
ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಸರಣಿಯ ಎರಡನೇ ಟೆಸ್ಟ್‌ನ ಎರಡನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಆಸೀಸ್ ನೀಡಿದ ಬೃಹತ್ ಮೊತ್ತಕ್ಕೆ ಉತ್ತರವಾಗಿ 2 ವಿಕೆಟ್ ನಷ್ಟಕ್ಕೆ 17 ರನ್ ಕಲೆಹಾಕಿದೆ. ಆಸ್ಟ್ರೇಲಿಯಾದ 473ರನ್‌ಗಳಿಗೆ ಉತ್ತರವಾಗಿ ಬ್ಯಾಟ್ ಬೀಸಿದ ಇಂಗ್ಲೆಂಡ್‌ಗೆ, ಕಾಂಗರೂ ಪಾಳಯದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮಿಚೆಲ್ ನೆಸರ್ ಮಾರಕವಾದ್ರು.
ಮೊದಲಿಗೆ 4ರನ್‌ಗಳಿಸಿದ್ದ ರೋರಿ ಬರ್ನ್ಸ್ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ರೆ, ಹಸೀಬ್ ಹಮೀದ್ ಕೇವಲ 6ರನ್‌ಗಳಿಸಿದ್ದಾಗ ಮಿಚೆಲ್ ನೆಸರ್‌ಗೆ ಬೌಲಿಂಗ್‌ನಲ್ಲಿ ಬಲಿಯಾದ್ರು.
ಇದಕ್ಕೂ ಮೊದಲು ಮೊದಲ ದಿನದಾಟದಲ್ಲಿ ಎರಡು ವಿಕೆಟ್ ಕಳೆದುಕೊಂಡು 221 ರನ್‌ಗಳನ್ನು ಗಳಿಸಿ ಆಟವಾಡುತ್ತಿದ್ದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 95 ರನ್‌ಗಳಿಸಿ ಔಟಾಗಿ ಫೆವಿಲಿಯನ್ ಸೇರಿಕೊಂಡಿದ್ರು. ಆದ್ರೆ 95ರನ್‌ಗಳಿಸಿ ಅಜೇಯವಾಗಿ ಉಳಿದಿದ್ದ ಮಾರ್ನಾಸ್ ಲ್ಯಾಬುಶೈನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಆರನೇ ಶತಕ ಸಿಡಿಸುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದ್ರು.

ಮಾರ್ನಾಸ್ ಲ್ಯಾಬುಶೈನ್ ಉತ್ತಮ ಸಾಥ್ ನೀಡಿದ ನಾಯಕ ಸ್ಟೀವನ್ ಸ್ಮಿತ್ ಕೂಡ ಭರ್ಜರಿ ಆಟವಾಡಿದ್ರು. ತಾಳ್ಮೆಯ ಜೊತೆಯಾಟ ಮುಂದುವರೆದಾಗ 103ರನ್‌ಗಳಿಸಿದ್ದ ಮಾರ್ನಾಸ್ ಲ್ಯಾಬುಶೈನ್ ರಾಬಿನ್‌ಸನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು. ಆದ್ರೆ ನಾಯಕತ್ವದ ಜವಾಬ್ದಾರಿಯುತ ಆಟವಾಡಿದ ಸ್ಮಿತ್ ಟ್ರಾವಿಸ್ ಹೆಡ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ್ರು.
ಇಂಗ್ಲೆಂಡ್ ನಾಯಕ ಜೋ ರೂಟ್ ಆಸ್ಟ್ರೇಲಿಯಾ ನಾಲ್ಕನೇ ವಿಕೆಟ್ ಜೊತೆಯಾಟ ಬೇರ್ಪಡಿಸುವಲ್ಲಿ ಯಶಸ್ವಿಯಾದ್ರು. ಮೊದಲ ಟೆಸ್ಟ್ ಪಂದ್ಯದಲ್ಲಿ 152ರನ್ ಕಲೆಹಾಕಿ ಮಿಂಚಿದ್ದ ಟ್ರಾವಿಸ್ ಹೆಡ್ 18 ರನ್‌ಗಳಿಸಿದ್ದಾಗ ರೂಟ್ ಸ್ಪಿನ್ ಅರಿಯದೆ ಬೌಲ್ಡ್ ಆದ್ರು. ಇದ್ರ ಬೆನ್ನಲ್ಲೇ ಕ್ಯಾಮರಾನ್ ಗ್ರೀನ್ 2ರನ್‌ಗಳಿಸಿ ಬೆನ್ ಸ್ಟೋಕ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದ್ರು.
ಆದ್ರೆ ಏಕಾಂಗಿ ಹೋರಾಟ ಆಸೀಸ್ ಬದಲಿ ನಾಯಕ ಸ್ಟೀವ್ ಸ್ಮಿತ್ ಶತಕಕ್ಕೆ 7ರನ್ ಬಾಕಿ ಇರುವಂತೆ ಎಡವಿದ್ರು. ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಂಡರ್ಸಸ್ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದ ಸ್ಟೀವ್ ಸ್ಮಿತ್ 93ರನ್‌ಗೆ ವಿಕೆಟ್ ಒಪ್ಪಿಸಿದ್ರು.
ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಉತ್ತಮ ಕೊಡುಗೆಯಿಂದ ಆಸ್ಟ್ರೇಲಿಯಾ 400ರ ಗಡಿದಾಟಿತು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ 51ರನ್, ಮಿಚೆಲ್ ಸ್ಟಾರ್ಕ್ ಅಜೇಯ 39ರನ್, ಮಿಚೆಲ್ ನೆಸರ್ 35ರನ್‌ಗಳ ಕೊಡುಗೆಯಿಂದಾಗಿ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 473ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು.
ಇಂಗ್ಲೆಂಡ್ ಪರ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ 3 ವಿಕೆಟ್, ಜೇಮ್ಸ್ ಆ್ಯಂಡರ್ಸನ್ 2 ವಿಕೆಟ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ , ರಾಬಿನ್‌ಸನ್, ಜೋ ರೂಟ್ ತಲಾ 1 ವಿಕೆಟ್ ಪಡೆದರು.
ಆಸ್ಟ್ರೇಲಿಯಾ ನೀಡಿರುವ ಬೃಹತ್ ಮೊತ್ತಕ್ಕೆ ಉತ್ತರವಾಗಿ ಇಂಗ್ಲೆಂಡ್, ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದೆ. ಎರಡು ವಿಕೆಟ್ ನಷ್ಟಕ್ಕೆ 17 ರನ್ ಕಲೆಹಾಕಿರುವ ಇಂಗ್ಲೆಂಡ್ ಇನ್ನೂ 456ರನ್‌ಗಳನ್ನ ಬಾಕಿ ಉಳಿಸಿಕೊಂಡಿದೆ. ಮೂರನೇ ದಿನದಾಟದಲ್ಲಾದ್ರೂ ಉತ್ತಮ ಜೊತೆಯಾಟದಿಂದ ರನ್ ಬೇಟೆಯಾಡುತ್ತಾ ಕಾದು ನೋಡಬೇಕು.
ಆಸ್ಟ್ರೇಲಿಯಾ ತಂಡದ ಪ್ಲೇಯಿಂಗ್ 11
ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮೈಕೆಲ್ ನೆಸರ್, ಮಿಚೆಲ್ ಸ್ಟಾರ್ಕ್, ನಥಾನ್ ಲಿಯಾನ್, ಜೈ ರಿಚರ್ಡ್ಸನ್
ಇಂಗ್ಲೆಂಡ್ ತಂಡದ ಪ್ಲೇಯಿಂಗ್ 11
ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜೋ ರೂಟ್(ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್