ಆಗಸ್ಟ್ 1 ಗುರುವಾರ, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅದರಲ್ಲೂ ಐಪಿಎಲ್ 2025ರ ಮೆಗಾ ಹರಾಜಿಗೆ ಕೆಲವು ತಿಂಗಳು ಬಾಕಿ ಇರುವಂತೆ ಬಿಸಿಸಿಐ ನಿಯಮಗಳ ಕುರಿತು ಚರ್ಚೆಗಳು ತೀವ್ರಗೊಂಡಿವೆ. ಮುಂಬರುವ ಋತುವಿನ ಐಪಿಎಲ್ ಟೂರ್ನಿಗಾಗಿ ಬುಧವಾರ ಬಿಸಿಸಿಐ ಸಭೆ ನಡೆದಿದ್ದು, ಇದರಲ್ಲಿ ತಂಡದ ಮಾಲೀಕರು ಕೂಡ ಉಪಸ್ಥಿತರಿದ್ದರು.

ಈ ವೇಳೆ ಬಿಸಿಸಿಐ ನಿಯಮಗಳಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮಾಲೀಕ ಶಾರುಖ್ ಖಾನ್ ಮತ್ತು ಪಂಜಾಬ್ ಕಿಂಗ್ಸ್ ತಂಡ ಸಹ ಮಾಲೀಕ ನೆಸ್ ವಾಡಿಯಾ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಐಪಿಎಲ್ ಫ್ರಾಂಚೈಸಿ ಮಾಲೀಕರ ಜೊತೆ ಬಿಸಿಸಿಐ ನಡೆಸಿದ ಸಭೆಗೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳು ಹೊರಬೀಳುತ್ತಿವೆ. ಅದರಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ಮಾಲೀಕ ಶಾರುಖ್ ಖಾನ್ ಮತ್ತು ಪಂಜಾಬ್ ಕಿಂಗ್ಸ್ ಸಹ-ಮಾಲೀಕ ನೆಸ್ ವಾಡಿಯಾ ವಾಗ್ವಾದದ ಬಗ್ಗೆ ಹೆಚ್ಚು ಚರ್ಚಿಸಲಾಗುತ್ತಿದೆ.
ಕ್ರಿಕ್‌ಬಜ್ ವರದಿ ಪ್ರಕಾರ ಶಾರುಖ್ ಖಾನ್ ಮತ್ತು ನೆಸ್ ವಾಡಿಯಾ ನಡುವೆ ವಾಗ್ವಾದ ನಡೆದಿದೆ. ಈ ಚರ್ಚೆಗೆ ಕಾರಣವಾದ ವಿಷಯವೆಂದರೆ ಐಪಿಎಲ್‌ನಲ್ಲಿ ಬಿಸಿಸಿಐ ತೆಗೆದುಕೊಂಡಿರುವ ನಿಯಮ.
ಐಪಿಎಲ್‌ನಲ್ಲಿ ಇದುವರೆಗೆ ಹರಾಜಿನಲ್ಲಿ ಒಟ್ಟು 4 ಆಟಗಾರರನ್ನು ಉಳಿಸಿಕೊಳ್ಳುವ ನಿಯಮವಿತ್ತು. ಇದರಲ್ಲಿ 2 ಕ್ಕಿಂತ ಹೆಚ್ಚು ವಿದೇಶಿ ಆಟಗಾರರು ಇರುವಂತಿಲ್ಲ ಮತ್ತು ಕನಿಷ್ಠ 1 ವಿದೇಶಿ ಆಟಗಾರನನ್ನು ಉಳಿಸಿಕೊಳ್ಳುವುದು ಕಡ್ಡಾಯವಾಗಿತ್ತು. ಆದರೆ ಈ ಬಾರಿ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆ ಹೆಚ್ಚಿಸುವಂತೆ ಬೇಡಿಕೆ ಇಡಲಾಗಿತ್ತು.
ಐಪಿಎಲ್ 2024 ರಲ್ಲಿ ಕೆಕೆಆರ್ ತಂಡದ ಅದ್ಭುತ ಪ್ರದರ್ಶನದಿಂದಾಗಿ ಪ್ರಶಸ್ತಿಯನ್ನು ಗೆದ್ದಿತ್ತು. ಇದರಿಂದಾಗಿ ಕೆಕೆಆರ್ ತಂಡ ಸಾಧ್ಯವಾದಷ್ಟು ಆಟಗಾರರನ್ನು ಉಳಿಸಿಕೊಳ್ಳುವ ಚಿಂತನೆಯಲ್ಲಿದೆ.
ಸಭೆಯಲ್ಲಿ ಹಲವು ಐಪಿಎಲ್ ತಂಡಗಳ ಮಾಲೀಕರು ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಪರವಾಗಿದ್ದಾರೆ. ಅವರಲ್ಲಿ ಶಾರುಖ್ ಖಾನ್ ಒಬ್ಬರು. ಆದರೆ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ನೆಸ್ ವಾಡಿಯಾ ಒಪ್ಪಿಗೆ ಸೂಚಿಸಿಲ್ಲ. ಈ ವಿಚಾರವಾಗಿ ಶಾರುಖ್ ಖಾನ್ ಮತ್ತು ನೆಸ್ ವಾಡಿಯಾ ನಡುವೆ ಮಾತಿನ ಚಕಮಕಿ ನಡೆದಿದೆ.
ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಯೂ ವರ್ಷಾಂತ್ಯದಲ್ಲಿ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಐಪಿಎಲ್‌ನ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ನೋಡಬಹುದಾಗಿದೆ.
ಅದರಲ್ಲಿ ಇಂಪ್ಯಾಕ್ಟ್ ಆಟಗಾರನ ನಿಯಮ ಕೂಡ ಒಂದಾಗಿದೆ. ಐಪಿಎಲ್ 2024ರಲ್ಲಿ ಹಲವು ಆಟಗಾರರು ಈ ನಿಯಮವನ್ನು ವಿರೋಧಿಸಿದ್ದರು. ಈಗ ಈ ನಿಯಮದಲ್ಲಿ ಬದಲಾವಣೆ ಆಗುತ್ತೋ? ಇಲ್ಲವೋ? ಎಂ ಪ್ರಶ್ನೆ ಮುಂದಿನ ದಿನಗಳಲ್ಲಿ ಬಿಸಿಸಿಐ ಉತ್ತರ ನೀಡಿಲಿದೆ.