ಆಶಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮಾತ್ರವೇ ಬಾಕಿಯಿದ್ದು ಗುರುವಾರದಿಂದ ಈ ಅಂತಿಮ ಪಂದ್ಯ ಓವಲ್‌ನಲ್ಲಿ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರನ್ನು ಕೊನೆಯ ಪಂದ್ಯದಲ್ಲಿಯೂ ಆಡುವ ಬಳಗದಲ್ಲಿ ಸೇರ್ಪಡೆಗೊಳಿಸಿದರೆ ಅದು ತನಮಗೆ ಬಹಳ ದೊಡ್ಡ ಅಚ್ಚರಿ ಎನಿಸಲಿದೆ ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್.
ಇಂಗ್ಲೆಂಡ್ ತಂಡದ ದಿಗ್ಗಜ ಕ್ರಿಕೆಟಿಗ ಜೇಮ್ಸ್ ಆಂಡರ್ಸನ್ ಈ ಬಾರಿಯ ಆಶಸ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಆಡಿರುವ ಆಂಡರ್ಸನ್ ಪಡೆದಿದ್ದು ಕೇವಲ ನಾಲ್ಕು ವಿಕೆಟ್ ಮಾತ್ರ. ಹೀಗಾಗಿ ಆಂಡರ್ಸನ್ ಅವರನ್ನು ಕೊನೆಯ ಪಂದ್ಯದಲ್ಲಿ ಆಡಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ರಿಕಿ ಪಾಂಟಿಂಗ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

41ರ ಹರೆಯದ ಜೇಮ್ಸ್ ಆಂಡರ್ಸನ್ ಆಶಸ್ ಸರಣಿಯಲ್ಲಿ ಯಾವಾಗಲೂ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡವರು. ಈ ಪ್ರತಿಷ್ಠಿತ ಸರಣಿಯಲ್ಲಿ ಈ ಹಿಂದೆ ಅವರು ನೀಡಿರುವ ಪ್ರದರ್ಶನಗಳು ಅವರ ಬೌಲಿಂಗ್ ಪರಾಕ್ರಮವನ್ನು ಸಾಬೀತುಪಡಿಸಿದೆ. ಆದರೆ ಈ ಬಾರಿ ಅವರ ಪ್ರದರ್ಶನ ತಂಡದ ಮಟ್ಟಿಗೆ ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಇಂಗ್ಲೆಂಡ್ ತಂಡ ಕೂಡ ಹಿನ್ನಡೆ ಅನುಭವಿಸುವಂತಾಯಿತು. ಈ ಹಿನ್ನಡೆಯ ಹೊರತಾಗಿಯೂ ಆಂಡರ್ಸನ್ ಕೊನೆಯ ಟೆಸ್ಟ್ ಪಂದ್ಯಕ್ಕೆ ಹೆಸರಿಸಿರುವ 15 ಆಟಗಾರರ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಆಂಡರ್ಸನ್ ಪ್ರದರ್ಶನದ ಬಗ್ಗೆ ಮಾತನಾಡಿರುವ ರಿಕಿ ಪಾಂಟಿಂಗ್ ಈ ಸರಣಿಯುದ್ದಕ್ಕೂ ಅವರು ಕಳಗುಂದಿಂತೆ ಕಂಡುಬಂದರು ಎಂದಿದ್ದಾರೆ. ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಅವರಿಗೆ ಮತ್ತೊಂದು ಅವಕಾಶ ನೀಡಲಾಯಿತು ಅಲ್ಲಿಯೂ ಅವರು ವಿಫಲವಾದರು ಎಂದು ಉಲ್ಲೇಖಿಸಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್.
"ಅವರು ಸರಣಿಯುದ್ದಕ್ಕೂ ಕಳೆಗುಂದಿದಂತಿದ್ದರು. ಈಗ ಇಗ್ಲೆಂಡ್ ತಂಡ ಕೊನೆಯ ಪಂದ್ಯವನ್ನಾಡಲು ಕಣಕ್ಕಿಳೀಯುತ್ತಿರುವ ಕಾರಣ ಅವರ ನಿರ್ಧಾರ ಕುತೂಹಲಕಾರಿಯಾಗಿರುತ್ತದೆ. ಅವರು ವಿಕೆಟ್‌ಗಳನ್ನು ಪಡೆದುಕೊಂಡಿದ್ದರೂ ಅದು ಬಾಲಂಗೋಚಿಗಳ ವಿಕೆಟ್. ಹೊಸ ಚೆಂಡುಗಳನ್ನು ನೀಡಿ ವಿಕೆಟ್‌ಗಳನ್ನು ಪಡೆಯಲು ಅವಕಾಶ ನಿಡಿದ್ದರೂ ಅದು ಸಫಲವಾಗಿರಲಿಲ್ಲ. ಇಷ್ಟು ಅದ್ಭಿತವಾದ ವೃತ್ತಿ ಜೀವನ ಹೊಂದಿರುವ ಜೇಮ್ಸ್ ಆಂಡರ್ಸನ್ ಅವರಿಂದ ಇಂತಾ ಕಳೆಗುಂದಿದ ಪ್ರದರ್ಶನ ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್.
ಅಂತಿಮ ಪಂದ್ಯಕ್ಕೆ ಪಾಂಟಿಂಗ್ ಹೆಸರಿಸಿದ ಇಂಗ್ಲೆಂಡ್‌ನ ಸಂಭಾವ್ಯ XI: ಝಾಕ್ ಕ್ರಾಲಿ, ಬೆನ್ ಡಕೆಟ್, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೋಶ್ ಟಂಗ್.