
ಬೆಂಗಳೂರು, ಫೆಬ್ರವರಿ 7: ಭಾರತದ ಸ್ಪಿನ್ ಮಾಂತ್ರಿಕ, ಕನ್ನಡಿಗ ಅನಿಲ್ ಕುಂಬ್ಳೆ ಅವರು ಅವರೂಪದ ಸಾಧನೆಗಾಗಿ ಇತಿಹಾಸ ಪುಟದಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದು ಫೆಬ್ರವರಿ 7ರ ಇದೇ ದಿನ. ಅಂದು ಕುಂಬ್ಳೆ ಅವರು ಪಾಕಿಸ್ತಾನದ ಹತ್ತೂ ವಿಕೆಟ್‌ಗಳನ್ನು ಉರುಳಿಸಿ ವಿಶ್ವದ ಗಮನ ಸೆಳೆದಿದ್ದರು.
ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ 1999ರ ಫೆಬ್ರವರಿ 7ರಂದು ಮುಕ್ತಾಯಗೊಂಡ ಭಾರತ-ಪಾಕಿಸ್ತಾನ ದ್ವಿತೀಯ ಟೆಸ್ಟ್ ನಲ್ಲಿ ಅನಿಲ್ ಕುಂಬ್ಳೆ 10ಕ್ಕೆ 10 ವಿಕೆಟ್‌ಗಳನ್ನು ಒಬ್ಬರೇ ಕೆಡವಿದ್ದರು. ಪಾಕಿಸ್ತಾನದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅನಿಲ್ 74 ರನ್ನಿಗೆ 10 ವಿಕೆಟ್‌ಗಳನ್ನು ಪಡೆದಿದ್ದರು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಭಾರತ 252+339 ರನ್ ಗಳಿಸಿತ್ತು. ಆದರೆ ಪಾಕಿಸ್ತಾನ ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ತೋರಿಸಿರಲಿಲ್ಲ. 172+207 ರನ್ ಬಾರಿಸಿದ ಪಾಕಿಸ್ತಾನ ಈ ಪಂದ್ಯವನ್ನು 212 ರನ್‌ಗಳಿಂದ ಸೋತಿತ್ತು. ಭಾರತ ಪರ ಸದಗೋಪನ್ ರಮೇಶ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ರಮೇಶ್ 60+96 ರನ್ ಕೊಡುಗೆ ತಂಡಕ್ಕೆ ಲಭಿಸಿತ್ತು.
ಈ ಪಂದ್ಯದಲ್ಲಿ ತಂಡದ ನಾಯಕತ್ವವನ್ನು ಮೊಹಮ್ಮದ್ ಅಝರುದ್ದೀನ್ ವಹಿಸಿದ್ದರು. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಹೀಗೆ ಕನ್ನಡದ ಮೂವರೂ ಕ್ರಿಕೆಟ್ ದೈತ್ಯರು ಭಾರತ ತಂಡದಲ್ಲಿ ಇದ್ದಿದ್ದು ವಿಶೇಷ. ಎರಡು ಪಂದ್ಯಗಳ ಈ ಸರಣಿ 1-1ರಿಂದ ಸಮಬಲಗೊಂಡಿತ್ತು.
ಅಂತೂ ಅಂದು ದ್ವಿತೀಯ ಟೆಸ್ಟ್ ನಲ್ಲಿ ಕುಂಬ್ಳೆ ಹೀರೋ ಆಗಿ ಮೆರೆದಿದ್ದರು. ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಸಾಧನೆಯನ್ನು ಇಂಗ್ಲೆಂಡ್‌ನ ಜಿಮ್ ಲ್ಯಾಕರ್ ಹೊಂದಿದ್ದರು. ಕುಂಬ್ಳೆಯೂ ಈಗ ಲ್ಯಾಕರ್ ಸಾಲಿನಲ್ಲಿದ್ದಾರೆ. ಅಂದ್ಹಾಗೆ ವಿಶ್ವದಲ್ಲಿ ಈ ದಾಖಲೆ ಮಾಡಿರೋದು ಲ್ಯಾಕರ್, ಕುಂಬ್ಳೆ ಇಬ್ಬರೆ.