ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರು ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಈ ಹುದ್ದೆಯನ್ನು ನಿರ್ವಹಿಸಲು ಜಡೇಜಾ ಅವರು ಗುವಾಹಟಿಯಲ್ಲಿ ಇಂದು ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲಿ ಅಫ್ಘಾನಿಸ್ತಾನ ತನ್ನ ಎರಡನೇ ಮತ್ತು ಅಂತಿಮ ವಿಶ್ವಕಪ್ ಅಭ್ಯಾಸ ಪಂದ್ಯವನ್ನು ಮಂಗಳವಾರ ಅಕ್ಟೋಬರ್ 3 ರಂದು ಆಡಲಿದ್ದು ಶ್ರೀಲಂಕಾವನ್ನು ಎದುರಿಸಲಿದೆ.
ಅಜಯ್ ಜಡೇಜಾ ಭಾರತ ಕ್ರಿಕೆಟ್ ಕಂಡ ಅದ್ಭುತ ಕ್ರಿಕೆಟಿಗ ಎನಿಸಿಕೊಂಡಿದ್ದರು.2015 ರಲ್ಲಿ ಅವರು ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿಯ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅದಾದ ಬಳಿಕ ಅವರು ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಜಿಸಿದ್ದಾರೆ. ಬರ್ಸಾಪರಾಕ್ರಿಕೆಟ್ ಸ್ಟೇಡಿಯಂನಲ್ಲಿ ಜಡೇಜಾ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಅಫ್ಘಾನಿಸ್ತಾನ ಕ್ರಿಕೆಟ್ ತಂಡ 2015 ಮತ್ತು 2019ರ ನಂತರ ತಮ್ಮ 3ನೇ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಪ್ರತಿಭಾನ್ವಿತ ಆಟಗಾರರ ಪಡೆಯನ್ನು ಹೊಂದಿರುವ ಅಫ್ಘಾನಿಸ್ತಾನ ಕೆಲ ಬಲಿಷ್ಠ ತಂಡಗಳಿಗೂ ಆಘಾತ ನೀಡುವ ಸಾಮರ್ಥ್ಯವನ್ನು ಹೊಂದಿರುವುದು ಸ್ಪಷ್ಟ. ಇಂಥಾ ಸಂದರ್ಭದಲ್ಲಿ ಸ್ಥಳೀಯ ಕ್ರಿಕೆಟಿಗನ ಜ್ಞಾನವನ್ನು ತಂಡದ ಆಟಗಾರರಿಗೆ ನೀಡಲು ನಿರ್ಧರಿಸಿದ್ದು ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಈ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮಾಧ್ಯಮ ಪ್ರಕಟಣೆಯ ಮೂಲಕ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. "ಭಾರತದ ಮಾಜಿ ನಾಯಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಅಜಯ್ ಜಡೇಜಾ ಅವರು ಅಫ್ಘಾನಿಸ್ತಾನ ರಾಷ್ಟ್ರೀಯ ತಂಡದ ಮೆಂಟರ್ ಆಗಿ ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಜವಾಬ್ಧಾರಿ ನಿರ್ವಹಿಸಲಿದ್ದಾರೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಜಯ್ ಜಡೇಜಾ 1992 ರಿಂದ 2000 ರವರೆಗೆ ಭಾರತ ತಂಡದ ಪರವಾಗಿ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದು 26.18 ರ ಸರಾಸರಿಯಲ್ಲಿ 576 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 4 ಅರ್ಧ ಶತಕಗಳಿದ್ದು 96 ರನ್ ಟೆಸ್ಟ್ ಮಾದರಿಯಲ್ಲಿ ಅವರ ಅತ್ಯತ್ತಮ ಸ್ಕೋರ್ ಆಗಿದೆ. ಇನ್ನು ಈ ಸಂದರ್ಭದಲ್ಲಿ ಅವರು 196 ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 37.47 ಸರಾಸರಿಯಲ್ಲಿ 6 ಶತಕ ಮತ್ತು 30 ಅರ್ಧಶತಕಗಳೊಂದಿಗೆ 5359 ರನ್ ಗಳಿಸಿದ್ದಾರೆ.
ಇನ್ನು ಜಡೇಜಾ 111 ಪ್ರಥಮ ದರ್ಜೆ ಮತ್ತು 291 ಲಿಸ್ಟ್ ಎ ಪಂದ್ಯಗಳಲ್ಲಿಯೂ ಆಡಿದ ಅನುಭವ ಹೊಂದಿದ್ದಾರೆ. ಈ ಎರಡೂ ಸ್ವರೂಪಗಳಲ್ಲಿ ಅವರು ಒಟ್ಟು 31 ಶತಕಗಳು ಮತ್ತು 88 ಅರ್ಧಶತಕಗಳೊಂದಿಗೆ 8000 ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.
ಇನ್ನು ಅಫ್ಘಾನಿಸ್ತಾನ ತಂಡ ಅಕ್ಟೋಬರ್ 7 ರಂದು ಧರ್ಮಶಾಲಾದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯವನ್ನು ಆಡಲಿದ್ದು ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.