ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಸದ್ಯ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಬಾಂಗ್ಲಾದೇಶದ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಧಾರವಾದರು. ಅಲ್ಲದೆ ಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿ ವಿಕೆಟ್ ಬೇಟೆ ನಡೆಸಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಅಶ್ವಿನ್ ಮತ್ತೊಂದು ದಾಖಲೆಯ ಬರೆಯುವ ಸನಿಹದಲ್ಲಿದ್ದಾರೆ.
ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ತಮ್ಮ ಬಿಗುವಿನ ಸ್ಪಿನ್ ದಾಳಿಯ ಮೂಲಕ ಎದುರಾಳಿಯನ್ನು ಕಟ್ಟಿ ಹಾಕಿದ್ದ ಅಶ್ವಿನ್, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ ಭಾರತದ ಪರ ನಾಲ್ಕನೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೊದಲು ಈ ದಾಖಲೆ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು.

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆಯನ್ನು ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ಇವರು ನಾಲ್ಕನೇ ಇನಿಂಗ್ಸ್‌ನಲ್ಲಿ ಒಟ್ಟು 99 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಾನ್ಪುರ್ ಟೆಸ್ಟ್‌ನಲ್ಲಿ ಇನ್ನೊಂದು ವಿಕೆಟ್ ಪಡೆದು ಕೊಂಡಲ್ಲಿ, ಟೆಸ್ಟ್ ಕ್ರಿಕೆಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 100 ವಿಕೆಟ್ ಪೂರೈಸಿದ ವಿಶೇಷ ಸಾಧನೆಯನ್ನು ಮಾಡಲಿದ್ದಾರೆ.
ಈ ಸಾಧನೆ ಅಶ್ವಿನ್ ಮಾಡಿದ್ದೇ ಆದಲ್ಲಿ ಈ ಮೈಲಿಗಲ್ಲು ತಲುಪಿದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು ಐವರು ಬೌಲರ್‌ಗಳು ನಾಲ್ಕನೇ ಇನಿಂಗ್ಸ್‌ನಲ್ಲಿ 100ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಶೇನ್ ವಾರ್ನ್ ಕಾಣಿಸಿಕೊಳ್ಳುತ್ತಾರೆ. ಇವರು 138 ವಿಕೆಟ್‌ಗಳನ್ನು ಪಡೆದಿದ್ದಾರೆ. ಉಳಿದಂತೆ ನಾಥನ್ ಲಿಯಾನ್ (119), ರಂಗನಾ ಹೆರಾತ್ (115), ಮುತ್ತಯ್ಯ ಮುರಳೀಧರನ್ (106) ಮತ್ತು ಗ್ಲೆನ್ ಮೆಕ್‌ಗ್ರಾತ್ (103) ಸೇರಿದ್ದಾರೆ.
ಟೀಮ್ ಇಂಡಿಯಾದ ಆಲ್‌ರೌಂಡರ್ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿ ನಿಂತಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಅಶ್ವಿನ್ 9 ವಿಕೆಟ್ ಪಡೆದರೆ, ನಾಥನ್ ಲಿಯಾನ್ ದಾಖಲೆ ಅಳಿಸಬಲ್ಲರು. ಅಶ್ವಿನ್ ಬುಟ್ಟಿಯಲ್ಲಿ ಒಟ್ಟು 522 ಟೆಸ್ಟ್ ವಿಕೆಟ್‌ಗಳಿಗೆ. ಇನ್ನು ಲಿಯಾನ್ ಟೆಸ್ಟ್‌ನಲ್ಲಿ 530 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇನ್ನು ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದ್ದೇ ಆದಲ್ಲಿ, ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಹೋಗುತ್ತದೆ. ಈಗಾಗಲೇ ಟೀಮ್ ಇಂಡಿಯಾ ಸೋತ ಪಂದ್ಯಗಳಿಗಿಂತ ಗೆದ್ದ ಪಂದ್ಯಗಳ ಸಂಖ್ಯೆ ಹೆಚ್ಚಿದೆ. ಇನ್ನು ಕಾನ್ಪುರ್ ಟೆಸ್ಟ್ ಗೆದ್ದಿದ್ದೇ ಆದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಬಳಿಕ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಲಿದೆ.