
ಭಾರತದ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆಗೆ ಚಿನ್ನದಂತಹ ಅವಕಾಶ ನೀಡಿದ್ದಷ್ಟು ಮಣ್ಣು ಪಾಲು ಮಾಡಿದರ ಪರಿಣಾಮ ಅಭಿಮಾನಿಗಳು, ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಬೇಕೆಂದು ಅದೆಷ್ಟೋ ಯುವಕರು ದಿನಂಪ್ರತಿ ಕನಸು ಕಾಣುತ್ತಿರುತ್ತಿದ್ದಾರೆ. ಆದ್ರೆ ಅಜಿಂಕ್ಯ ರಹಾನೆಯಂತಹ ಆಟಗಾರರು ಸರ್ಕಾರಿ ಕೆಲಸದಂತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದು ಆಡುತ್ತಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟೀಕಿಸುತ್ತಿದ್ದಾರೆ.
ಸತತ ವೈಫಲ್ಯಗಳ ನಡುವೆ, ಕ್ಯಾಪ್ಟನ್ ಕೊಹ್ಲಿ ಮತ್ತು ಕೋಚ್ ದ್ರಾವಿಡ್ ಕೃಪಾಕಟಾಕ್ಷದಿಂದ ರಹಾನೆ ತಂಡದಲ್ಲಿ ಮತ್ತೆ ಸ್ಥಾನ ಪಡೆದಿದ್ದಾರೆ. ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಅರ್ಧಶತಕ ದಾಖಲಿಸಿದ್ರೂ, ಆ ಕೊಡುಗೆ ತಂಡದ ಗೆಲುವಿಗೆ ಸಾಧ್ಯವಾಗಲಿಲ್ಲ. ಆದ್ರೀಗ ಅಂತಿಮ ಅವಕಾಶದಂತಿರುವ ಕೇಪ್‌ಟೌನ್ ಟೆಸ್ಟ್‌ನಲ್ಲೂ ರಹಾನೆ ಬಹುಬೇಗ ಪೆವಿಲಿಯನ್‌ನತ್ತ ಸಾಗಿದ್ರು.
ಕಗಿಸೊ ರಬಾಡ ಬೌಲಿಂಗ್‌ನಲ್ಲಿ ಅನುಭವಿ ಅಜಿಂಕ್ಯಾ ರಹಾನೆ ಮತ್ತೊಂದು ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿ, ವಿಕೆಟ್ ಕೀಪರ್ ಕೈಲ್ ವೆರ್ರೆನ್ನೆಗೆ ಕ್ಯಾಚಿತ್ತು 9 ರನ್‌ಗಳಿಗೆ ಔಟಾದ್ರು. ಡ್ರಿಂಕ್ಸ್ ಬ್ರೇಕ್ ಬಳಿಕ ಎದುರಿಸಿದ ಮೊದಲ ಎಸೆತವೂ ಬಹುತೇಕ ಆಡಲು ಸಾಧ್ಯವಾಗದಂತಿತ್ತು. ಆದ್ರೆ ರಹಾನೆ ಏಕಾಗ್ರತೆ ಕಳೆದುಕೊಂಡ ಪರಿಣಾಮ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ್ರು.
ಬೆಂಚ್‌ನಲ್ಲಿ ಕಾಯುತ್ತಿರುವ ಹನುಮ ವಿಹಾರಿ
ಜೋಹಾನ್ಸ್ ಬರ್ಗ್ ಟೆಸ್ಟ್‌ನಲ್ಲಿ ಕೊನೆಯವರೆಗೂ ತಾಳ್ಮೆಯ ಆಟವಾಡಿದ ಹನುಮ ವಿಹಾರಿ ಅಜೇಯ 40 ರನ್ ಕಲೆಹಾಕುವ ಮೂಲಕ ಅಮೂಲ್ಯ ಕೊಡುಗೆ ನೀಡಿದ್ರು. ಭಾರತ ಎ ತಂಡದ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾಗೆ ಬಂದಿದ್ದ ವಿಹಾರಿ ಎರಡನೇ ಟೆಸ್ಟ್‌ನಲ್ಲಿ ಸಿಕ್ಕ ಅವಕಾಶದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ರು. ದುರದೃಷ್ಟವಶಾತ್, ದ್ರಾವಿಡ್ ಸುಳಿವು ನೀಡಿದಂತೆ, ಹಿರಿಯ ಆಟಗಾರರಿಗೆ ಆದ್ಯತೆ ನೀಡಲಾಯಿತು ಮತ್ತು ಟೆಸ್ಟ್‌ನಲ್ಲಿ ವಿಹಾರಿ ಬದಲು ರಹಾನೆ ಅವರನ್ನು ಸೇರಿಸಲಾಯಿತು.
ಆದ್ರೀಗ ರಹಾನೆ ಸಿಕ್ಕ ಅವಕಾಶವನ್ನೆಲ್ಲಾ ಕೈ ಚೆಲ್ಲಿದ್ದು, ಟೀಂ ಇಂಡಿಯಾದಲ್ಲಿ ಇನ್ನೂ ಉಳಿದುಕೊಳ್ಳುವ ಯಾವುದೇ ಅರ್ಹತೆ ಹೊಂದಿಲ್ಲ ಎಂಬುದು ಕ್ರಿಕೆಟ್ ಪಂಡಿತರ ಮಾತಾಗಿದೆ. ಜೊತೆಗೆ ರಹಾನೆ ಬದಲು ವಿಹಾರಿಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂಬುದು ಟೀಂ ಇಂಡಿಯಾ ಅಭಿಮಾನಿಗಳು ಒಕ್ಕೊರಲ ಅಭಿಪ್ರಾಯವಾಗಿದೆ.