ಬ್ರಿಸ್ಬೇನ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಮೂರನೆ ಟೆಸ್ಟ್ ನಡೆದಿದೆ. ಮೂರನೇ ಪಂದ್ಯ ಮಂದ ಬೆಳಕು ಹಾಗೂ ಮಳೆ ಕಾಟದಿಂದ ಡ್ರಾದಲ್ಲಿ ಅಂತ್ಯವಾಗಿದೆ. ಹೀಗಾಗಿ ಬಾರ್ಡರ್ ಗವಾಸ್ಕರ್ ಸರಣಿ ಸಮಬಲದಲ್ಲಿ ಸಾಗುತ್ತಿದೆ. ಈ ಟೆಸ್ಟ್ ಡ್ರಾ ಸಾಧಿಸಿದ ಖುಷಿ ಒಂದು ಕಡೆ ಆದರೆ, ಟೀಮ್ ಇಂಡಿಯಾದ ಅನುಭವಿ ಸ್ಪಿನ್ ಬೌಲರ್ ನಿವೃತ್ತಿ ಘೋಷಿಸಿರುವ ಬೇಸರ ಮತ್ತೊಂದೆಡೆ. ಟೀಮ್ ಇಂಡಿಯಾದ ಅನುಭವಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿ ಸುದ್ದಿ ಕ್ರಿಕೆಟ್ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸುದ್ದಿ ಈಗ ವಿಶ್ವ ಕ್ರಿಕೆಟ್‌ನಲ್ಲಿ ತಲ್ಲಣ ಮೂಡಿಸಿದೆ. ಈ ಬಗ್ಗೆ ಹಲವು ಮಾಜಿ ಆಟಗಾರರು ತಮ್ಮ ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸಾಲಿಗೆ ಈಗ ಪಾಕ್ ಮಾಜಿ ಆಟಗಾರ ಸಹ ಸೇರಿದ್ದಾರೆ.

ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕನಾಗಿದ್ದರೆ ಅಶ್ವಿನ್‌ಗೆ ನಿವೃತ್ತಿಯಾಗಲು ಅವಕಾಶ ನೀಡುತ್ತಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಬಸಿತ್ ಅಲಿ ಹೇಳಿದ್ದಾರೆ. ಸಿಡ್ನಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ಅಶ್ವಿನ್ ಅವರ ಅವಶ್ಯಕತೆ ತುಂಬ ಇದ್ದು, ಅವರಿಗೆ ನಿವೃತ್ತಿ ನೀಡದಂತೆ ವಿರಾಟ್ ಕೊಹ್ಲಿ ಮನವಲಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಬಸಿತ್ ಅಲಿ ತಮ್ಮ ಯೂಟ್ಯೂಬ್ ಚಾನೆಲ್‌ಗೆ ಮಾತನಾಡಿದ್ದಾರೆ. ಒಂದು ವೇಳೆ ಈ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿ ಇದ್ದಿದ್ದರೆ, ಅಶ್ವಿನ್ ಅವರನ್ನು ನಿವೃತ್ತಿ ನೀಡದಂತೆ ತಡೆಯುವಲ್ಲಿ ಯಶಸ್ವಿಯಾಗುತ್ತಿದ್ದರು. ಸಿಡ್ನಿ ಪಿಚ್ ಸ್ಪಿನ್ ಬೌಲರ್‌ಗಳಿಗೆ ಸಹಾಯ ಮಾಡುತ್ತಿತ್ತು. ಹೀಗಾಗಿ ಅವರ ಮನವೊಲಿಸುವಲ್ಲಿ ವಿರಾಟ್ ಯಶಸ್ವಿಯಾಗುತ್ತಿದ್ದರು. ಅಶ್ವಿನ್ ನಿವೃತ್ತಿ ಆಗದಂತೆ ವಿರಾಟ್ ಕೊಹ್ಲಿ ತಡೆಯುವಲ್ಲಿ ಸಫಲರಾಗುತ್ತಿದ್ದರು ಎಂಬ ಗ್ಯಾರಂಟಿ ನನಗಿದೆ. ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಕೂಡ ಟೀಂ ಇಂಡಿಯಾದ ಕೋಚ್ ಆಗಿದ್ದರು, ಇದನ್ನು ಆಗದಂತೆ ತಡೆಯುತ್ತಿದ್ದರು ಎಂದು ತಿಳಿಸಿದ್ದಾರೆ.

ಟೀಮ್ ಇಂಡಿಯಾದ ಹಾಲಿ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ರೋಹಿತ್ ಶರ್ಮಾ ಅಶ್ವಿನ್ ಅವರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪಾಕ್ ಮಾಜಿ ಆಟಗಾರ ಹೇಳಿದ್ದಾರೆ. ಅಶ್ವಿನ್ ಅವರ ಬಾಡಿ ಲ್ಯಾಂಗ್ವೇಜ್‌ನಿಂದ ಇದು ಬೇರೆ ಸೂಚನೆಗಳನ್ನೇ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಇವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 537 ವಿಕೆಟ್ ಪಡೆದಿದ್ದು, ಗರಿಷ್ಠ ವಿಕೆಟ್ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ದಿಗ್ಗಜ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ. ಈಗ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಇರುವ ಪ್ರಶ್ನೆ ಒಂದೇ ಅಶ್ವಿನ್ ಅವರ ಸ್ಥಾನವನ್ನು ತುಂಬುವುದು ಯಾರು?