
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆಶಸ್ ಸರಣಿಯ ಮೂರನೇ ಪಂದ್ಯ ಮೂರನೇ ದಿನದಲ್ಲಿಯೇ ಅಂತ್ಯವಾಗಿದೆ. ಈ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಅತ್ಯಂತ ಹೀನಾಯವಾದ ಸೋಲು ಅನುಭವಿಸಿದ್ದು ಮುಖಭಂಗ ಅನುಭವಿಸಿದೆ. ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಹಾಗೂ 14 ರನ್‌ಗಳ ಅಂತರದಿಂದ ಮಣಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇನ್ನು ಎರಡು ಪಂದ್ಯಗಳು ಬಾಕಿಯಿರುವಂತೆಯೇ 3-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 185 ರನ್‌ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 68 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಹೋರಾಟವನ್ನು ಮುಕ್ತಾಯಗೊಳಿಸಿತು. ಇದೀಗ ಆಸ್ಟ್ರೇಲಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ವಶಕ್ಕೆ ಪಡೆಯಲು ದೃಷ್ಟಿಯಿಟ್ಟಿದೆ.
ಬ್ಯಾಟಿಂಗ್‌ನಲ್ಲಿ ಅತ್ಯಂತ ಕಳಪೆ: ಇಂಗ್ಲೆಂಡ್ ತಂಡ ಈ ವರ್ಷ ಬ್ಯಾಟಿಂಗ್‌ನಲ್ಲಿನ ಕಳಪೆ ಪ್ರದರ್ಶನವನ್ನು ಮುಂದುವರಿಸಿದೆ. ಆಸ್ಟ್ರೇಲಿಯಾ ಬೌಲರ್‌ಗಳ ದಾಳಿಗೆ ಇಂಗ್ಲೆಂಡ್ ತಂಡದ ಯಾವೊಬ್ಬ ಬೌಲರ್ ಕೂಡ ಸಮರ್ಥವಾದ ಪ್ರತಿರೋಧವೊಡ್ಡಲು ಸಾಧ್ಯವಾಗಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಜೋ ರೂಟ್ ಮಾತ್ರವೇ 50 ರನ್‌ಗಳಿಸಿದ್ದರು. ಉಳಿದಂತೆ ಯಾವ ಬ್ಯಾಟರ್‌ಗಳಿಂದಲೂ ಉತ್ತಮ ಕೊಡುಗೆ ಬರಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಜೋ ರೂಟ್ ಗಳಿಸಿದ 28 ರನ್‌ಗಳ ಕೊಡುಗೆಯೇ ತಂಡದ ಹೈಯೆಸ್ಟ್ ಸ್ಕೋರ್. ಉಳಿದಂತೆ ಯಾವೊಬ್ಬ ಬ್ಯಾಟರ್ ಕೂಡ ಎರಡಂಕಿ ದಾಟಿಲ್ಲ.
ಈ ವರ್ಷ ಇಂಗ್ಲೆಂಡ್‌ಗೆ ಕಹಿ: ಇನ್ನು 2021ರ ಕ್ಯಾಲೆಂಡರ್ ವರ್ಷದಲ್ಲಿ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಹೀನಾಯ ಪ್ರದರ್ಶನವನ್ನು ನೀಡಿಕೊಂಡು ಬಂದಿದೆ. ಈ ವರ್ಷದಲ್ಲಿ ಜೋ ರೂಟ್ ಬಳಗ ಒಟ್ಟು 28 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು ಇದರಲ್ಲಿ 13 ಬಾರಿ 200 ರನ್‌ಗಳಿಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಇದು ಬ್ಯಾಟಿಂಗ್‌ನ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇನ್ನು ಮೆಲ್ಬರ್ನ್‌ಲ್ಲಿ ನಡೆದ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 185 ರನ್‌ಗಳಿಗೆ ಆಲೌಟ್ ಆದ ಬಳಿಕ ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ದಾಂಡಿಗರ ವಿರುದ್ಧ ಇಂಗ್ಲೆಂಡ್ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಹಾಗಿದ್ದರೂ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್‌ಗಳ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆಸಿಸ್ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ 76 ರನ್‌ಗಳ ಕೊಡುಗೆ ನೀಡಿ ತಂಡಕ್ಕೆ ಆಸರೆಯಾದರು. ಈ ಪಂದ್ಯದಲ್ಲಿ ಲ್ಯಾಬುಶೈನ್ನ ಸ್ಟೀವ್ ಸ್ಮಿತ್‌ರಂತಾ ಆಟಗಾರರು ಸಂಪೂರ್ಣ ವೈಫಲ್ಯವನ್ನು ಅನುಭವಿಸಿದರು. ಅಂತಿಮ ಹಂತದಲ್ಲಿ ಪ್ಯಾಟ್ ಕಮ್ಮಿನ್ಸ್ ಹಾಗೂ ಸ್ಟಾರ್ಕ್ ಕೂಡ ಉತ್ತಮ ಜೊತೆಯಾಟ ನೀಡುವ ಮೂಲಕ ಮುನ್ನಡೆಯ ಅಂತರವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು.
ಇನ್ನು 82 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಮತ್ತೊಮ್ಮೆ ಹೀನಾಯ ಆರಂಭವನ್ನು ಪಡೆದುಕೊಂಡಿತು. ಎರಡನೇ ದಿನದಾಟದ ಅಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್ ಕಳೆದುಕೊಂಡು 31 ರನ್‌ಗಳಿಸಿತ್ತು. ಈ ಕುಸಿತ ಮೂರನೇ ದಿನವೂ ಮುಂದುವರಿದಿದ್ದು ಭೋಜನವಿರಾಮಕ್ಕೂ ಮುನ್ನವೇ ಆಲೌಟ್ ಆಗಿ ತನ್ನ ಇನ್ನಿಂಗ್ಸ್ ಮುಕ್ತಾಯಗೊಳಿಸಿದೆ. ಈ ಮೂಲಕ ಮತ್ತೊಂದು ಹೀನಾಯ ಸೋಲನ್ನು ಕಂಡಿದೆ ಜೋ ರೂಟ್ ಪಡೆ.
ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 2021 ಇಂಗ್ಲೆಂಡ್ ಪಾಲಿಗೆ ಅತ್ಯಂತ ಕೆಟ್ಟ ವರ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇಂಗ್ಲೆಂಡ್ ತಂಡ ಈ ಬಾರಿ 28 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು ಇದರಲ್ಲಿ ಬರೊಬ್ಬರಿ 13 ಬಾರಿ ಇಂಗ್ಲೆಂಡ್ ತಂಡ 200ಕ್ಕಿಂತ ಕಡಿಮೆ ರನ್‌ಗಳಿಸಿದೆ. ಅಲ್ಲದೆ ಮೆಲ್ಬರ್ನ್ ಪಂದ್ಯದ ಸೋಲಿನೊಂದಿಗೆ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ವರ್ಷ 9ನೇ ಸೋಲು ಅನುಭವಿಸಿದೆ. ಇದು ಟೆಸ್ಟ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡದ ಅತ್ಯಂತ ಕಳಪೆ ಸಾಧನೆಯಾಗಿದೆ.
ಇನ್ನು ಇಂಗ್ಲೆಂಡ್ ತಂಡದ ಈ ಹೀನಾಯ ಪ್ರದರ್ಶನದಲ್ಲಿ ತಂಡದ ಬ್ಯಾಟಿಂಗ್ ವಿಭಾಗದ ಕಳಪೆ ಪ್ರದರ್ಶನ ಪ್ರಮುಖ ಕಾರಣ ಎಂಬುದಲ್ಲಿ ಅನುಮಾನವಿಲ್ಲ. ಇದಕ್ಕೆ ಆಶಸ್ ಸರಣಿಯಲ್ಲಿ ಆಡಿದ ಆರು ಇನ್ನಿಂಗ್ಸ್‌ಗಳಲ್ಲಿನ ಇಂಗ್ಲೆಂಡ್ ತಂಡದ ಪ್ರದರ್ಶನವೇ ಸಾಕ್ಷಿಯಾಗಿದೆ. ಈ ಸರಣಿಯಲ್ಲಿ ಇಂಗ್ಲೆಂಡ್ ತಂಡ ಕ್ರಮವಾಗಿ 147, 297, 236, 192, 185 ಮತ್ತು 68 ರನ್‌ಗಳಿಸಿದೆ. ಅಂದರೆ ಕೇವಲ ಎರಡು ಬಾರಿ ಮಾತ್ರವೇ ಇಂಗ್ಲೆಂಡ್ ತಂಡ 200ಕ್ಕೂ ಅಧಿಕ ರನ್‌ಗಳಿಸಲು ಯಶಸ್ವಿಯಾಗಿದೆ.
ಆಸ್ಟ್ರೇಲಿಯಾ ಆಡುವ ಬಳಗ: ಮಾರ್ಕಸ್ ಹ್ಯಾರಿಸ್, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್
ಬೆಂಚ್: ಉಸ್ಮಾನ್ ಖವಾಜಾ, ಝೈ ರಿಚರ್ಡ್ಸನ್, ಮೈಕೆಲ್ ನೆಸರ್, ಮಿಚೆಲ್ ಸ್ವೆಪ್ಸನ್
ಇಂಗ್ಲೆಂಡ್ ಆಡುವ ಬಳಗ: ಹಸೀಬ್ ಹಮೀದ್, ಝಾಕ್ ಕ್ರಾಲಿ, ಜೋ ರೂಟ್ (ನಾಯಕ), ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೋವ್, ಮಾರ್ಕ್ ವುಡ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಸ್ಟುವರ್ಟ್ ಬ್ರಾಡ್, ಡೊಮಿನಿಕ್ ಬೆಸ್, ಆಲಿ ಪೋಪ್, ಕ್ರಿಸ್ ವೋಕ್ಸ್, ರೋರಿ ಬರ್ನ್ಸ್, ಕ್ರೇಗ್ ಓವರ್ಟನ್, ಡೇನಿಯಲ್ ಲಾರೆನ್ಸ್