
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿಯೂ ಜೋ ರೂಟ್ ಪಡೆ ಹೀನಾಯ ಪ್ರದರ್ಶನವನ್ನು ಮುಂದುವರಿಸಿದೆ. ಈ ಮೂಲಕ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿಯೂ ಸೋಲಿನ ಬಾಗಿಲಿಗೆ ಬಂದು ನಿಂತಿದೆ. ಮೆಲ್ಬರ್ನ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡು ದಿನಗಳ ಆಟ ಮಾತ್ರವೇ ಮುಕ್ತಾಯವಾಗಿದ್ದು ಪಂದ್ಯ ಮೂರನೇ ದಿನದಲ್ಲಿಯೇ ಅಂತ್ಯಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 185 ರನ್‌ಗಳಿಗೆ ಆಲೌಟ್ ಆದ ಬಳಿಕ ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ದಾಂಡಿಗರ ವಿರುದ್ಧ ಇಂಗ್ಲೆಂಡ್ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಹಾಗಿದ್ದರೂ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಸಿಸ್ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ 76 ರನ್‌ಗಳ ಕೊಡುಗೆ ನೀಡಿ ತಂಡಕ್ಕೆ ಆಸರೆಯಾದರು. ಈ ಪಂದ್ಯದಲ್ಲಿ ಲ್ಯಾಬುಶೈನ್ನ ಸ್ಟೀವ್ ಸ್ಮಿತ್‌ರಂತಾ ಆಟಗಾರರು ಸಂಪೂರ್ಣ ವೈಫಲ್ಯವನ್ನು ಅನುಭವಿಸಿದರು. ಅಂತಿಮ ಹಂತದಲ್ಲಿ ಪ್ಯಾಟ್ ಕಮ್ಮಿನ್ಸ್ ಹಾಗೂ ಸ್ಟಾರ್ಕ್ ಕೂಡ ಉತ್ತಮ ಜೊತೆಯಾಟ ನೀಡುವ ಮೂಲಕ ಮುನ್ನಡೆಯ ಅಂತರವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು.
ಇನ್ನು ಇಂಗ್ಲೆಂಡ್ ತಂಡದ ಪರವಾಗಿ ಅನುಭವಿ ಆಟಗಾರ ಜೇಮ್ಸ್ ಆಂಡರ್ಸನ್ 4 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ರಾಬಿನ್ಸನ್ ಹಾಗೂ ಮಾರ್ಕ್‌ವುಡ್ ಕೂಡ ತಲಾ 2 ವಿಕೆಟ್ ಪಡೆದುಕೊಂಡರು. ಬೆನ್ ಸ್ಟೋಕ್ಸ್ ಹಾಗೂ ಜ್ಯಾಕ್ ಲೀಚ್ ತಲಾ ಒಂದು ವಿಕೆಟ್ ಸಂಪಾದಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ 267 ರನ್‌ಗಳಿಗೆ ಆಲೌಟ್ ಆಗಿತ್ತು.
ಇನ್ನು 82 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಮತ್ತೊಮ್ಮೆ ಹೀನಾಯ ಆರಂಭವನ್ನು ಪಡೆದುಕೊಂಡಿತು. ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜಾಕ್ ಕ್ರಾವ್ಲೆ ಕೇವಲ 5 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಬ್ಯಾಟಿಂಗ್‌ಗೆ ಇಳಿದ ಡೇವಿಡ್ ಮಲನ್ ಗೋಲ್ಡನ್ ಡಕ್‌ಗೆ ಬಲಿಯಾದರು. ಈ ಮೂಲಕ ಕೇವಲ 7 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು ಇಂಗ್ಲೆಂಡ್. ನಂತರ ತಂಡದ ಮೊತ್ತ 23 ರನ್‌ಗಳಾಗುವಷ್ಟರಲ್ಲಿ ಹಸೀಬ್ ಹಮೀದ್ 7ರನ್‌ಗಳಿಸಿ ಔಟಾದರು. ಬಳಿಕ ನೈಟ್‌ವಾಚ್‌ಮನ್ ಆಗಿ ಕಣಕ್ಕಿಳಿದ ಜ್ಯಾಕ್ ಲೀಚ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಈ ಮೂಲಕ ಇಂಗ್ಲೆಂಡ್ ತಂಡ ಕೇವಲ 31 ರನ್‌ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಕ್ರೀಸ್‌ನಲ್ಲಿ 12 ರನ್‌ಗಳಿಸಿರುವ ನಾಯಕ ಜೋ ರೂಟ್ ಹಾಗೂ 2 ರನ್‌ಗಳಿಸಿರುವ ಬೆನ್ ಸ್ಟೋಕ್ಸ್ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ತಂಡ ಇನ್ನು ಕೂಡ 51 ರನ್‌ಗಳಷ್ಟು ಹಿನ್ನಡೆಯಲ್ಲಿದೆ. ಈ ಮೂಲಕ ಇಂಗ್ಲೆಂಡ್ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿಯೂ ಹೀನಾಯ ಸೋಲು ಕಾಣುವ ಸಾಧ್ಯತೆ ನಿಚ್ಚಳವಾಗಿದೆ.
ಈಗಾಗಲೇ ಆಶಸ್ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳು ಮುಕ್ತಾಯವಾಗಿದ್ದು ಎರಡರಲ್ಲಿಯೂ ಆಸಿಸ್ ಪಡೆ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದೆ. ಈ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡಕ್ಕೆ 5-0 ಅಂತರದಿಂದ ಸೋಲುಣಿಸುವ ಗುರಿ ಹೊಂದಿದ್ದು ಈ ಸಾಧನೆಗೆ ಮತ್ತಷ್ಟು ಹತ್ತಿರವಾಗುತ್ತಿದೆ ಪ್ಯಾಟ್ ಕಮ್ಮಿನ್ಸ್ ಪಡೆ.
ಆಸ್ಟ್ರೇಲಿಯಾ ಆಡುವ ಬಳಗ: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್
ಬೆಂಚ್: ಉಸ್ಮಾನ್ ಖವಾಜಾ, ಝೈ ರಿಚರ್ಡ್ಸನ್, ಮೈಕೆಲ್ ನೆಸರ್, ಮಿಚೆಲ್ ಸ್ವೆಪ್ಸನ್
ಇಂಗ್ಲೆಂಡ್ ಆಡುವ ಬಳಗ: ಹಸೀಬ್ ಹಮೀದ್, ಝಾಕ್ ಕ್ರಾಲಿ, ಜೋ ರೂಟ್ (ನಾಯಕ), ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮಾರ್ಕ್ ವುಡ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಸ್ಟುವರ್ಟ್ ಬ್ರಾಡ್, ಡೊಮಿನಿಕ್ ಬೆಸ್, ಆಲಿ ಪೋಪ್, ಕ್ರಿಸ್ ವೋಕ್ಸ್, ರೋರಿ ಬರ್ನ್ಸ್, ಕ್ರೇಗ್ ಓವರ್ಟನ್, ಡೇನಿಯಲ್ ಲಾರೆನ್ಸ್