ಸೋಲುಗಳೆಂದರೆ ಅದು ಹಾಗೆಯೇ.. ಅದನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಗೆದ್ದಾಗ ಎಷ್ಟೇ ಒಗ್ಗಟ್ಟಾಗಿದ್ದರೂ ಸೋತಾಗಿನ ಪರಿಸ್ಥಿತಿ ಭಿನ್ನವಾಗಿರುತ್ತದೆ. ಸದ್ಯ ಪಾಕಿಸ್ತಾನದ ಸ್ಥಿತಿಯೂ ಅದೇ ಆಗಿದೆ. ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಸತತ ಎರಡು ಸೋಲು ಅನುಭವಿಸಿದ ಪಾಕಿಸ್ತಾನ ಲೀಗ್ ಫೈನಲ್‌ಗೆ ಪ್ರವೇಶಿಸಲು ವಿಫಲವಾಗಿದೆ. ಈ ಸೋಲು ತಂಡದಲ್ಲಿ ಭಾರೀ ಒಡಕಿಗೂ ಕಾರಣವಾಗಿದೆ ಎನ್ನುವ ಮಾಹಿತಿ ಹೊರಬೀಳುತ್ತಿದೆ.
ಹೌದು ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಅನುಭವಿಸಿದ ಸೋಲು ತಂಡಕ್ಕೆ ಭಾರೀ ಹಿನ್ನಡೆಯಿಂಟು ಮಾಡಿತು. ಅದಾದ ಬಳಿಕ ಶ್ರೀಲಂಕಾ ವಿರುದ್ಧ ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಪ್ರಮುಖ ವೇಗಿಗಳಾದ ನಸೀಮ್ ಶಾ ಹಾಗೂ ಹ್ಯಾರಿಸ್ ರೌಪ್ ಅವರ ಅಲಭ್ಯತೆಯಲ್ಲಿ ಆಡಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲು ತಂಡದಲ್ಲಿ ಒಡಕುಂಟಾಗುವಂತೆ ಮಾಡಿದೆ.

ಶ್ರೀಲಂಕಾ ವಿರುದ್ಧದ ಸೂಪರ್ 4 ಹಂತದ ಪಂದ್ಯದ ಬಳಿಕ ಪಾಕಿಸ್ತಾನ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಇಬ್ಬರು ಸ್ಟಾರ್ ಆಟಗಾರರ ಮಧ್ಯೆ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ. ಸ್ವತಃ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹಾಗೂ ತಂಡದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಮಧ್ಯೆಯೇ ಮಾತಿನ ಚಕಮಕಿ ನಡೆದಿದೆ ಎಂದು ವರದಿಯಾಗಿದ್ದು ವಿಶ್ವಕಪ್‌ಗೂ ಮುನ್ನ ನಡೆದಿರುವ ಈ ಬೆಳವಣಿಗೆ ದೊಡ್ಡ ಆ ತಂಡಕ್ಕೆ ಮತ್ತಷ್ಟು ಹಿನ್ನಡೆಯುಂಟು ಮಾಡುವ ಸಾಧ್ಯತೆಯಿದೆ.
ಏಷ್ಯಾಕಪ್ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಿ ಪಾಕಿಸ್ತಾನ ಟೂರ್ನಿಯಲ್ಲಿ ಕಣಕ್ಕಿಳಿದಿತ್ತು. ಆದರೆ ಸೂಪರ್ 4 ಹಂತದಲ್ಲಿ ಭಾರತದ ವಿರುದ್ಧ ಭಾರೀ ಅಂತರದ ಸೋಲು ಅನುಭವಿಸಿದರೆ ಶ್ರೀಲಂಕಾ ವಿರುದ್ಧ ಕೊನೆಯ ಓವರ್‌ನಲ್ಲಿ ಸೋತು ಟೂರ್ನಿಯೀಂದಲೇ ನಿರ್ಗಮಿಸುವಂತಾಯಿತು. ಅನುಭವಿ ಆಟಗಾರರಾದ ಶದಬ್ ಖಾನ್ ಹಾಗೂ ಫಕರ್ ಜಮಾನ್ ಅವರಂತಾ ಆಟಗಾರರು ಈ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ.
ಪಾಕಿಸ್ತಾನ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಾದ ಈ ವಾಗ್ವಾದವನ್ನು Bol news ವರದಿ ಮಾಡಿದೆ. ಬೊಲ್ ನ್ಯೂಸ್ ವರದಿಯ ಪ್ರಕಾರ ಟೂರ್ನಿಯಲ್ಲಿ ಕೆಲ ಅನುಭವಿ ಆಟಗಾರರ ಪ್ರದರ್ಶನದಿಂದಾಗಿ ಅಸಮಾಧಾನಗೊಂಡಿದ್ದರು. ಹೀಗಾಗಿ ಆಟಗಾರರನ್ನು ಉದ್ದೇಶಿಸಿ ಕೆಲ ಕಟು ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. "ಇದೇ ರೀತಿಯಾದ ಪ್ರದರ್ಶನ ನೀಡಿದರೆ ನೀವು ಶೀಘ್ರದಲ್ಲೇ ಮರೆತು ಹೋಗುವಿರಿ. ವಿಶ್ವಕಪ್ ನಿಮಗೆ ಕೊನೆಯ ಅವಕಾಶ" ಎಂದು ಬಾಬರ್ ಆಟಗಾರರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಆದರೆ ಬಾಬರ್ ಅಜಂ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಡಿದ ಮಾತುಗಳು ತಂಡದ ಸ್ಟಾರ್ ಆಟಗಾರ ಶಾಹೀನ್ ಶಾ ಅಫ್ರಿದಿ ಅವರಿಗೆ ಇಷ್ಟವಾಗಿಲ್ಲ. ನಾಯಕನ ಮಾತುಗಳಿಗೆ ಶಾಹೀನ್ ಎದುರುತ್ತರನ್ನು ನೀಡಿದ್ದು "ಕನಿಷ್ಠ ಯಾರು ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ ಬ್ಯಾಟಿಂಗ್ ಮಾಡಿದ್ದಾರೆ ಎನ್ನುವುದನ್ನಾದರೂ ಹೇಳಿ" ಎಂದು ಶಾಹೀನ್ ಶಾ ಅಫ್ರಿದಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಆದರೆ ಶಾಹೀನ್ ಶಾ ಅಫ್ರಿದಿ ಮಧ್ಯದಲ್ಲಿ ಮಾತನ್ನಾಡಿದ್ದು ನಾಯಕ ಬಾಬರ್ ಅಜಂಗೆ ಇಷ್ಟವಾಗಿಲ್ಲ. ಹಾಗಾಗಿ ಶಾಹೀನ್ ಶಾಗೆ ಖಡಕ್ಕಾಗಿಯೇ ನಾಯಕ ಬಾಬರ್ ಪ್ರತಿಕ್ರಿಯೆ ನೀಡಿದ್ದಾರೆ. "ಯಾರು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಾರೆ ಯಾರು ಚೆನ್ನಾಗಿ ಮಾಡಿಲ್ಲ ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ" ಎಂದು ಹೇಳಿದ್ದಾರೆ. ಪರಿಸ್ಥಿತಿ ಮಿತಿ ಮೀರುತ್ತಿದ್ದಂತೆಯೇ ತಂಡದ ಬೆಂಬಲ ಸಿಬ್ಬಂದಿಗಳು ಹಾಗೂ ಮೊಹಮ್ಮದ್ ರಿಜ್ವಾನ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು ಎನ್ನಲಾಗಿದೆ.