ್ 163 ರನ್ ಗುರಿ ನೀಡಿತ್ತು. ಆವತ್ತು ನೆದರ್ಲ್ಯಾಂಡ್ಸ್ ಕೊನೇ ಎಸೆತಕ್ಕೆ ಎರಡು ರನ್ ಬಾರಿಸಿ ಪಂದ್ಯ ಗೆದ್ದಿತ್ತು. ಆವತ್ತು 49 ರನ್ ಬಾರಿಸಿದ್ದ ಟಾಮಿ ಡಿ ಗ್ರೂತ್ ಡಚ್ ತಂಡ ಗೆಲ್ಲಲು ಪ್ರಮುಖ ಕಾರಣರಾಗಿದ್ದರು.

3. ಕಾರ್ಲೋಸ್ ಭ್ರಾತ್‌ವೇಟ್ ವಿಶೇಷತೆ
ಈ ಘಟನೆ ನಡೆದಿದ್ದು 2016ರಲ್ಲಿ ಭಾರತದ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ. ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಎದುರಾಳಿ ವೆಸ್ಟ್ ಇಂಡೀಸ್‌ಗೆ 156 ರನ್ ಗುರಿ ನೀಡಿತ್ತು. ಕೊನೇ ಓವರ್‌ನಲ್ಲಿ ವಿಂಡೀಸ್ ಗೆಲ್ಲಲು 19 ರನ್‌ಗಳ ಅವಶ್ಯಕತೆಯಿತ್ತು. ಬೌಲಿಂಗ್‌ಗಾಗಿ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಬಂದಿದ್ದರು. ಆಗ ಸ್ಟ್ರೈಕ್‌ನಲ್ಲಿ ಕಾರ್ಲೋಸ್ ಬ್ರಾತ್‌ವೇಟ್ ಮತ್ತು ಮಾರ್ಲನ್ ಸ್ಯಾಮ್ಯುವೆಲ್ ಇದ್ದರು. ಆವತ್ತು ಬ್ರಾತ್‌ವೇಟ್ ಬೆನ್ನು ಬೆನ್ನಿಗೆ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ಕೆರಿಬಿಯನ್ ಗೆಲುವಿನ ರುವಾರಿ ಎನಿಸಿದ್ದರು. ಆಗ ಕಾಮೆಂಟರಿ ಮಾಡುತ್ತಿದ್ದ ಇಯಾನ್ ಬಿಶಪ್ "ಕಾರ್ಲೋಸ್ ಬ್ರಾತ್ ವೇಟ್, ಕಾರ್ಲೋಸ್ ಬ್ರಾತ್‌ವೇಟ್, ಈ ಹೆಸರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ," ಎಂದಿದ್ದರು.

4. ಪಾಕಿಸ್ತಾನ ಮುಡಿಗೆ ಚಾಂಪಿಯನ್ಸ್ ಕಿರೀಟ
ಈಗ ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಬಲಿಷ್ಠ ತಂಡ ಹೌದು. ಹಾಗಂತ ಭಾರತದ ಬದ್ಧ ಎದುರಾಳಿ ತಂಡ ಪಾಕಿಸ್ತಾನವನ್ನು ಕಡೆಗಣಿಸುವಂತಿಲ್ಲ. ಯಾಕೆಂದರೆ ಟಿ20 ವಿಶ್ವಕಪ್ ಗೆದ್ದ ಪಟ್ಟಿಯಲ್ಲಿ ಪಾಕಿಸ್ತಾನ ತಂಡ ಕೂಡ ಇದೆ. 2009ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾವನ್ನು ಸೋಲಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾವನ್ನು ಪಾಕ್ 138-6ಕ್ಕೆ ಕಟ್ಟಿ ಹಾಕಿತ್ತು. ಬಳಿಕ 139 ರನ್ ಗುರಿಯನ್ನು ಚೇಸ್ ಮಾಡಿತ್ತು. ಆವತ್ತು 40 ಎಸೆತಗಳಲ್ಲಿ ಅಜೇಯ 55 ರನ್ ಚಚ್ಚಿದ್ದ ಶಾಹಿದ್ ಅಫ್ರಿದಿ ಪಾಕ್ ಪಾಲಿಗೆ ಹೀರೋ ಅನ್ನಿಸಿದ್ದರು.

5. ಕಿವೀಸ್ ಬೆವರಿಳಿಸಿದ್ದ ರಂಗನಾ ಹೇರತ್
ಬಾಂಗ್ಲಾದೇಶದಲ್ಲಿ 2014ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಶ್ರೀಲಂಕಾ ಚಾಂಪಿಯನ್ಸ್ ಎನಿಸಿತ್ತು. ಆದರೆ ಕ್ವಾಲಿಫೈಯರ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುವ ಮುನ್ನ ಶ್ರೀಲಂಕಾ ತಂಡ ನ್ಯೂಜಿಲೆಂಡ್ ಎದುರಿಸಿತ್ತು. ಅಂದು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಕೇವಲ 119 ರನ್‌ಗೆ ಬೌಲ್ಡ್ ಔಟ್ ಆಗಿತ್ತು. ಆದರೆ ಅಂದು ಲಂಕಾಕ್ಕೆ ಸ್ಪಿನ್ನರ್ ರಂಗನಾ ಹೇರತ್ ಬಲ ತುಂಬಿದ್ದರು. ಆ ಪಂದ್ಯದಲ್ಲಿ ಹೇರತ್ ಬ್ರೆಂಡನ್ ಮೆಕಲಮ್, ರಾಸ್ ಟೇಲರ್, ಜಿಮ್ಮಿ ನೀಶಮ್, ಲ್ಯೂಕ್ ರೋಂಚಿ ಮತ್ತು ಟ್ರೆಂಟ್ ಬೌಲ್ಟ್ ವಿಕೆಟ್ ಕೆಡವಿ ಬ್ಲ್ಯಾಕ್ ಕ್ಯಾಪ್ಸ್ ಅನ್ನು ಕಾಡಿಸಿದ್ದರು. ಆವತ್ತು ಬರೀ 60 ರನ್ ಗಳಿಸಿದ್ದ ಕಿವೀಸ್ ಪಂದ್ಯ ಸೋತಿತ್ತು. ಹೇರತ್ 5 ವಿಕೆಟ್‌ಗಳ ಸರದಾರನಾಗಿ ಮಿಂಚಿದ್ದರು.

6. ಇಂಗ್ಲೆಂಡ್‌ನ ಅವಿಸ್ಮರಣೀಯ ಚೇಸ್
2016ರಲ್ಲಿ ಭಾರತದ ಮುಂಬೈನಲ್ಲಿ ನಡೆದಿದ್ದ ಪಂದ್ಯವಿದು. ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಇಂಗ್ಲೆಂಡ್‌ಗೆ 230 ರನ್ ಗುರಿ ನೀಡಿತ್ತು. ಹಾಶಿಮ್ ಆಮ್ಲ, ಕ್ವಿಂಟನ್ ಡಿ ಕಾಕ್, ಜೆಪಿ ಡುಮಿನಿ ಅರ್ಧ ಶತಕ ಬಾರಿಸಿದ್ದರಿಂದ ಪ್ರೋಟಿಯಾಸ್ 20 ಓವರ್‌ಗೆ 4 ವಿಕೆಟ್ ಕಳೆದು 229 ರನ್ ಗಳಿಸಿತ್ತು. ಟಿ20 ವಿಶ್ವಕಪ್‌ನಲ್ಲಿ ಎರಡನೇ ಅತ್ಯಧಿಕ ಟೋಟಲ್ ಎಂಬ ದಾಖಲೆಗೆ 229 ರನ್ ಗುರುತಿಸಿಕೊಂಡಿತ್ತು. ಅಂದು ಇಂಗ್ಲೆಂಡ್ ಪರ ಜೋ ರೂಟ್ 44 ಎಸೆತಗಳಲ್ಲಿ 83 ರನ್, ಜೇಸನ್ ರಾಯ್ 16 ಎಸೆತಗಳಲ್ಲಿ 43 ರನ್ ಚಚ್ಚಿದ್ದರು. ಕೊನೇ ಓವರ್‌ನಲ್ಲಿ ಇಂಗ್ಲೆಂಡ್ 2 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೂ ಮೊಯೀನ್ ಅಲಿ ಇನ್ನೂ ಎರಡು ಎಸೆತಗಳು ಬಾಕಿ ಉಳಿಸಿ ಗುರಿ ತಲುಪಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications