ಭಾರತ ತಂಡದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಪ್ರಸಕ್ತ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಓಪನರ್ ಅಭಿಷೇಕ್, ಅರ್ಧಶತಕ ಬಾರಿಸುತ್ತಲೇ "L" ಟೈಪ್ ಸೆಲಬ್ರೇಷನ್ ಮಾಡಿ ಗಮನ ಸೆಳೆದರು. ಹಾಗಿದ್ದರೆ ಈ ಸೆಲಬ್ರೇಷನ್ ಹಿಂದಿನ ಗುಟ್ಟೇನು ಎಂಬುದನ್ನು ತಿಳಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ನಡೆಸಿದರು. ಈ ವೇಳೆ ಟೀಮ್ ಇಂಡಿಯಾ 172 ರನ್‌ಗಳ ಗುರಿಯನ್ನು ಬೆನ್ನಟ್ಟಿದಾಗ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 5 ಅಮೋಘ ಸಿಕ್ಸರ್‌ಗಳನ್ನು ಒಳಗೊಂಡ 74 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ನಂತರ, ಅಭಿಷೇಕ್ ವಿಶೇಷ ಎಲ್ ಸೆಲೆಬ್ರೇಷನ್ ಮಾಡಿದರು.

ಅಭಿಷೇಕ್ ಶರ್ಮಾ ಅರ್ಧಶತಕ ಬಾರಿಸುತ್ತಲೇ ತಮ್ಮ ಸಿಗ್ನಿಚರ್ ಸ್ಟೈಲ್ ಸಿಂಬಾಲ್ ಮಾಡಿದರು. ಟೀಮ್ ಇಂಡಿಯಾ ಪಂದ್ಯವನ್ನು ಗೆದ್ದ ಬಳಿಕ ಅಭಿಷೇಕ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಮಾತನಾಡಿದರು. ಈ ವೇಳೆ ಸೂರ್ಯ, ಅಭಿಷೇಕ್ ಅವರಿಗೆ "ಎಲ್" ಟೈಪ್ ಸೆಲೆಬ್ರೇಷನ್ ಹಿಂದಿನ ಗುಟ್ಟೇನು ಎಂಬುದನ್ನು ಕೇಳಿದರು. ಇದಕ್ಕೆ ಉತ್ತರ ನೀಡಿದ ಅಭಿಷೇಕ್ ಎಲ್ ಎಂದರೆ ಪ್ರೀತಿ. ಈ ಆಚರಣೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರೀತಿಸುವವರಿಗೆ" ಎಂದು ಉತ್ತರಿಸಿದರು.
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಈ ಅಮೋಘ ಫಾರ್ಮ್ ಎದುರಾಳಿಗಳ ಚಿಂತೆಯನ್ನು ಹೆಚ್ಚಿಸಿದೆ. ಸೂಪರ್ 4 ಹಂತದಲ್ಲಿ ಟೀಮ್ ಇಂಡಿಯಾ ಇನ್ನು 2 ಪಂದ್ಯಗಳನ್ನು ಆಡಬೇಕಿದೆ. ಸೆ.24 ರಂದು ಬಾಂಗ್ಲಾದೇಶದ ವಿರುದ್ಧ, ಸೆ.26 ರಂದು ಶ್ರೀಲಂಕಾ ವಿರುದ್ಧ ಕಾದಟವನ್ನು ನಡೆಸಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದೇ ಆದಲ್ಲಿ ಫೈನಲ್ ಪ್ರವೇಶಿಸುವ ಆಸೆ ಜೀವಂತವಾಗಿರುತ್ತದೆ. ಈಗಾಗಲೇ ಆಡಿರುವ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ, ಫೈನಲ್ ಮೇಲೆ ಕಣ್ಣು ನೆಟ್ಟಿದೆ. ಈ ವೇಳೆ ಅಭಿಷೇಕ್ ಶರ್ಮಾ ಅವರ ಫಾರ್ಮ್ ಸಹ ಮಹತ್ವದಾಗಿದೆ.