ಆಶಸ್ ಸರಣಿ: ತಿರುಗಿಬಿದ್ದ ಆಂಗ್ಲರಿಗೆ ಮಣ್ಣು ಮುಕ್ಕಿಸಿ ಮೊದಲ ಟೆಸ್ಟ್ ವಶಪಡಿಸಿಕೊಂಡ ಆಸ್ಟ್ರೇಲಿಯಾ

ಬದ್ಧ ವೈರಿಗಳ ಮಹಾ ಕಾಳಗ ಎಂದೇ ಖ್ಯಾತಿಯನ್ನು ಪಡೆದಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಆಶಸ್ ಟೆಸ್ಟ್ 2021-22ನೇ ಸಾಲಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ 9 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಬ್ರಿಸ್ಬೇನ್‌ನ ಗಾಬಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಈ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿತು. ಈ ಮೂಲಕ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಆಟಗಾರರು ಆಸ್ಟ್ರೇಲಿಯ ಬೌಲರ್‌ಗಳ ದಾಳಿಗೆ ಅಕ್ಷರಶಃ ತತ್ತರಿಸಿದರು. ಹೀಗೆ ಆಸ್ಟ್ರೇಲಿಯಾ ತಂಡದ ಬೌಲರ್‌ಗಳ ದಾಳಿ ಎದುರು ಮಂಕಾದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 147 ರನ್‌ಗಳಿಗೆ ಆಲ್ ಔಟ್ ಆಯಿತು. ಇನ್ನು ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್‌ನಲ್ಲಿ ಇಂಗ್ಲೆಂಡ್ ತಂಡದ ಯಾವೊಬ್ಬ ಆಟಗಾರ ಸಹ 40 ರನ್ ದಾಟುವ ಯತ್ನವನ್ನು ಮಾಡಲೇ ಇಲ್ಲ.
ಹೀಗೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ನೆಲಕಚ್ಚಿದ ಇಂಗ್ಲೆಂಡ್ ಬೌಲಿಂಗ್‌ನಲ್ಲೂ ಸಹ ಭಾರಿ ಹಿನ್ನಡೆಯನ್ನು ಅನುಭವಿಸಿತು. ಅತ್ತ ಇಂಗ್ಲೆಂಡ್ ತಂಡದ ಆಟಗಾರರನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಆಸ್ಟ್ರೇಲಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ ತನ್ನ ಪಾಲಿನ ಬ್ಯಾಟಿಂಗ್ ಆರಂಭಿಸಿ ಬರೋಬ್ಬರಿ 425 ರನ್‌ಗಳಿಗೆ ಆಲ್ ಔಟ್ ಆಯಿತು. ಹೀಗೆ ಮೊದಲ ಇನಿಂಗ್ಸ್ ಅಂತ್ಯಕ್ಕೆ ಆಸ್ಟ್ರೇಲಿಯಾ 278 ರನ್‌ಗಳ ಬೃಹತ್ ಮುನ್ನಡೆಯನ್ನು ಸಾಧಿಸಿತು. ಮೊದಲನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 94, ಮಾರ್ನಸ್ ಲ್ಯಾಬಸ್ಚಾಗ್ನೇ 74 ಮತ್ತು ಟ್ರೆವಿಸ್ ಹೆಡ್ 152 ರನ್‌ಗಳ ಭರ್ಜರಿ ಆಟವನ್ನಾಡಿದರು.
ಈ ಬಾರಿಯ ಆಶಸ್ ಟೆಸ್ಟ್ ಸರಣಿಯ ಚೊಚ್ಚಲ ಪಂದ್ಯದ ಮೊದಲೆರಡು ದಿನಗಳಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾ ಎದುರು ಸಪ್ಪೆಯಾಗಿತ್ತು. ಆದರೆ ಮೂರನೇ ದಿನದಾಟದಂದು ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಇಂಗ್ಲೆಂಡ್ ತಂಡದ ಮೂರನೇ ಮತ್ತು ನಾಲ್ಕನೇ ಕ್ರಮಾಂಕದ ಆಟಗಾರರಾದ ಡೇವಿಡ್ ಮಲನ್ ಮತ್ತು ನಾಯಕ ಜೋ ರೂಟ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವುದರ ಮೂಲಕ ಆಸ್ಟ್ರೇಲಿಯಾ ವಿರುದ್ಧ ತಿರುಗಿಬಿದ್ದರು. ಈ ಮೂಲಕ ಮೂರನೇ ದಿನದಾಟದ ವೇಳೆ ಈ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಡೆಗೆ ಇಂಗ್ಲೆಂಡ್ ಸುಲಭ ತುತ್ತಾಗುವುದಿಲ್ಲ ಎಂಬ ಭರವಸೆಯನ್ನು ಹುಟ್ಟುಹಾಕಿತ್ತು. ಇನ್ನು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರಾದ ರೊರಿ ಬರ್ನ್ಸ್ ಮತ್ತು ಹಸೀಬ್ ಹಮೀದ್ ಮತ್ತೊಮ್ಮೆ ವಿಫಲರಾದ ನಂತರ ತೃತೀಯ ದಿನದಾಟದಂದು ಮೂರನೇ ವಿಕೆಟ್‍ಗೆ 159 ರನ್‌ಗಳ ಜತೆಯಾಟವನ್ನಾಡಿದ್ದ ಡೇವಿಡ್ ಮಲನ್ ಮತ್ತು ಜೋ ರೂಟ್ ನಾಲ್ಕನೇ ದಿನದಾಟ ಆರಂಭವಾಗುತ್ತಿದ್ದಂತೆಯೇ ವಿಕೆಟ್ ಒಪ್ಪಿಸಿದರು.
ಹೀಗೆ ಮೂರನೇ ದಿನದಾಟದಂದು ಜವಾಬ್ದಾರಿಯುತ ಪ್ರದರ್ಶನ ನೀಡಿ ವಿಕೆಟ್ ಒಪ್ಪಿಸದೇ ಇದ್ದ ಇಂಗ್ಲೆಂಡ್ ತಂಡದ ಈ ಜೋಡಿ ನಾಲ್ಕನೇ ದಿನದಾಟದ ಆರಂಭದ ವೇಳೆಯೇ ವಿಕೆಟ್ ಕಳೆದುಕೊಳ್ಳುತ್ತಾ ಇದ್ದಂತೆ ನಂತರ ಕಣಕ್ಕಿಳಿದ ಇಂಗ್ಲೆಂಡ್ ತಂಡದ ಎಲ್ಲಾ ಬ್ಯಾಟ್ಸ್‌ಮನ್‌ಗಳೂ ಸಾಲುಸಾಲಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು. 61 ರನ್‌ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತನ್ನ ಮೂರನೇ ವಿಕೆಟ್ ಕಳೆದುಕೊಂಡಾಗ 223 ರನ್ ಗಳಿಸಿತ್ತು. ಆದರೆ ಇಂಗ್ಲೆಂಡ್ ತಂಡ ತನ್ನ ಅಂತಿಮ ವಿಕೆಟ್ ಕಳೆದು ಕೊಳ್ಳುವಷ್ಟರಲ್ಲಿ ಕೇವಲ 297 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಇಂಗ್ಲೆಂಡ್ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಮುಗಿದ ಸಮಯಕ್ಕೆ ಕೇವಲ 19 ರನ್‌ಗಳ ಮುನ್ನಡೆಯನ್ನು ಸಾಧಿಸಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 20 ರನ್‌ಗಳ ಗುರಿಯನ್ನು ನೀಡಿತು. ಆಸ್ಟ್ರೇಲಿಯಾ ತಂಡದ ಪರ ನಾಥನ್ ಲಿಯಾನ್ 4 ವಿಕೆಟ್ ಪಡೆದು ಮಿಂಚಿದರು.
ಹೀಗೆ ಮೂರನೇ ದಿನದಾಟದಂದು ಅಬ್ಬರಿಸಿ, ನಾಲ್ಕನೇ ದಿನದಾಟದಂದು ಮತ್ತೆ ನೆಲಕಚ್ಚಿದ ಇಂಗ್ಲೆಂಡ್ ನೀಡಿದ 20 ರನ್‌ಗಳ ಅತಿ ಕಡಿಮೆ ಮೊತ್ತದ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಅಲೆಕ್ಸ್ ಕ್ಯಾರಿ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರೆ, ಮತ್ತೋರ್ವ ಆರಂಭಿಕ ಆಟಗಾರನಾದ ಮಾರ್ಕಸ್ ಹ್ಯಾರಿಸ್ ಅಜೇಯ 9 ರನ್ ಗಳಿಸಿದರು ಮತ್ತು ಮಾರ್ನಸ್ ಲ್ಯಾಬಸ್ಚಾಗ್ನೇ ಯಾವುದೇ ರನ್ ಕಲೆ ಹಾಕದೆ ಅಜೇಯರಾಗಿ ಉಳಿದರು. ಈ ಮೂಲಕ ಆಸ್ಟ್ರೇಲಿಯಾ ಆಶಸ್ ಸರಣಿಯ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಇನ್ನೂ 1 ದಿನ ಬಾಕಿ ಇರುವಾಗಲೇ ಇಂಗ್ಲೆಂಡ್ ವಿರುದ್ಧ ಭರ್ಜರಿ 9 ವಿಕೆಟ್‍ಗಳ ಜಯ ಸಾಧಿಸಿ ಸರಣಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಹಾಗೂ ಈ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪರ 152 ರನ್ ಗಳಿಸಿ ಅಬ್ಬರಿಸಿದ ಟ್ರೇವಿಸ್ ಹೆಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications