ಐಪಿಎಲ್ 10: 4 ಕೋಟಿಗೆ ಬಿಕರಿಯಾದ ಅಫ್ಘಾನಿಸ್ತಾನದ 18ರ ಪೋರ!
ಬೆಂಗಳೂರು, ಫೆಬ್ರವರಿ 20: ಇದೇ ಮೊದಲ ಬಾರಿಗೆ ಐಪಿಎಲ್ ಗೆ ಅಫ್ಘಾನಿಸ್ತಾನ ಆಟಗಾರರ ರಂಗ ಪ್ರವೇಶವಾಗಿದೆ. ಇಬ್ಬರು ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರರು ಐಪಿಎಲ್ 10ನೇ ಸೀಸನಿನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಅಚ್ಚರಿಯ ರೀತಿಯಲ್ಲಿ ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ರಶೀದ್ ಖಾನ್ ಅರ್ಮಾನ್ 4 ಕೋಟಿ ರೂಪಾಯಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ.[ಹರಾಜು ನಂತರ ವಿರಾಟ್ ಕೊಹ್ಲಿ ಆರ್ ಸಿಬಿ ಪಡೆ ಹೀಗಿದೆ]
ಇನ್ನೊಬ್ಬ ಆಟಗಾರ ಮೊಹಮ್ಮದ್ ನಬಿ ಕೂಡಾ ಹೈದರಾಬಾದ್ ತಂಡ ಸೇರಿದ್ದು 30 ಲಕ್ಷಕ್ಕೆ ಬಿಕರಿಯಾಗಿದ್ದಾರೆ. ಈ ಮೂಲಕ ಯುದ್ಧಪೀಡಿತ ಅಫ್ಘಾನಿಸ್ತಾನದ ಆಟಗಾರರು ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಪ್ರವೇಶಿಸಿದ್ದಾರೆ. ಈ ಹಿಂದೆ ಟಿ-20 ವಿಶ್ವಕಪ್ ಮತ್ತು ಏಷ್ಯಾಕಪ್ ನಲ್ಲಿ ಅಫ್ಘಾನಿಸ್ತಾನದ ಆಟಗಾರರು ಗಮನಾರ್ಹ ಪ್ರದರ್ಶನ ನೀಡಿ ವಿಶ್ವದ ಕ್ರಿಕೆಟ್ ಅಭಿಮಾನಗಳ ಗಮನ ಸೆಳೆದಿದ್ದರು.['ಫ್ಯುಮ' ಕಂಪನಿ ಜತೆ ವಿರಾಟ್ ಕೊಹ್ಲಿ 100 ಕೋಟಿ ರು. ಡೀಲ್!]

ರಶೀದ್ ಖಾನ್ ಬಿಕರಿ ಹೀಗಿತ್ತು
ಸರಬ್ಜೀತ್ ಲಡ್ಡಾ ಮಾರಟವಾಗದೆ ಉಳಿದ ನಂತರ ಅಫ್ಘಾನಿಸ್ತಾನದ ರಶೀದ್ ಖಾನ್ ಅರ್ಮಾನ್ ಹೆಸರನ್ನು ಹರಾಜಿಗೆ ತೆಗೆದುಕೊಳ್ಳಲಾಯಿತು. ಆರಂಭದಲ್ಲೇ ರಶೀದ್ ಖರೀದಿಗೆ ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಗಿ ಬಿದ್ದವು ಇದರಿಂದ ಮೂಲ ಬೆಲೆ 50 ಲಕ್ಷದಿಂದ ಚಕ್ಕನೆ 2 ಕೋಟಿ ದಾಟಿತು.

4ಕೋಟಿಗೆ ಮಾರಟ
ನೋಡ ನೋಡುತ್ತಿದ್ದಂತೆ ತಂಡಗಳು ಹೆಚ್ಚಿನ ಬೆಲೆಗೆ ಬಿಡ್ ಸಲ್ಲಿಸಿದ್ದರಿಂದ ಅಚ್ಚರಿಯ ರೀತಿಯಲ್ಲಿ ರಶೀದ್ ಖಾನ್ 4 ಕೋಟಿಗೆ ಮಾರಾಟವಾದರು. ಐಪಿಎಲ್ ನಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಅಫ್ಘನ್ ಕ್ರಿಕೆಟಿಗ ಎಂಬ ದಾಖಲೆಯೂ ರಶೀದ್ ಪಾಲಾಯಿತು.

ರಶೀದ್ ಯಾರು?
ರಶೀದ್ ಖಾನ್ ಅರ್ಮನ್ ಗೆ ಇನ್ನೂ 18 ವರ್ಷ. 1998ರಲ್ಲಿ ಹುಟ್ಟಿದ ಲೆಗ್ ಸ್ಪಿನ್ನರ್ ರಶೀದ್ 21 ಟಿ-20 ಪಂದ್ಯಗಳಿಂದ 31 ವಿಕೆಟ್ ಪಡೆದಿದ್ದಾರೆ; ಸರಾಸರಿ ಬರೋಬ್ಬರಿ 16. ಪ್ರತಿ ಓವರಿಗೆ ಅವರು ನೀಡಿದ ಸರಾಸರಿ ರನ್ (ಎಕಾನಮಿ) ಕೇವಲ 6. ಕೆಳ ಕ್ರಮಾಂಕದಲ್ಲಿ ಬಂದು ಒಂದಷ್ಟು ಬ್ಯಾಟ್ ಬೀಸುವ ಸಾಮರ್ಥ್ಯವೂ ರಶೀದ್ ಗೆ ಇದೆ.

ಟಾಪ್ 5 ಬೌಲರ್
ರಶೀದ್ ಐಸಿಸಿ ಟಿ-20 ಬೌಲರ್ ಗಳ ರ್ಯಾಂಕಿಂಗ್ ನಲ್ಲಿ 5ನೇ ಸ್ಥಾನದಲ್ಲಿದ್ದಾರೆ. ವಿಶೇಷ ಅಂದರೆ ಶ್ರೇಷ್ಠ ಬೌಲರ್ ಗಳಾದ ಸುನೀಲ್ ನಾರಾಯಣ್, ಆರ್ ಅಶ್ವಿನ್, ಮುಸ್ತಾಫಿಜುರ್ ರೆಹಮಾನ್ ರಶೀದ್ ನಂತರದ ಸ್ಥಾನದಲ್ಲಿದ್ದಾರೆ. 2016ರ ಟಿ-20 ವಿಶ್ವಕಪ್ ನಲ್ಲಿ ಇದೇ ಅರ್ಮನ್ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಕೂಡಾ ಹೌದು.

ಜೀವಮಾನದ ಅವಕಾಶ
ಐಪಿಎಲ್ ನ್ನೇ ಜೀವನವನ್ನಾಗಿ ಮಾಡಿಕೊಂಡ ಹಲವು ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಐಪಿಎಲ್ ಅವಕಾಶವನ್ನೇ ಬಳಸಿಕೊಂಡು ಬೆಳೆದ ಕ್ರಿಕೆಟಿಗರು ಇದ್ದಾರೆ. ರಶೀದ್ ಖಾನ್ ಅರ್ಮಾನ್ ಗೆ ಈಗ ಅಂತಹದ್ದೇ ಅವಕಾಶವೊಂದು ಸೃಷ್ಟಿಯಾಗಿದೆ. ಹಾಗೆ ನೋಡಿದರೆ ಯುದ್ಧ ಪೀಡಿತ ದೇಶದಲ್ಲಿ ಕೆಲವೇ ಲಕ್ಷಗಳಿಗೆ ಆಡುತ್ತಿದ್ದ ರಶೀದ್ ಖಾನ್ ತರಹದವರಿಗೆ ಐಪಿಎಲ್ ನಲ್ಲಿ ಸಿಕ್ಕಿರುವ 4 ಕೋಟಿ ದೊಡ್ಡ ಮೊತ್ತವೇ ಸರಿ. ಈ ಭರ್ಜರಿ ಮೊತ್ತ ಹಲವು ಅಫ್ಘಾನಿಸ್ತಾನದ ಎಳೆ ಕ್ರಿಕೆಟಿಗರಿಗೆ ಪ್ರೇರಣೆಯೂ ಆಗಬಲ್ಲದು.

ಅಫ್ಘಾನಿಸ್ತಾನ ಕ್ರಿಕೆಟಿಗಿದು ಪರ್ವ ಕಾಲ
2016ರ ಟಿ-20 ವಿಶ್ವಕಪ್ ನಲ್ಲಿ ಚಾಂಪಿಯ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ್ದ ಏಕೈಕ ತಂಡವೆಂದರೆ ಅದು ಅಫ್ಘಾನಿಸ್ತಾನ. ಈ ಮೂಲಕ ಇನ್ನೂ ಕ್ರಿಕೆಟ್ ಜಗತ್ತಿನ ಹಸುಗೂಸು ಅಫ್ಘಾನಿಸ್ತಾನ ಎಲ್ಲರ ಹುಬ್ಬೇರಿಸಿತ್ತು. ಇತ್ತೀಚೆಗೆ ಅಫ್ಘಾನಿಸ್ತಾನದ ಹಲವು ಆಟಗಾರರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನ ಸೂಪರ್ ಲೀಗ್ ಗಳಲ್ಲಿ ಪಾಲ್ಗೊಂಡಿದ್ದರು. ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಗೂ ಅಫ್ಘಾನಿಸ್ತಾನದವರ ಪ್ರವೇಶವಾಗಿದೆ. ಅಫ್ಘಾನಿಸ್ತಾನದಿಂದ ಒಟ್ಟು ಐವರು ಐಪಿಎಲ್ ಹರಾಜು ಪಟ್ಟಿಯಲ್ಲಿದ್ದರು. ಮೂರು ಜನ ಮಾರಾಟವಾಗದೆ ಉಳಿದಿರಬಹುದು, ಆದರೆ 4 ಕೋಟಿಗೆ ರಶೀದ್ ಹರಾಜಾಗಿದ್ದು ಕಡಿಮೆ ಸಾಧನೆ ಏನಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications