Ashes 2023: ಕೊನೆಯ ಪಂದ್ಯದಲ್ಲಿ ಆಸೀಸ್ ವಿರುದ್ಧ ಗೆದ್ದ ಇಂಗ್ಲೆಂಡ್; ಸ್ಟುವರ್ಟ್ ಬ್ರಾಡ್‌ಗೆ ಗೆಲುವಿನ ಬೀಳ್ಕೊಡುಗೆ
ಸೋಮವಾರ, ಜುಲೈ 31ರಂದು ಮುಕ್ತಾಯಗೊಂಡ 2023ರ ಆಶಸ್ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆತಿಥೇಯ ಇಂಗ್ಲೆಂಡ್ ತಂಡ 49 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ, ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿತು.
ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನಾಡಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರು, ಅಂತಿಮ ಪಂದ್ಯದ ಅಂತಿಮ ದಿನದಂದು ಆಸ್ಟ್ರೇಲಿಯಾ ತಂಡದ ಕೊನೆಯ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ಸ್ಮರಣೀಯವಾಗಿಸಿಕೊಂಡರು.

384 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭದ ಹೊರತಾಗಿಯೂ ಕೊನೆಯ ಸೆಷನ್‌ನಲ್ಲಿ ಒತ್ತಡಕ್ಕೆ ಸಿಲುಕಿತು. ಸರಣಿ ಸಮಬಲಕ್ಕಾಗಿ ಇಂಗ್ಲೆಂಡ್‌ನ ಗೆಲುವಿನ ಭರವಸೆಯನ್ನು ಪುನರುಜ್ಜೀವನಗೊಳಿಸಲು ಕ್ರಿಸ್ ವೋಕ್ಸ್ ಅವರು ಆಸ್ಟ್ರೇಲಿಯಾದ ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಅವರ ವಿಕೆಟ್ ಪಡೆದರು.
ಯಾವುದೇ ವಿಕೆಟ್ ನಷ್ಟವಿಲ್ಲದೆ 135 ರನ್‌ಗಳಿಂದ ಕೊನೆಯ ದಿನದಾಟವನ್ನು ಆರಂಭಿಸಿದ ಆಸೀಸ್ ತಂಡಕ್ಕೆ ಗೆಲ್ಲಲು 249 ರನ್‌ಗಳ ಅವಶ್ಯವಿತ್ತು. ಕೊನೆಯ ದಿನದ ಮ್ಯಾಜಿಕ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸಿದರು ಮತ್ತು ತಂಡಕ್ಕೆ ಗೆಲುವು ತಂದುಕೊಟ್ಟರು.

ಆಸ್ಟ್ರೇಲಿಯಾ ತಂಡದ ಪರ ಆರಂಭಿಕರಾದ ಡೇವಿಡ್ ವಾರ್ನರ್ 60 ರನ್, ಉಸ್ಮಾನ್ ಖವಾಜಾ 72 ರನ್, ಮಾರ್ನಸ್ ಲ್ಯಾಬುಸ್ಚಾಗ್ನೆ 13 ರನ್, ಸ್ಟೀವನ್ ಸ್ಮಿತ್ 54 ರನ್, ಟ್ರಾವಿಸ್ ಹೆಡ್ 43 ರನ್, ಮಿಚೆಲ್ ಮಾರ್ಷ್ 6 ರನ್, ಅಲೆಕ್ಸ್ ಕ್ಯಾರಿ 28, ಟಾಡ್ ಮರ್ಫಿ 18 ರನ್ ಗಳಿಸಿದರು.
ಇಂಗ್ಲೆಂಡ್ ತಂಡದ ಪರ ಬೌಲಿಂಗ್‌ನಲ್ಲಿ ಕ್ರಿಸ್ ವೋಕ್ಸ್ 19 ಓವರ್‌ಗಳಲ್ಲಿ 50 ರನ್ ನೀಡಿ 4 ವಿಕೆಟ್ ಪಡೆದರೆ, ಮೊಯಿನ್ ಅಲಿ 23 ಓವರ್‌ಗಳಲ್ಲಿ 76 ರನ್ ನೀಡಿ 3 ವಿಕೆಟ್ ಕಬಳಿಸಿದರು. ಸ್ಟುವರ್ಟ್ ಬ್ರಾಡ್ 2 ವಿಕೆಟ್ ಮತ್ತು ಮಾರ್ಕ್ ವುಡ್ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 283 ರನ್‌ಗಳಿಗೆ ಆಲೌಟ್ ಆಗಿದ್ದರೆ, ಪ್ರತ್ಯುತ್ತರವಾಗಿ ಆಸ್ಟ್ರೇಲಿಯಾ 295 ರನ್ ಗಳಿಸಿ 12 ರನ್‌ಗಳ ಮುನ್ನಡೆ ಪಡೆದುಕೊಂಡಿತ್ತು.
ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 395 ರನ್ ಕಲೆ ಹಾಕಿ ಸರ್ವಪತನ ಕಂಡಿತು. ಇನ್ನು ಗೆಲ್ಲಲು 384 ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡ 334 ರನ್‌ಗಳಿಗೆ ಆಲೌಟ್ ಆಯಿತು.
ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಶ್ರೇಷ್ಠ ಪ್ರಶಸ್ತಿಯನ್ನು ಕ್ರಿಸ್ ವೋಕ್ಸ್ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಹಂಚಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications