ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ವಿವಾಹದ ಸುದ್ದಿ ಕೇಳಿ ಬರುತ್ತಿದೆ. ಸಚಿನ್ ಪುತ್ರ ಅರ್ಜುನ್ ಸಾನಿಯಾ ಚಂದೋಕ್ ಅವರ ವಿವಾಹ ದಿನಾಂಕವನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ವರ್ಷದ ಮಾರ್ಚ್‌ನಲ್ಲಿ ಅರ್ಜುನ್ ಹಾಗೂ ಸಾನಿಯಾ ಸಪ್ತಪದಿ ತುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಆಗಸ್ಟ್ 2025 ನಿಶ್ಚಿತಾರ್ಥ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಆಗಿತ್ತು. ಈ ಸಮಾರಂಭಕ್ಕೆ ಕುಟುಂಬದ ಆಪ್ತರಿಗೆ ಮಾತ್ರ ಆಹ್ವಾನವನ್ನು ನೀಡಲಾಗಿತ್ತು. ಈ ಇಬ್ಬರೂ ಶೀಘ್ರದಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳು ಈಗ ಹರಿದಾಡುತ್ತಿವೆ. ಇವರಿಬ್ಬರ ವಿವಾಹ ಕಾರ್ಯಕ್ರಮ ಮಾರ್ಚ್ 3 ರಿಂದ ಆರಂಭವಾಗುವ ಸಾಧ್ಯತೆ ಇದ್ದು, ಮಾರ್ಚ್ 5 ರಂದು ಅರ್ಜುನ್, ಸಾನಿಯಾ ಮದುವೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಈ ಕಾರ್ಯಕ್ರಮ ಖಾಸಗಿಯಾಗಿ ಉಳಿಯಲಿದ್ದು, ಕುಟುಂಬ ಸದಸ್ಯರಿಗೆ ಹಾಗೂ ಆಯ್ದ ಕ್ರಿಕೆಟ್ ಆಟಗಾರರಿಗೆ ಆಹ್ವಾನ ನೀಡುವ ಸಾಧ್ಯತೆ ಇದೆ.

ಮಾರ್ಚ್ 5 ರಂದು ಅರ್ಜುನ್ ತೆಂಡೂಲ್ಕರ್ ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಪ್ರಮುಖ ಹೆಜ್ಜೆ ಇಡಲಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ರವಿ ಘಾಯ್ ಇಬ್ಬರೂ ಸ್ನೇಹಿತರು. ರವಿ ಘಾಯ್ ಒಬ್ಬ ಯಶಸ್ವಿ ಉದ್ಯಮಿ ಆಗಿದ್ದು, ಸಾನಿಯಾ ಇವರ ಮೊಮ್ಮಗಳು.
ಅರ್ಜುನ್ ತೆಂಡೂಲ್ಕರ್ ಅವರ ನಿಶ್ಚಿತಾರ್ಥವಾದ ಬಗ್ಗೆ ಅಭಿಮಾನಿಯೊಬ್ಬರು ಕಾರ್ಯಕ್ರಮದಲ್ಲಿ ಕೇಳಿದಾಗ, "ಸಚಿನ್, ಹೌದು ಅವರಿಬ್ಬರ ನಿಶ್ಚಿತಾರ್ಥವಾಗಿದೆ ಎಂದು ತಿಳಿಸಿದ್ದರು. ಅವರಿಬ್ಬರ ಜೀವನದ ಹೊಸ ಹಂತ ಪ್ರವೇಶಿಸಲಿದ್ದು, ನಾವೆಲ್ಲರೂ ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದರು.
ಪಂಚತಾರಾ ಇಂಟರ್‌ಕಾಂಟಿನೆಂಟಲ್ ಹೋಟೆಲ್ ಮತ್ತು ಐಸ್ ಕ್ರೀಮ್ ಉದ್ಯಮವನ್ನು ನಡೆಸುತ್ತಿರುವ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಂದೋಕ್. ಸಾನಿಯಾ ಚಂದೋಕ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದರು. ಸಾನಿಯಾ, ಸಾರಾ ತೆಂಡೂಲ್ಕರ್ ಅವರಿಗೂ ತುಂಬ ಹತ್ತಿರದ ಸ್ನೇಹಿತೆ. ಇವರಿಬ್ಬರ ಹಲವು ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿವೆ. ಸಚಿನ್ ತೆಂಡೂಲ್ಕರ್ ಮತ್ತು ರವಿ ಘಾಯ್ ದಶಕಗಳಿಂದಲೂ ಆತ್ಮೀಯ ಸ್ನೇಹಿತರು. ಈ ಎರಡು ಕುಟುಂಬಗಳ ಸ್ನೇಹ ಈಗ ನೆಂಟಸ್ತಿಕೆಯಾಗಿ ಬದಲಾಗಿದೆ.
ಅರ್ಜುನ್ ತೆಂಡೂಲ್ಕರ್ ಐಪಿಎಲ್2026ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕೆ ಇಳಿಯಲಿದ್ದಾರೆ. ಇವರನ್ನು ಐಪಿಎಲ್ ಮಿನಿ ಹರಾಜಿಗೂ ಮುನ್ನವೇ ಲಕ್ನೋ ಟ್ರೇಡ್ ಮಾಡಿಕೊಂಡಿತ್ತು. 26 ವರ್ಷದ ಅರ್ಜುನ್ ಐಪಿಎಲ್ ಹಾಗೂ ದೇಶೀಯ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇವರು ಎಡಗೈಯಿಂದ ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವ ಆಟಗಾರ. 22 ಪ್ರಥಮ ದರ್ಜೆ ಪಂದ್ಯ ಆಡಿರುವ ಅರ್ಜುನ್ ಒಟ್ಟು 48 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಇವರು 21ರ ಸರಾಸರಿಯಲ್ಲಿ 620 ರನ್ ಕಲೆ ಹಾಕಿದ್ದಾರೆ. ಇನ್ನು ಲೀಸ್ಟ್ ಎ ಕ್ರಿಕೆಟ್‌ನಲ್ಲೂ ಅರ್ಜುನ್ ಆಡಿದ 23 ಪಂದ್ಯಗಳಲ್ಲಿ 25 ವಿಕೆಟ್ ಕಬಳಿಸಿದ್ದಾರೆ. ಇನ್ನು ಆಡಿರುವ 5 ಐಪಿಎಲ್ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ.