ಅಬುದಾಬಿಯಲ್ಲಿ ಬಾಂಗ್ಲಾದೇಶ ತಂಡವನ್ನು 200 ರನ್‌ಗಳಿಂದ ಮಣಿಸಿದ ಅಫ್ಘಾನಿಸ್ತಾನ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈ ಸರಣಿ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಸತತ 5 ಏಕದಿನ ಸರಣಿಯನ್ನು ಗೆದ್ದು ಬೀಗಿದೆ. ಬಾಂಗ್ಲಾ ವಿರುದ್ಧದ ಪಂದ್ಯಕ್ಕೂ ಮುನ್ನ ಅಫ್ಘಾನಿಸ್ತಾನ, ಐರ್ಲೆಂಡ್ ಐರ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡವನ್ನು ಮಣಿಸಿ ಸರಣಿ ಗೆದ್ದಿತ್ತು. ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ತಂಡದ ಅತಿ ದೊಡ್ಡ ಎರಡನೇ ಗೆಲುವಾಗಿದೆ. ಇನ್ನು ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ಕಂಡ ಅತಿ ದೊಡ್ಡ ಗೆಲುವು ಇದಾಗಿದೆ. ಈ ಮೂಲಕ ಅಫ್ಘಾನಿಸ್ತಾನ, ದಕ್ಷಿಣ ಆಪ್ರಿಕಾ ತಂಡದ ದಾಖಲೆಯನ್ನು ಅಳಿಸಿ ಹಾಕಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡದ ರಹಮತುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜಾರ್ದನ್ ಜೋಡಿ ಮೊದಲ ವಿಕೆಟ್‌ಗೆ 15.6 ಓವರ್‌ಗಳಲ್ಲಿ 99 ರನ್‌ಗಳ ಜೊತೆಯಾಟವನ್ನು ನೀಡಿತು. ಈ ವೇಳೆ ರಹಮತುಲ್ಲಾ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 42 ರನ್ ಕಲೆ ಹಾಕಿ ಔಟ್ ಆದರು.

ಎರಡನೇ ವಿಕೆಟ್‌ಗೆ ಸೆಡಿಕುಲ್ಲಾ ಅಟಲ್ (29) ಹಾಗೂ ಇಬ್ರಾಹಿಂ ಜಾರ್ದನ್ ಜೊತೆಗೂಡಿ 74 ರನ್‌ಗಳ ಜೊತೆಯಾಟವನ್ನು ನೀಡಿತು. ಇಬ್ರಾಹಿಂ ಜಾರ್ದನ್ 111 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 95 ರನ್ ಬಾರಿಸಿ 5 ರನ್‌ಗಳಿಂದ ಶತಕವಂಚಿತರಾದರು.
ಅನುಭವಿ ಬ್ಯಾಟರ್ ಮೊಹಮ್ಮದ್ ನಬಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರು ಕೇವಲ 37 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 62 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಆಫ್ಘಾನ್ 9 ವಿಕೆಟ್‌ಗೆ 293 ರನ್ ಕಲೆ ಹಾಕಿತು. ಬಾಂಗ್ಲಾ ಪರ ಸೈಫ್ ಹಸನ್ 3, ಹಸನ್ ಮಹಮೂದ್, ತನ್ವಿರ್ ಇಸ್ಲಾಂ ತಲಾ 2 ವಿಕೆಟ್ ಕಬಳಿಸಿದರು.

294 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ತಂಡದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಬಾಂಗ್ಲಾ ಪರ ಆರಂಭಿಕ ಆಟಗಾರ ಸೈಫ್ ಹಸನ್ 54 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿದರೆ, ಉಳಿದ ಬ್ಯಾಟರ್‌ಗಳು ಸಿಂಗಲ್ ಡಿಜಿಟ್‌ನಲ್ಲಿ ಆಟವನ್ನು ಮುಗಿಸಿದರು. ಪರಿಣಾಮ ಬಾಂಗ್ಲಾ 27.1 ಓವರ್‌ಗಳಲ್ಲಿ 93 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ತಂಡ 23 ರನ್ ಸೇರಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸೋಲು ಕಂಡಿತು. ಅಫ್ಘಾನಿಸ್ತಾನ ತಂಡದ ಪರ ಯುವ ಬೌಲರ್ ಬಿಲಾಲ್ ಸಾಮಿ 33 ರನ್ ನೀಡಿ 5 ವಿಕೆಟ್ ಕಬಳಿಸಿದರು. ಇನ್ನು ಅನುಭವಿ ಸ್ಪಿನ್ ಬೌಲರ್ ರಶೀದ್ ಖಾನ್ 12 ರನ್ ನೀಡಿ ಮೂರು ವಿಕೆಟ್ ಪಡೆದರು.