
2008 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ ಅವರು 2012ರ ಸಮಯಕ್ಕೆ ಭಾರತದ ಸ್ಟಾರ್ ಆಟಗಾರ ಆಗಿಬಿಟ್ಟರು. ತಮ್ಮ ಅದ್ಭುತ ಪ್ರದರ್ಶನದ ಜತೆಗೆ ನಾಯಕನಾಗಿ ಟೀಂ ಇಂಡಿಯಾವನ್ನು ಎಲ್ಲಾ ಫಾರ್ಮೆಟ್ ಗಳಲ್ಲಿಯೂ ಮುನ್ನಡೆಸಿದ ಕೊಹ್ಲಿ ಯಶಸ್ವಿ ನಾಯಕನಾಗಿ ನಿಂತಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಆಗಿರುವ ಬಾಬರ್ ಅಜಾಮ್ 2015 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ಉತ್ತಮ ಪ್ರದರ್ಶನದ ನೆರವಿನೊಂದಿಗೆ ಎಲ್ಲಾ ಫಾರ್ಮೆಟ್ ಗಳ ಟಾಪ್ 10 ಬ್ಯಾಟ್ಸ್ ಮನ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡು ಯಶಸ್ವಿ ಆಟಗಾರನಾಗಿದ್ದಾರೆ. ಬಾಬರ್ ಅಜಾಮ್ ಅವರ ಈ ಯಶಸ್ವಿ ಆಟ ಇದೀಗ ಅವರನ್ನು ಕೊಹ್ಲಿ ಅವರ ಜೊತೆ ಹೋಲಿಕೆ ಮಾಡಿ ಮಾತನಾಡುವ ಹಾಗೆ ಮಾಡಿದೆ.
ಈ ವಿಷಯದ ಕುರಿತಾಗಿ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ಅಬ್ದುಲ್ ರಜಾಕ್ ಅವರು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದು ಬಾಬರ್ ಅಜಾಮ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹೋಲಿಕೆ ಮಾಡುವ ಕೆಲಸವನ್ನು ಮಾಡಲೇ ಬಾರದು ಎಂದಿದ್ದಾರೆ. ಅಷ್ಟೇ ಅಲ್ಲದೆ ಭಾರತೀಯ ಕ್ರಿಕೆಟ್ ಆಟಗಾರರನ್ನು ಪಾಕಿಸ್ತಾನ ಕ್ರಿಕೆಟ್ ಆಟಗಾರರ ಜೊತೆ ಹೋಲಿಕೆ ಮಾಡಬೇಡಿ ಯಾಕೆಂದರೆ ಪಾಕಿಸ್ತಾನ ಕ್ರಿಕೆಟ್ ಭಾರತ ಕ್ರಿಕೆಟ್ ಗಿಂತ ಹೆಚ್ಚಿನ ಪ್ರತಿಭಾವಂತ ಆಟಗಾರರನ್ನು ಹೊಂದಿದೆ ಎಂದು ರಜಾಕ್ ಹೇಳಿದ್ದಾರೆ.
ನೀವು ನಮ್ಮ ಕ್ರಿಕೆಟ್ ಇತಿಹಾಸವನ್ನು ತೆಗೆದು ನೋಡಿದರೆ ಮೊಹಮ್ಮದ್ ಯೂಸುಫ್ , ಇಂಜಮಾಮ್ ಉಲ್ ಹಕ್ , ಸೈಯದ್ ಅನ್ವರ್ , ಜಾವೆದ್ ಮಿಯಾಂದಾದ್ , ಜಹೀರ್ ಅಬ್ಬಾಸ್ ಮತ್ತು ಇಜಾಜ್ ಅಹ್ಮದ್ ರಂತಹ ಅನೇಕ ಶ್ರೇಷ್ಠ ಆಟಗಾರರನ್ನು ಹೊಂದಿದ್ದೇವೆ ಎಂದು ರಜಾಕ್ ಹೇಳಿದ್ದಾರೆ.
ಮುಂದುವರಿದು ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಾಮ್ ಅವರ ಹೋಲಿಕೆ ಕುರಿತು ಸಹ ರಜಾಕ್ ಮಾತನಾಡಿದ್ದು, ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಾಮ್ ಇಬ್ಬರೂ ಸಹ ಬಹಳ ವಿಭಿನ್ನವಾದ ಆಟಗಾರರು. ಈ ಇಬ್ಬರ ನಡುವೆ ಹೋಲಿಕೆ ಮಾಡಿ ಅತ್ಯುತ್ತಮ ಆಟಗಾರ ಯಾರು ಎಂದು ತಿಳಿಯಬೇಕಾದರೆ ಮೊದಲು ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯಗಳನ್ನು ಏರ್ಪಡಿಸಬೇಕು ಎಂದಿದ್ದಾರೆ. ಬಾಬರ್ ಅಜಾಮ್ ಒಬ್ಬ ಪ್ರತಿಭಾವಂತ ಆಟಗಾರ ಭವಿಷ್ಯದಲ್ಲಿ ಆತ ಎಲ್ಲಾ ದಾಖಲೆಗಳನ್ನು ಮುರಿಯಬಲ್ಲ ಇಂದು ರಜಾಕ್ ವಿಶ್ವಾಸ ವ್ಯಕ್ತಪಡಿಸಿದರು.