ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮೊಯೀನ್ ಅಲಿ ನಿವೃತ್ತಿ ವಾಪಾಸ್ ಪಡೆದು ಆಶಸ್ ಸರಣಿಯಲ್ಲಿ ಭಾಗವಹಿಸಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿರುವ ಮೊಯೀನ್ ಅಲಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫಲವಾಗಿದ್ದರು ಕೂಡ ಬೌಲಿಂಗ್‌ನಲ್ಲಿ ಮಿಂಚುವಲ್ಲಿ ಸಫಲವಾಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮೊಯೀನ್ ಅಲಿಗೆ ಐಸಿಸಿ ದಂಡದ ಬರೆ ನೀಡಿದೆ.
2021 ರಲ್ಲಿ ಆರಂಭಿಕ ನಿವೃತ್ತಿಯ ನಂತರ ಟೆಸ್ಟ್ ತಂಡಕ್ಕೆ ಮರಳಿದ್ದ ಮೊಯಿನ್ ಅಲಿ ಅವರು ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ದಂಡದ ಶಿಕ್ಷೆಗೆ ಗುರಿಯಾಗಿದ್ದಾರೆ. ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಇರುವ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.20 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದು ಕ್ರೀಡಾಸ್ಪೂರ್ತಿಗೆ ವಿರುದ್ಧವಾದ ನಡವಳಿಕೆ ಸಂಬಂಧಿಸಿದ ನೀತಿಸಂಹಿತೆ.

ಎಡ್ಜ್‌ಬಾಸ್ಟನ್‌ನಲ್ಲಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನ 89 ನೇ ಓವರ್‌ನಲ್ಲಿ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುವಾಗ ಮೊಯಿನ್ ತನ್ನ ಬೌಲಿಂಗ್ ಕೈಗೆ ಡ್ರೈಯಿಂಗ್ ಏಜೆಂಟ್ ಅನ್ನು ಬಳಸಿರುವುದು ಕಂಡುಬಂದಿದೆ. ಇದು ಐಸಿಸಿ ನೀತಿ ಸಂಹಿತೆಯ ಮೊದಲನೇ ಹಂತವನ್ನು ಉಲ್ಲಂಘಿಸಿದಂತಾಗಿದೆ. ಹಾಗಾಗಿ ಇಂಗ್ಲೆಂಡ್‌ನ ಈ ಆಲ್ ರೌಂಡರ್ ಒಂದು ಡಿಮೆರಿಟ್ ಅಂಕವನ್ನು ಕೂಡ ಪಡೆದುಕೊಂಡಿದ್ದಾರೆ.
ಇನ್ನು ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 393 ರನ್‌ಗಳನ್ನು ಗಳಿಸಿ 8 ವಿಕೆಟ್ ಕಳೆದುಕೊಂಡಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು. ಜೋ ರೂಟ್ ಅಮೋಘ ಶತಕ ಸಿಡಿಸಿದರೆ ಜಾಕ್ ಕ್ರಾವ್ಲೆ 61 ರನ್ ಜಾನಿ ಬೈರ್‌ಸ್ಟೋವ್ 78 ರನ್‌ಗಳನ್ನು ಗಳಿಸಿದರು. ಮೂಲಕ ಮೊದಲ ದಿನದಲ್ಲಿಯೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ ಇಂಗ್ಲೆಂಡ್ ತಂಡದ ನಿರ್ಧಾರ.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಡೇನಿಯಲ್ ಲಾರೆನ್ಸ್, ಜೋಶ್ ಟಂಗ್, ಮ್ಯಾಥ್ಯೂ ಪಾಟ್ಸ್, ಮಾರ್ಕ್ ವುಡ್, ಕ್ರಿಸ್ ವೋಕ್ಸ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್, ಸ್ಕಾಟ್ ಬೋಲ್ಯಾಂಡ್ ಆಡುತ್ತಿದ್ದಾರೆ
ಬೆಂಚ್: ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಜೋಶ್ ಇಂಗ್ಲಿಸ್, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್