ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ನಿರೀಕ್ಷೆಗೂ ಮೀರಿ ಅದ್ಭುತ ಪ್ರದರ್ಶನ ನೀಡಿ ಅಬ್ಬರಿಸುತ್ತಿರುವ ಅಫ್ಘಾನಿಸ್ತಾನ ತಂಡ ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಮುಂದುವರಿದಿದೆ. ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆಯುವ ಪಂದ್ಯದಲ್ಲಿ ಗೆದ್ದು ತನ್ನ ಅವಕಾಶವನ್ನು ಹೆಚ್ಚಿಸಿಕೊಳ್ಳಲು ತಂಡ ಸರ್ವ ಪ್ರಯತ್ನ ನಡೆಸಲಿದೆ. ಆದರೆ ಇದಕ್ಕೂ ಮುನ್ನ ಅಫ್ಘಾನಿಸ್ತಾನ ತಂಡ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅಪ್ಘಾನಿಸ್ತಾನ ತಂಡ ನೀಡಿರುವ ಅದ್ಭುತ ಪ್ರದರ್ಶನದ ಕಾರಣದಿಂದಾಗಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದೆ. ಈ ಚಾಂಒಪಿಯನ್ಸ್ ಟ್ರೋಫಿ ಟೂರ್ನಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಳ್ಳಲಿದ್ದು ವಿಶ್ವಕಪ್‌ನಲ್ಲಿ ಆಡುತ್ತಿರುವ ತಂಡಗಳ ಪೈಕಿ ಅಗ್ರ 7 ತಂಡಗಳು ಮತ್ತು ಆತಿಥೇಯ ಪಾಕಿಸ್ತಾನ ತಂಡ ಒಟ್ಟು 8 ತಂಡಗಳಿಗೆ ಮಾತ್ರ ಅರ್ಹತೆ ಪಡೆದುಕೊಳ್ಳಲಿದೆ. ಈಗಾಗಿ ಅಪ್ಘಾನಿಸ್ತಾನ ತಂಡ ತನ್ನ ಸ್ಥಾನವನ್ನು ಈಗ ಖಚಿತಪಡಿಸಿಕೊಂಡಿದೆ.

ಈ ಬಾರಿಯ ವಿಶ್ವಕಪ್ ಪ್ರಯಾಣ ಅಫ್ಘಾನಿಸ್ತಾನ ತಂಡದ ಪಾಲಿಗೆ ನಿಜಕ್ಕೂ ಐತಿಹಾಸಿಕ. ಕೇವಲ ಮೂರನೇ ವಿಶ್ವಕಪ್ ಟೂರ್ನಿ ಆಡುತ್ತಿರುವ ಅಫ್ಘನ್ ಪಡೆ ಈ ಹಿಂದಿನ ಎರಡು ವಿಶ್ವಕಪ್ ಆವೃತ್ತಿಗಳಲ್ಲಿ ಆಡಿದ್ದಾಗ ಸಾಧಿಸಿದ್ದು ಕೇವಲ ಒಂದು ಗೆಲುವು. ಅದರಲ್ಲೂ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಒಂದೂ ಗೆಲುವು ಸಾಧಿಸಿರಲಿಲ್ಲ. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಿಗೂ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾಗಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಈ ಹಿಂದೆ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿರುವ ಮೂರು ತಂಡಗಳನ್ನು ಅಫ್ಘಾನಿಸ್ತಾನ ತಂಡ ಮಣಿಸಿದೆ ಎನ್ನುವುದು ಗಮನಾರ್ಹ. ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳನ್ನು ಕೂಡ ಅಫ್ಘಾನಿಸ್ತಾನ ಮಣಿಸುವಲ್ಲಿ ಯಶಸ್ವಿಯಾಗಿದೆ. ಇದು ಅಫ್ಘಾನಿಸ್ತಾನ ತಂಡದ ಪಾಲಿಗೆ ನಿಜಕ್ಕೂ ಶ್ರೇಷ್ಠ ಸಂಗತಿಯಾಗಿದೆ.
ಇನ್ನು ಅಫ್ಘಾನಿಸ್ತಾನ ತಂಡ ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಗೆಲುವು ಸಾಧಿಸಿದೆ. ಇದು ತಂಡದ ವಿಶ್ವಕಪ್ ಪಯಣದ ಮೆರುಗು ಹೆಚ್ಚಲು ಕಾರಣವಾಗಿದೆ. ಇದರೊಂದಿಗೆ ಅಫ್ಘನ್ನರ ಸೆಮಿಫೈನಲ್‌ಗೇರುವ ಕನಸು ಹೆಚ್ಚಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಅಫ್ಘಾನಿಸ್ತಾನ ತಂಡ ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ವಿರುದ್ಧ ಗೆಲುವು ಸಾಧಿಸಿದೆ.
ಇದೀಗ ಅಫ್ಘಾನಿಸ್ತಾನ ತಂಡ ತನ್ನ ಮುಂದಿನ ಆಟವನ್ನು ಇಂದು(ನವೆಂಬರ್ 11) ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಆಸಿಸ್ ಪಡೆ ಟೂರ್ನಿಯ ಆರಂಭದಲ್ಲಿ ಮಂಕಾದಂತೆ ಕಂಡು ಬಂದಿದ್ದರು ಕೂಡ ಬಳಿಕ ಅದ್ಭುತವಾಗಿ ತಿರುಗಿಬಿದ್ದಿದ್ದು ಸತತ ಐದು ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಅಫ್ಘಾನಿಸ್ತಾನ ತಂಡಕ್ಕೆ ಈ ಪಂದ್ಯದಲ್ಲಿ ಭಾರೀ ದೊಡ್ಡ ಅಗ್ನಿಪರೀಕ್ಷೆ ನಿಶ್ಚಿತ.