
2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಕುರಿತಾಗಿ ಸಾಕ್ಷ್ಯಚಿತ್ರವು ಸದ್ಯದಲ್ಲಿಯೇ ತೆರಕಾಣಲಿದೆ. OTT ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ವೂಟ್ ಸೆಲೆಕ್ಟ್ ಖ್ಯಾತ ನಿರ್ದೇಶಕ ನೀರಜ್ ಪಾಂಡೆ ಅವರ ಸಹಯೋಗದೊಂದಿಗೆ ಈ ಸಾಕ್ಷ್ಯಚಿತ್ರ ಸಿದ್ಧಗೊಳ್ಳುತ್ತಿದ್ದು, ಈ ಪ್ರಾಜೆಕ್ಟ್‌ಗೆ 'ಬ್ಯಾಂಡನ್ ಮೇ ಥಾ ದಮ್' ಎಂಬ ಹೆಸರನ್ನಿಡಲಾಗಿದೆ.
ಆಸ್ಟ್ರೇಲಿಯಾ ನೆಲದಲ್ಲಿ ಭಾರತವು ಮೊದಲ ಟೆಸ್ಟ್‌ನಲ್ಲಿ ಕೇವಲ 36ರನ್‌ಗಳಿಗೆ ಆಲೌಟ್ ಆದರೂ ಸಹ ಹೇಗೆ ಅದ್ಭುತವಾಗಿ ಕಂಬ್ಯಾಕ್ ಮಾಡಿ ಟೆಸ್ಟ್ ಸರಣಿಯನ್ನ 2-1ರಿಂದ ಜಯಗಳಿಸಿತು ಎಂಬುದರ ಕುರಿತಾದ ಸಾಕ್ಷ್ಯಚಿತ್ರ ಇದಾಗಿದ್ದು, ಇದೇ ಜೂನ್ 16 ರಂದು ಬಿಡುಗಡೆಯಾಗಲಿದೆ.
ಭಾರತದ ಮಾಜಿ ನಾಯಕ ಮಹೇಂದ್ರ ಸೀಂಗ್ ಧೋನಿ ಅವರ ಜೀವನಚರಿತ್ರೆಗಾಗಿ ಪಾಂಡೆ ಹೆಚ್ಚು ಹೆಸರುವಾಸಿಯಾಗಿದ್ದಾರೆ ಮತ್ತು ಮುಂಬರುವ ಸರಣಿಯು ಇದೇ ರೀತಿಯ ಖ್ಯಾತಿಗಳಿಸುವ ನಿರೀಕ್ಷೆ ಹೆಚ್ಚಿದೆ.
ಈ ಸಾಕ್ಷ್ಯಚಿತ್ರದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ಭಾವನೆಗಳು, ತಂಡದೊಳಗಿನ ವಾತಾವರಣ ಹಾಗೂ ಐತಿಹಾಸಿಕ ಗೆಲುವಿನ ಸಂಭ್ರಮದ ಕುರಿತು ಕಥೆಯನ್ನ ಕಟ್ಟಿಕೊಡಲಾಗಿದೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ಭಾರತವು ಐತಿಹಾಸಿಕ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನ 2-1ರಿಂದ ಹೇಗೆ ಜಯಿಸಿತು ಎಂಬುದರ ಕುರಿತು ಸುಂದರವಾಗಿ ನಿರ್ಮಿಸಲಾಗಿದೆ.
ಸಾಕ್ಷ್ಯಚಿತ್ರದಲ್ಲಿ ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ರಿಷಭ್ ಪಂತ್, ಚೇತೇಶ್ವರ ಪೂಜಾರ ಮತ್ತು ಮೊಹಮ್ಮದ್ ಸಿರಾಜ್ ಅಲ್ಲದೆ, ಎರಡೂ ಕಡೆಯ ಇತರ ಅನೇಕ ಕ್ರಿಕೆಟಿಗರು ದೃಶ್ಯದ ಹಿಂದಿನ ಕ್ಲಿಪ್ಪಿಂಗ್‌ಗಳಲ್ಲಿದ್ದಾರೆ. ಐತಿಹಾಸಿಕ ಸರಣಿಯ ಭಾಗವಾಗಿದ್ದ ತರಬೇತುದಾರರು ಮತ್ತು ಪತ್ರಕರ್ತರು ಕೂಡ ಪಾಂಡೆ ಅವರ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.
ಭಾರತ ತಂಡವು ಮೊದಲ ಟೆಸ್ಟ್‌ನಲ್ಲಿ ಕೇವಲ 36ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗ ಅನುಭವಿಸಿತು. ಇದರ ಜೊತೆಗೆ ತಂಡದ ಅರ್ಧದಷ್ಟು ಆಟಗಾರರು ಗಾಯಗೊಂಡು ಸರಣಿಯಿಂದ ಹೊರಬಿದ್ದರೂ ಸಹ ಭಾರತವು ಹೇಗೆ ಟೆಸ್ಟ್ ಸರಣಿ ಗೆದ್ದಿತು ಎಂಬ ಎಲ್ಲಾ ಅಂಶಗಳನ್ನ ಈ ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ. ಇದು ಭಾರತದ ಟೆಸ್ಟ್ ಇತಿಹಾಸದಲ್ಲಿ ವಿದೇಶದಲ್ಲಿ ಕಂಡಂತಹ ಅತ್ಯುತ್ತಮ ಸರಣಿ ಗೆಲುವುಗಳಲ್ಲಿ ಒಂದಾಗಿದೆ.