ಅಫ್ಘಾನ್ ಪಾಲಿಗೆ 2019ರ ವಿಶ್ವಕಪ್ ನಿಜಕ್ಕೂ ನಿರಾಶಾದಾಯಕವಾಗಲಿದೆಯೇ?!

ಲಂಡನ್, ಜೂನ್ 18: ಜಿಂಬಾಬ್ವೆಯನ್ನು ಮಣಿಸಿ ಐಸಿಸಿ ವಿಶ್ವಕಪ್ 2019ರಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳುವ ಮೂಲಕ ಅಘ್ಫಾನಿಸ್ತಾನ ತಂಡ ಜಿಂಬಾಬ್ವೆ, ಐರ್ಲೆಂಡ್‌ನಂತ ತಂಡಗಳಿಗಿಂತ ತಾನು ಬಲಿಷ್ಠ ಎಂಬುದನ್ನು ಸಾರಿತ್ತು. ಇತ್ತ ಕ್ರಿಕೆಟ್ ಜಗತ್ತೂ ಕೂಡ ಅಫ್ಘಾನ್‌ನ ಎರಡನೇ ವಿಶ್ವಕಪ್ ಟೂರ್ನಿಯ ಪ್ರದರ್ಶನ ಹೇಗಿರುತ್ತದೆ ಎಂದು ಕುತೂಹಲದೊಂದಿಗೆ ಕಾಯುತ್ತಿತ್ತು. ಆದರೆ ಅಫ್ಘಾನ್ ಪಾಲಿಗೆ ಈ ಬಾರಿಯ ವಿಶ್ವಕಪ್ ಆಶಾದಾಯಕವಾಗಿ ಉಳಿದಂತಿಲ್ಲ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಕ್ರಿಕೆಟ್ ಇತಿಹಾಸ ಗಮನಿಸಿದರೆ ಕ್ರಿಕೆಟ್ ರಂಗದಲ್ಲಿ ಸೀಮಿತ ಅವಧಿಯಲ್ಲಿ ಬೆಳೆದು ನಿಂತ ಅಫ್ಘಾನಿಸ್ತಾನ ತಂಡ ವಿಶ್ವಕಪ್‌ನಂತ ದೊಡ್ಡ ಟೂರ್ನಿಯಲ್ಲಿ ತನ್ನ ಛಾಪು ಮೂಡಿಸುವಲ್ಲಿ ಎಡವಿದ್ದು ಮಾತ್ರ ನಿಜ. ಇದಕ್ಕೆ ಸಾಕ್ಷಿಯಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಆಡಿರುವ ನಾಲ್ಕೂ ಪಂದ್ಯಗಳಲ್ಲೂ ಗುಲ್ಬಾದಿನ್ ನೈಬ್ ಬಳಗ ಸೋಲಿನ ನಿರಾಸೆ ಅನುಭವಿಸಿದೆ.
ಇಂಗ್ಲೆಂಡ್ vs ಅಫ್ಘಾನಿಸ್ತಾನ, ಜೂನ್ 18, Live ಸ್ಕೋರ್‌ಕಾರ್ಡ್
ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್‌ಗಾಗಿ ಗಮನ ಸೆಳೆಯಲಿಲ್ಲ. ಅತ್ತ ಬೌಲಿಂಗ್‌ಗಾಗಿಯೂ ವಿಶೇಷಾಕರ್ಷಣೆ ಮೂಡಿಸಿಲ್ಲ. 2015ರ ವಿಶ್ವಕಪ್ ನಲ್ಲಿ ಪೂಲ್ 'ಎ'ಯಲ್ಲಿದ್ದ ಅಫ್ಘಾನ್ ಆಡಿದ 6ರಲ್ಲಿ 1 ಗೆಲುವು ದಾಖಲಿಸಿತ್ತು. ಈ ಬಾರಿಯ ಪ್ರದರ್ಶನ ನೋಡುತ್ತಿದ್ದರೆ ಅಫ್ಘಾನ್ ಒಂದೂ ಪಂದ್ಯದಲ್ಲಿ ಗೆಲ್ಲುವಂತೆ ಕಾಣುತ್ತಿಲ್ಲ.

ವಿಶ್ವಕಪ್ ಹೊಸ್ತಿಲಲ್ಲೇ ನಾಯಕನ ಬದಲಾವಣೆ
ಐಸಿಸಿ ವಿಶ್ವಕಪ್ 2019ಕ್ಕೆ ಕೇವಲ ಒಂದು ತಿಂಗಳು ಬಾಕಿಯಿದೆ ಅನ್ನುವಾಗಲೇ ಅಫ್ಘಾನ್ ಕ್ರಿಕೆಟ್ ಬೋರ್ಡ್, ಬಹುಕಾಲ ತಂಡ ಮುನ್ನಡೆಸಿದ್ದ ನಾಯಕ ಅಸ್ಘರ್ ಅಫ್ಘಾನ್ ಅವರನ್ನು ಜವಾಬ್ದಾರಿಯಿಂದ ಕೆಳಗಿಳಿಸಿತ್ತು. 2015ರಿಂದಲೂ ಅಫ್ಘಾನ್ ತಂಡ ಮುನ್ನಡೆಸಿದ್ದ 31ರ ಹರೆಯದ ಅಸ್ಘರ್ ನಾಯಕತ್ವದಲ್ಲಿ ಅಫ್ಘಾನ್ ಶೇ. 60 ಪಂದ್ಯಗಳನ್ನು ಗೆದ್ದ ದಾಖಲೆ ಮಾಡಿತ್ತು. ಆದರೆ ಅಸ್ಘರ್ ಸಾಧನೆಗಳನ್ನು ಗಣನೆಗೆ ತೆಗೆದುಕೊಳ್ಳದ ಕ್ರಿಕೆಟ್ ಬೋರ್ಡ್, ಅವರ ಸ್ಥಾನಕ್ಕೆ ಗುಲ್ಬಾದಿನ್ ನೈಬ್ ಅವರನ್ನು ತಂದಿತ್ತು.

ಸ್ಫೋಟಕ ಬ್ಯಾಟ್ಸ್ಮನ್ ನಿರ್ಲಕ್ಷ್ಯ ವಿವಾದ
ಅಫ್ಘಾನ್ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್‌ಗಾಗಿ ವಿಶ್ವದ ಗಮನ ಸೆಳೆದಿದ್ದವರು ಮೊಹಮ್ಮದ್ ಶಹಝಾದ್. ಆದರೆ ಅಫ್ಘಾನ್ ಕ್ರಿಕೆಟ್ ಬೋರ್ಡ್ ಶಹಝಾದ್ ಅವರನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲಿಲ್ಲ. ಗಾಯದ ನೆಪ ನೀಡಿ ಈ ಬಾರಿಯ ವಿಶ್ವಕಪ್ ಟೂರ್ನಿಯಿಂದಲೇ ಮೊಹಮ್ಮದ್ ಶಹಝಾದ್ ಅವರನ್ನು ಹೊರ ದಬ್ಬಿದೆ. ಈ ಬಗ್ಗೆ ಸ್ವತಃ ಶಹಝಾದ್ ಅವರೇ ಬೇಸರ ವ್ಯಕ್ತಪಡಿಸಿದ್ದರು.

ಅಫ್ಘನ್ ಇನ್ನೂ ಕಲಿಯೋದು ಸಾಕಷ್ಟಿದೆ
ಮೈದಾನದಲ್ಲಿ ಪಂದ್ಯ ಗೆದ್ದುಕೊಳ್ಳಲು ಬೇಕಾದ ಯೋಜನೆಗಳನ್ನು ಸಿದ್ಧಪಡಿಸಿ ಅದನ್ನು ಕಾರ್ಯಗತ ಗೊಳಿಸುವ ಕಲೆಯನ್ನು ಅಫ್ಘಾನ್ ಕಲಿಯಬೇಕಿದೆ. ಜೂನ್ 4ರಂದು ಕಾರ್ಡಿಫ್‌ನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಗೆದ್ದುಕೊಳ್ಳಲು ನೈಬ್ ಬಳಗಕ್ಕೆ ಚಿನ್ನದ ಅವಕಾಶವಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡವನ್ನು 201 ರನ್‌ಗೆ ಕಟ್ಟಿ ಹಾಕುವಲ್ಲಿ ಅಫ್ಘಾನ್ ಯಶಸ್ವಿಯಾಗಿತ್ತು. ಆದರೆ ಡಕ್ವರ್ಥ್ ಲೂಯೀಸ್ ನಿಯಮದ ಪ್ರಕಾರ 186 ರನ್ ಗುರಿ ಬೆಂಬತ್ತಿದ್ದ ಅಫ್ಘಾನ್ 152 ರನ್‌ಗೆ ಎಲ್ಲಾ ವಿಕೆಟ್ ಕಳೆದು 34 ರನ್‌ಗೆ ಸೋತಿತ್ತು.

ಮುಂದಿನ ಗೆಲುವುಗಳು ಸುಲಭವಿಲ್ಲ
ಗೆಲ್ಲಲು ಇದ್ದ ಅವಕಾಶಗಳನ್ನು ಸೋತು ನಿರಾಶೆ ಅನುಭವಿಸಿದ್ದ ಅಫ್ಘಾನ್‌ಗೆ ಈ ವಿಶ್ವಕಪ್‌ನಲ್ಲಿ ಮುಂದಿನ ಪಂದ್ಯಗಳನ್ನು ಗೆದ್ದುಕೊಳ್ಳೋದೂ ಸುಲಭವಿಲ್ಲ. ಜೂನ್ 18ರಂದು ಅಫ್ಘಾನ್‌ಗೆ ಆತಿಥೇಯ ಇಂಗ್ಲೆಂಡ್ ವಿರುದ್ಧ ಪಂದ್ಯವಿದ್ದರೆ, ಜೂನ್ 22ರಂದು ಬಲಿಷ್ಠ ಭಾರತ ವಿರುದ್ಧ ಪಂದ್ಯವಿದೆ. ಗೆಲುವಿನ ದೃಢ ಯೋಜನೆಯಲ್ಲಿರುವ ಇಂಗ್ಲೆಂಡ್, ಭಾರತ, ಆಸ್ಟ್ರೇಲಿಯಾ ಇಂಥ ತಂಡಗಳೆದುರು ಅಫ್ಘಾನ್‌ಗೆ ಗೆಲ್ಲುವ ಅವಕಾಶ ಕಡಿಮೆ. ಆದರೂ ಒಂದಿಷ್ಟು ಬದಲಾವಣೆಗಳನ್ನು ತಂದುಕೊಂಡರೆ ಗೆಲ್ಲಲಾಗೋಲ್ಲ ಎಂದೇನಿಲ್ಲ. ಅಫ್ಘಾನ್ ಮುಂದಿನ ಪಂದ್ಯಗಳಲ್ಲಿ ಹೇಗೆ ಆಡಲಿದೆ ಕಾದು ನೋಡೋಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications