ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹೊಸ ಹೆಡ್‌ಕೋಚ್ ಸಿಕ್ಕಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಹೆಡ್ ಕೋಚ್ ಹುದ್ದೆಗೆ ಆಕಿಬ್ ಜಾವೇದ್ ಅವರ ಹೆಸರನ್ನು ಪ್ರಕಟಿಸಿದೆ. ಪಾಕಿಸ್ತಾನದ ಪುರುಷರ ಕ್ರಿಕೆಟ್ ತಂಡದ ಹಂಗಾಮಿ ವೈಟ್ ಬಾಲ್ ಹೆಡ್‌ಕೋಚ್ ಆಗಿ ಆಕಿಬ್ ಜಾವೇದ್ ಅವರ ನೇಮಕಗೊಂಡಿರುವುದನ್ನು ಪಿಸಿಬಿ ಮತ್ತು ಐಸಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಕಟಿಸಿವೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರವರೆಗೆ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಹಂಗಾಮಿ ಹೆಡ್ ಕೋಚ್ ಆಗಿ ಆಕಿಬ್ ಜಾವೇದ್ ಅವರನ್ನು ನೇಮಕ ಮಾಡಿರುವುದಾಗಿ ಪಿಸಿಬಿ ಪ್ರಕಟಿಸಿದೆ. ಜಾವೇದ್ ಪಾಕಿಸ್ತಾನದ ಮಾಜಿ ಆಟಗಾರ. ಅವರು ಜೇಸನ್ ಗಿಲ್ಲೆಸ್ಪಿ ಬದಲಿಗೆ ತಂಡದ ಹಂಗಾಮಿ ಹೆಡ್ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಗಿಲ್ಲೆಸ್ಪಿ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ತಂಡವನ್ನು ನಿರ್ವಹಿಸುತ್ತಿದ್ದಾರೆ. ಗ್ಯಾರಿ ಕರ್ಸ್ಟನ್ ಅವರ ರಾಜೀನಾಮೆಯ ನಂತರ ಗಿಲ್ಲೆಸ್ಪಿ ಪಾಕಿಸ್ತಾನ ವೈಟ್ ಬಾಲ್ ತಂಡದ ಹೆಡ್‌ಕೋಚ್ ಪಾತ್ರವನ್ನು ವಹಿಸಿಕೊಂಡಿದ್ದರು.

ಪಿಸಿಬಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದೆ. ಮಾಜಿ ಅಂತಾರಾಷ್ಟ್ರೀಯ ವೇಗದ ಬೌಲರ್ ಆಕಿಬ್ ಜಾವೇದ್ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರವರೆಗೆ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಹಂಗಾಮಿ ಹೆಡ್‌ಕೋಚ್ ಆಗಿ ನೇಮಕಗೊಂಡಿದ್ದಾರೆ ಎಂದು ತನ್ನ ಪ್ರಕಟಣೆ ತಿಳಿಸಿದೆ. ಇದರ ಮಧ್ಯೆ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ರೆಡ್ ಬಾಲ್ ಹೆಡ್‌ಕೋಚ್ ಆಗಿ ಉಳಿಯುವುದಾಗಿ ಘೋಷಿಸಿದ ಜೇಸನ್ ಗಿಲ್ಲೆಸ್ಪಿ ಅವರನ್ನು ಹುದ್ದೆಯಿಂದ ವಜಾಗೊಳಿಸುವ ವಂದತಿಗಳನ್ನು ಪಿಸಿಬಿ ತಳ್ಳಿ ಹಾಕಿದೆ.
ಪಿಸಿಬಿ 2019 ರಿಂದ 2024ರ ವರಗೆ ಒಟ್ಟು ಹನ್ನೊಂದು ಬಾರಿ ಪಾಕಿಸ್ತಾನ ತಂಡದ ಹೆಡ್‌ಕೋಚ್‌ಗಳನ್ನು ಬದಲಾವಣೆ ಮಾಡಿದೆ. ಈ ಹೆಡ್‌ಕೋಚ್‌ಗಳ ಅಧಿಕಾರವಧಿಯಲ್ಲಿ ಪಾಕಿಸ್ತಾನ ತಂಡ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ. ಇತ್ತೀಚೆಗೆ 22 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.
ಭಾರತ ಎರಡನೇ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಕೋಚ್ ಗ್ಯಾರಿ ಕರ್ಸ್ಟನ್ ಇತ್ತೀಚೆಗೆ ಪಾಕಿಸ್ತಾನದ ಹೆಡ್‌ಕೋಚ್ ಆಗಿದ್ದರು. ಆದರೆ, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ನಂತರ ಗಿಲ್ಲೆಸ್ಪಿ ಅವರನ್ನು ಪಾಕಿಸ್ತಾನ ವೈಟ್-ಬಾಲ್ ತಂಡಕ್ಕೆ ಹಂಗಾಮಿ ಹೆಡ್‌ಕೋಚ್‌ನ್ನಾಗಿ ಮಾಡಲಾಯಿತು. ಈಗ ಅವರೂ ಕೂಡ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.