ಭಾನುವಾರ, ಜುಲೈ 23ರಂದು ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರ್ಯಾಫೋರ್ಡ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ಮಳೆಯಿಂದಾಗಿ ಯಾವುದೇ ಎಸೆತ ಕಾಣದೆ, ನೀರಸ ಡ್ರಾನಲ್ಲಿ ಅಂತ್ಯಗೊಂಡಿತು.
ಇನ್ನು 2005ರ ನಂತರ ಅತ್ಯಂತ ನಿಕಟ ಮತ್ತು ರೋಚಕ ಆಶಸ್ ಸರಣಿಯಲ್ಲಿ ಪೈಪೋಟಿಯಿಂದ ಕೂಡಿದ್ದ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾಗೊಂಡ ಕಾರಣ ಪ್ರವಾಸಿ ಆಸ್ಟ್ರೇಲಿಯಾ ತಂಡ ಆಶಸ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಆಸ್ಟ್ರೇಲಿಯಾ ತಂಡ ಒಂದು ಟೆಸ್ಟ್ ಬಾಕಿ ಉಳಿದಿರುವಂತೆಯೇ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಪ್ಯಾಟ್ ಕಮ್ಮಿನ್ಸ್ ಬಳಗವನ್ನು ಸೋಲಿಸಲು ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯನ್ನು ಗೆಲ್ಲಲೇಬೇಕಿತ್ತು.

ಗುರುವಾರದಿಂದ ಓವಲ್‌ನಲ್ಲಿ ಪ್ರಾರಂಭವಾಗುವ ಸರಣಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ 2-2 ಅಂತರದಲ್ಲಿ ಸಮಬಲಗೊಳ್ಳಲಿದೆ. ಆಸ್ಟ್ರೇಲಿಯಾ ತಂಡ ಗೆದ್ದರೆ 3-1 ಅಂತರದಲ್ಲಿ ಸರಣಿ ಗೆಲ್ಲಲಿದೆ, ಒಂದು ಡ್ರಾಗೊಂಡರೂ 2-1 ಅಂತರದಲ್ಲಿ ಆಸೀಸ್ ಪಡೆ ಸರಣಿ ವಶಪಡಿಸಿಕೊಳ್ಳಲಿದೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 90.2 ಓವರ್‌ಗಳಲ್ಲಿ 317 ರನ್‌ಗಳಿಗೆ ಆಲೌಟ್ ಆಗಿತ್ತು. ತಂಡದ ಪರ ಡೇವಿಡ್ ವಾರ್ನರ್ 32 ರನ್, ಮಾರ್ನಸ್ ಲ್ಯಾಬುಸ್ಚಾಗ್ನೆ 51 ರನ್, ಸ್ಟೀವನ್ ಸ್ಮಿತ್ 41 ರನ್, ಟ್ರಾವಿಸ್ ಹೆಡ್ 48 ರನ್, ಮಿಚೆಲ್ ಮಾರ್ಷ್ 51 ರನ್, ಅಲೆಕ್ಸ್ ಕ್ಯಾರಿ 20 ರನ್, ಮಿಚೆಲ್ ಸ್ಟಾರ್ಕ್ 36 ರನ್ ಗಳಿಸಿದ್ದರು.
ಪ್ರತ್ಯುತ್ತರವಾಗಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 107.4 ಓವರ್‌ಗಳಲ್ಲಿ 592 ರನ್‌ಗಳ ಬೃಹತ್ ಮೊತ್ತ ದಾಖಲಿಸಿ ಸರ್ವಪತನ ಕಂಡಿತ್ತು. ಆರಂಭಿಕ ಆಟಗಾರ ಝಾಕ್ ಕ್ರಾಲಿ 182 ಎಸೆತಗಳಲ್ಲಿ 21 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 189 ರನ್ ಗಳಿಸಿದರೆ, ಜಾನಿ ಬೈರ್‌ಸ್ಟೋವ್ 81 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ ಅಜೇಯ 99 ರನ್ ಗಳಿಸಿ 1 ರನ್‌ನಿಂದ ಶತಕ ವಂಚಿತರಾದರು.

ಉಳಿದಂತೆ ಮೊಯಿನ್ ಅಲಿ 54 ರನ್, ಜೋ ರೂಟ್ 84 ರನ್, ಹ್ಯಾರಿ ಬ್ರೂಕ್ 61 ರನ್, ಬೆನ್ ಸ್ಟೋಕ್ಸ್ 51 ರನ್ ಗಳಿಸಿ ತಂಡದ ಮೊತ್ತ 600ರ ಗಡಿ ಸಮೀಪಿಸಲು ನೆರವಾಗಿದ್ದರು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ತಂಡ 275 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು.
ಇನ್ನು ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 214 ರನ್ ಗಳಿಸಿತ್ತು. ಮಾರ್ನಸ್ ಲ್ಯಾಬುಸ್ಚಾಗ್ನೆ 111 ರನ್‌ಗಳ ಶತಕ ಬಾರಿಸಿದ್ದರು. ಆದರೂ ಆತಿಥೇಯರಿಗಿಂತ ಇನ್ನು 61 ರನ್‌ಗಳ ಹಿಂದೆ ಬಿದ್ದಿತ್ತು. ಐದನೇ ದಿನದಲ್ಲಿ ಸುರಿದ ಮಳೆಯಿಂದಾಗಿ ಆಸ್ಟ್ರೇಲಿಯಾ ತಂಡಕ್ಕೆ ನೆರವಾಯಿತು.
ಏಕೆಂದರೆ, ಆಸೀಸ್ ಪಡೆ ಈ ಪಂದ್ಯವನ್ನು ಸೋಲುವ ಮುನ್ಸೂಚನೆ ಹೊಂದಿತ್ತು. ಬಿಟ್ಟುಬಿಡದೆ ಸುರಿದ ಮಳೆಯು ಇಂಗ್ಲೆಂಡ್ ತಂಡಕ್ಕೆ ನಿರಾಸೆ ಮೂಡಿಸಿತು. ಶನಿವಾರ ಕೂಡ ಕೇವಲ 30 ಓವರ್‌ಗಳು ಮಾತ್ರ ಆಡಲು ಸಾಧ್ಯವಾಗಿತ್ತು.
ನಾಲ್ಕನೇ ಪಂದ್ಯದಲ್ಲಿ ಗೆಲುವಿಗೆ ಕೇವಲ ಐದು ವಿಕೆಟ್‌ಗಳ ಅಗತ್ಯವಿದ್ದ ಇಂಗ್ಲೆಂಡ್ ತಂಡ ಭಾನುವಾರದಂದು ಆಡುವ ವಿಶ್ವಾಸ ಹೊಂದಿತ್ತು. ಆದರೆ, ವರುಣ ಕೃಪೆ ತೋರಲಿಲ್ಲ ಮತ್ತು ಒಂದೂ ಎಸೆತ ಕಾಣದೆ ಡ್ರಾ ಎಂದು ಘೋಷಿಸಲಾಯಿತು.
ನಾಯಕ ಬೆನ್ ಸ್ಟೋಕ್ಸ್ ಮತ್ತು ಮುಖ್ಯ ಕೋಚ್ ಬ್ರೆಂಡನ್ ಮೆಕ್ಕಲಮ್ ಒಂದು ವರ್ಷದ ಹಿಂದೆ ವೇಗದ ರನ್ ಗಳಿಸುವ ಬಜ್‌ಬಾಲ್ ನೀತಿ ಅಳವಡಿಸಿಕೊಂಡಾಗಿನಿಂದ ಇಂಗ್ಲೆಂಡ್ ಡ್ರಾ ಪರಿಕಲ್ಪನೆಯನ್ನು ತೆಗೆದುಹಾಕಿದೆ.
ಅಲ್ಲದೆ, 2015ರಿಂದ ಮೊದಲ ಬಾರಿಗೆ ತನ್ನ ಸಾಂಪ್ರದಾಯಿಕ ಎದುರಾಳಿ ತಂಡವನ್ನು ಸೋಲಿಸಲು ಸ್ಫೂರ್ತಿದಾಯಕ ಪುನರಾಗಮನದ ಕನಸುಗಳು ಭಗ್ನಗೊಂಡವು. ಪ್ರವಾಸಿ ಆಸ್ಟ್ರೇಲಿಯಾ ತಂಡ ಮೈದಾನದಲ್ಲಿ ಆಡಿದ್ದಕ್ಕಿಂತ ಹೆಚ್ಚಾಗಿ ಪೆವಿಲಿಯನ್‌ನಲ್ಲಿ ಆಟವನ್ನು ಮುಗಿಸಿದ್ದು, ಹೆಚ್ಚು ಸಂತೋಷ ಕಂಡಿತು.
22 ವರ್ಷಗಳಲ್ಲಿ ಇಂಗ್ಲೆಂಡ್ ನೆಲದಲ್ಲಿ ಮೊದಲ ಸಂಪೂರ್ಣ ಗೆಲುವನ್ನು ಪಡೆಯಲು ಆಸ್ಟ್ರೇಲಿಯಾ ಸರಣಿಯಲ್ಲಿ ಆಡಲು ಇನ್ನೂ ಒಂದು ಪಂದ್ಯ ಬಾಕಿ ಇದೆ. ಆದರೆ ಇಂಗ್ಲೆಂಡ್ ತಂಡ ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಲು ಮತ್ತು ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಅಜೇಯ ಸರಣಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.
ಝಾಕ್ ಕ್ರಾಲಿ ಅವರ ಅಮೋಘ 189 ರನ್ ಮತ್ತು ಜಾನಿ ಬೈರ್‌ಸ್ಟೋ ಅವರ ಅಜೇಯ 99 ರನ್ ಸಹಾಯದಿಂದ ಇಂಗ್ಲೆಂಡ್ 592 ರನ್ ಗಳಿಸಿತು. ಇದು ಕಳೆದ ಹನ್ನೆರಡು ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ನ ಗರಿಷ್ಠ ಮೊತ್ತವಾಗಿದೆ.