For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಲೆಸ್ಟರ್ ಕುಕ್ ನಿವೃತ್ತಿ ಘೋಷಣೆ

ಲಂಡನ್, ಸೆಪ್ಟೆಂಬರ್ 3: ಇಂಗ್ಲೆಂಡ್ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಅಲೆಸ್ಟರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದಿಂದ ನಿವೃತ್ತಿ ಘೋಷಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಅತ್ಯಧಿಕ ರನ್‌ ಸ್ಕೋರರ್ ಎನಿಸಿಕೊಂಡಿರುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್, ಇಂಗ್ಲೆಂಡ್‌ನ ನಾಯಕರಾಗಿಯೂ 59 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ಇದರೊಂದಿಗೆ ಇಂಗ್ಲೆಂಡ್‌ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಆಟಗಾರನ 12 ವರ್ಷದ ವೃತ್ತಿ ಬದುಕಿಗೆ ತೆರೆ ಬೀಳಲಿದೆ. ಓವಲ್‌ನಲ್ಲಿ ಭಾರತದ ವಿರುದ್ಧ ನಡೆಯಲಿರುವ ಐದನೇ ಟೆಸ್ಟ್ ಪಂದ್ಯ ಕುಕ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.

ಅವರ ಪಾದಾರ್ಪಣೆಯ ಮತ್ತು ವಿದಾಯದ ಟೆಸ್ಟ್ ಎರಡೂ ಭಾರತದ ವಿರುದ್ಧವೇ ಆಗಿರುವುದು ವಿಶೇಷ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಕುಕ್, ತಮ್ಮ ಮೂಲ ತಂಡವಾದ ಎಸೆಕ್ಸ್ ತಂಡದಲ್ಲಿ ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದ್ದಾರೆ.

12,254 ರನ್

12,254 ರನ್

33 ವಯಸ್ಸಿನ ಕುಕ್, 160 ಟೆಸ್ಟ್‌ಗಳಲ್ಲಿ 32 ಶತಕಗಳೊಂದಿಗೆ 12,254 ರನ್ ಬಾರಿಸಿದ್ದಾರೆ. 44.88ರ ಸರಾಸರಿಯಲ್ಲಿ ಅವರು ರನ್ ಕಲೆಹಾಕಿದ್ದಾರೆ.

ಜಗತ್ತಿನ ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸ್ಕೋರ್ ಮಾಡಿದ ಬ್ಯಾಟ್ಸ್‌ಮನ್‌ಗಳಲ್ಲಿ ಆರನೇ ಸ್ಥಾನ ಪಡೆದಿರುವ ಕುಕ್, ಆರಂಭಿಕರಾಗಿಯೇ 11,627 ರನ್ ಬಾರಿಸಿ ದಾಖಲೆ ಮಾಡಿದ್ದಾರೆ. ಎರಡು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಅವರು 7 ರನ್ ನೀಡಿ 1 ವಿಕೆಟ್ ಸಹ ಪಡೆದಿದ್ದರು.

ಸಾನಿಯಾ ಮಿರ್ಜಾಗೆ ಕಿರುಕುಳ ಆರೋಪ, ಬಾಂಗ್ಲಾ ಕ್ರಿಕೆಟರ್ ಗೆ ನಿಷೇಧ

ಈ ವರ್ಷ ವೈಫಲ್ಯ

ಈ ವರ್ಷ ವೈಫಲ್ಯ

ಅಲೆಸ್ಟರ್ ಕುಕ್ ತಮ್ಮ ವೃತ್ತಿ ಬದುಕಿನ ಅತ್ಯಂತ ಕಳಪೆ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಈ ವರ್ಷ ಅವರು 16 ಪಂದ್ಯಗಳಲ್ಲಿ ಒಂದು ಅರ್ಧ ಶತಕದೊಂದಿಗೆ ಕೇವಲ 18.62 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಭಾರತದ ವಿರುದ್ಧದ ಮೊದಲ ನಾಲ್ಕೂ ಟೆಸ್ಟ್‌ಗಳಲ್ಲಿ ಒಂದು ಅರ್ಧಶತಕ ಗಳಿಸಲು ಸಹ ಅವರಿಂದ ಸಾಧ್ಯವಾಗಿಲ್ಲ.

ಭಾರತದ ವಿರುದ್ಧ ಶತಕ

ಭಾರತದ ವಿರುದ್ಧ ಶತಕ

ಅಲೆಸ್ಟರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು 2006ರಲ್ಲಿ. ಹಿರಿಯ ಆಟಗಾರ ಮಾರ್ಕಸ್ ಟ್ರೆಸ್ಕೋತಿಕ್ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅವರ ಬದಲು ತಂಡದಲ್ಲಿ ಸ್ಥಾನ ಪಡೆದಾಗ ಅವರಿಗೆ 21 ವರ್ಷ ವಯಸ್ಸು. ಆಗ ಇಂಗ್ಲೆಂಡ್ ತಂಡವು ಭಾರತದ ಪ್ರವಾಸ ಕೈಗೊಂಡಿತ್ತು.

ಭಾರತದ ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್‌ನಲ್ಲಿ ಮೊದಲ ಟೆಸ್ಟ್‌ನ ಎರಡನೆಯ ಇನ್ನಿಂಗ್ಸ್‌ನಲ್ಲಿ ಕುಕ್ ಭರ್ಜರಿ ಶತಕ ಗಳಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿಯೂ ಅವರು 60 ರನ್ ಬಾರಿಸಿದ್ದರು. ಅನಾರೋಗ್ಯದ ಕಾರಣ ಆ ಸರಣಿಯ ಮೂರನೇ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಆದರೆ, ಅದರ ಬಳಿಕ ದಾಖಲೆಯ 158 ಟೆಸ್ಟ್‌ಗಳಲ್ಲಿ ಸತತವಾಗಿ ಆಡಿದ್ದರು. ಭಾರತದ ವಿರುದ್ಧ ಗಳಿಸಿದ್ದ 294 ಅವರ ಗರಿಷ್ಠ ರನ್ ಆಗಿದೆ.

ನಾಯಕನಾಗಿ ಕುಕ್

ನಾಯಕನಾಗಿ ಕುಕ್

59 ಟೆಸ್ಟ್‌ ಪಂದ್ಯಗಳಲ್ಲಿ ನಾಯಕರಾಗಿದ್ದ ಅಲೆಸ್ಟರ್ ಕುಕ್ 24 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಆದರೆ 22 ಟೆಸ್ಟ್‌ಗಳಲ್ಲಿ ಸೋಲು ಕೂಡ ಕಂಡಿದ್ದಾರೆ. 2012ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಕುಕ್ ನೇತೃತ್ವದ ತಂಡ 27 ವರ್ಷಗಳಲ್ಲಿಯೇ ಮೊದಲ ಸರಣಿ ಗೆಲುವು ಕಂಡಿತ್ತು.

2013 ಮತ್ತು 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯನ್ನು ಇಂಗ್ಲೆಂಡ್ ಕುಕ್ ನಾಯಕತ್ವದಲ್ಲಿ ಜಯಿಸಿತ್ತು. ಆದರೆ 2014ರಲ್ಲಿ ಕುಕ್ ಪಡೆ ಸರಣಿ ವೈಟ್ ವಾಶ್ ಮುಖಭಂಗ ಅನುಭವಿಸಿತ್ತು.

ಆರಂಭಿಕ ಜೋಡಿ

ಆರಂಭಿಕ ಜೋಡಿ

ಕುಕ್ ಮತ್ತು ಆಂಡ್ರೂ ಸ್ಟ್ರಾಸ್ ಆರಂಭಿಕ ಜೋಡಿ 2006-20012ರ ಅವಧಿಯಲ್ಲಿ 117 ಇನ್ನಿಂಗ್ಸ್‌ಗಳಲ್ಲಿ 4,711 ರನ್ ಕಲೆ ಹಾಕಿತ್ತು. ಇದು ಇಂಗ್ಲೆಂಡ್ ಪರ ಆರಂಭಿಕ ಜೋಡಿಯ ಅತ್ಯಧಿಕ ಮತ್ತು ಜಗತ್ತಿನ ಮೂರನೇ ಜೊತೆಯಾಟದ ದಾಖಲೆಯಾಗಿದೆ.

2012ರಲ್ಲಿ ಸ್ಟ್ರಾಸ್ ನಿವೃತ್ತರಾದ ಬಳಿಕ ಕುಕ್ 12 ಬೇರೆ ಬೇರೆ ಆರಂಭಿಕ ಜತೆಗಾರರನ್ನು ಕಂಡಿದ್ದಾರೆ.

ಏಕದಿನದಲ್ಲಿ ಕುಕ್

ಏಕದಿನದಲ್ಲಿ ಕುಕ್

ಅಲೆಸ್ಟರ್ ಕುಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪಾರ ಹೆಸರು ಮಾಡಿದ ಕ್ರಿಕೆಟಿಗರಾದರೂ, ಏಕದಿನ ಪಂದ್ಯಗಳಲ್ಲಿಯೂ ಅವರು ಆಡಿದ್ದಾರೆ. 92 ಪಂದ್ಯಗಳಲ್ಲಿ 36.40ರ ಸರಾಸರಿಯಲ್ಲಿ 5 ಶತಕ ಮತ್ತು 19 ಅರ್ಧಶತಕಗಳ ನೆರವಿನಿಂದ 3,204 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಟಿ20 ಪಂದ್ಯಗಳಲ್ಲಿಯೂ ಆಡಿ 61 ರನ್ ಕಲೆಹಾಕಿದ್ದಾರೆ.

ದಾಖಲೆಗಳು

ದಾಖಲೆಗಳು

* ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ರನ್- 12,254
* ಇಂಗ್ಲೆಂಡ್ ಪರ ಅತಿ ಹೆಚ್ಚು ಶತಕ- 32
* 150ಕ್ಕೂ ಅಧಿಕ ರನ್ ಗಳಿಸಿದ ಇಂಗ್ಲೆಂಡ್ ಆಟಗಾರ- 11
* ಇಂಗ್ಲೆಂಡ್ ಪರ ಅತಿ ಹೆಚ್ಚು ಟೆಸ್ಟ್ ಆಡಿದವರು- 160
* ಯಾವುದೇ ಆಟಗಾರ ಸತತವಾಗಿ ಹೆಚ್ಚು ಟೆಸ್ಟ್ ಆಡಿದ್ದು- 158
* ಅತಿ ಹೆಚ್ಚು ಟೆಸ್ಟ್‌ಗಳಲ್ಲಿ ಇಂಗ್ಲೆಂಡ್ ನಾಯಕತ್ವ ವಹಿಸಿದ್ದು- 59

ಇನ್ನೇನೂ ಉಳಿದಿಲ್ಲ

ಇನ್ನೇನೂ ಉಳಿದಿಲ್ಲ

ನಾನು ಕಲ್ಪಿಸಿದ್ದಕ್ಕಿಂತಲೂ ಹೆಚ್ಚಿನದ್ದನ್ನು ಸಾಧಿಸಿದ್ದೇನೆ. ಇಂಗ್ಲಿಷ್ ಆಟದ ಅನೇಕ ಮಹಾನ್ ಆಟಗಾರರ ಜತೆ ಇಷ್ಟು ದೀರ್ಘಾವಧಿ ಆಡಿದ್ದೇನೆ ಎನ್ನುವುದು ನನಗೆ ಖುಷಿ ತರುವ ವಿಚಾರ. ಇದು ದುಃಖದ ದಿನವಾದರೂ ನಾನು ಎಲ್ಲವನ್ನೂ ನೀಡಿದ್ದೇನೆ ಎಂಬ ಅರಿವಿನ ದೊಡ್ಡ ನಗೆಯೊಂದಿಗೆ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ ಎಂದು ಕುಕ್ ಹೇಳಿದ್ದಾರೆ.

ಚಿಕ್ಕ ಮಗುವಾಗಿ ಉದ್ಯಾನದಲ್ಲಿ ಆಡುವುದರಿಂದ ಹಿಡಿದು ನನ್ನ ಜೀವನದುದ್ದಕ್ಕೂ ಕ್ರಿಕೆಟ್‌ಅನ್ನು ಪ್ರೀತಿಸಿದ್ದೇನೆ. ಇಂಗ್ಲೆಂಡ್ ಅಂಗಿಯನ್ನು ಧರಿಸುವ ಅವಕಾಶವು ಎಷ್ಟು ವಿಶಿಷ್ಟ ಎಂಬುದು ತಿಳಿದಿದೆ. ಕ್ರಿಕೆಟ್‌ನಲ್ಲಿ ಸಾಧಿಸಲು ಇನ್ನೇನೂ ಉಳಿದಿಲ್ಲ ಎಂದಿದ್ದಾರೆ.

Story first published: Monday, September 3, 2018, 19:07 [IST]
Other articles published on Sep 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+