ದುಬೈ, ಸೆಪ್ಟೆಂಬರ್ 16: ಏಷ್ಯಾ ಕಪ್ ಟೂರ್ನಿಯ ಎರಡನೆಯ ಪಂದ್ಯದಲ್ಲಿ ಪಾಕಿಸ್ತಾನ, ದುರ್ಬಲ ಹಾಂಕಾಂಗ್ ತಂಡದ ಎದುರು 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಹಾಂಕಾಂಗ್ 37.1 ಓವರ್‌ಗಳಲ್ಲಿ ಕೇವಲ 116 ರನ್‌ಗಳಿಗೆ ತನ್ನ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ತೀರಾ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ಆರಂಭಿಕ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಅವರ ಅಜೇಯ ಅರ್ಧಶತಕದ ನೆರವಿನಿಂದ 23.4 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಸಣ್ಣ ಗುರಿಯಾಗಿದ್ದರೂ ಪಾಕಿಸ್ತಾನ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸದೆ ಎಚ್ಚರಿಕೆಯ ಆಟದ ಮೊರೆ ಹೋಯಿತು.
ಫಖರ್ ಜಮಾನ್ 24 ರನ್ ಗಳಿಸಿದರೆ, ಬಾಬರ್ ಅಜಂ 33 ರನ್ ಬಾರಿಸಿದರು. ಕೊನೆಯಲ್ಲಿ ಇಮಾಮ್ ಮತ್ತು ಶೋಯೆಬ್ ಮಲಿಕ್ ಗೆಲುವಿನ ಶಾಸ್ತ್ರ ಮುಗಿಸಿದರು.
ಬಿದ್ದ ಎರಡೂ ವಿಕೆಟ್‌ಗಳು ಸ್ಪಿನ್ನರ್ ಎಹ್ಸಾನ್ ಖಾನ್ ಅವರ ಪಾಲಾದವು.
ಇದಕ್ಕೂ ಮೊದಲು ಪಾಕ್ ವೇಗಿಗಳಾದ ಉಸ್ಮಾನ್ ಖಾನ್, ಹಸನ್ ಅಲಿ ಮತ್ತು ಸ್ಪಿನ್ನರ್ ಶಬದ್ ಖಾನ್ ಅವರ ದಾಳಿಗೆ ತತ್ತರಿಸಿದ ದುರ್ಬಲ ಹಾಂಕಾಂಗ್ ತಂಡದ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದರು.
ಟಾಸ್ ಗೆದ್ದ ಹಾಂಕಾಂಗ್ ನಾಯಕ, ಭಾರತ ಮೂಲದ ಅಂಶುಮಾನ್ ರಾತ್, ಪಾಕಿಸ್ತಾನಕ್ಕೆ ಸವಾಲಿನ ಗುರಿ ನೀಡುವ ಬಯಕೆಯೊಂದಿಗೆ ಬ್ಯಾಟಿಂಗ್‌ಗೆ ಇಳಿದರು. ಆದರೆ, ಅನನುಭವಿ ಆಟಗಾರರಿಂದ ಕೂಡಿದ ತಂಡವನ್ನು ಬಲಿಷ್ಠ ಪಾಕ್ ಬೌಲಿಂಗ್ ಪಡೆ ಸುಲಭವಾಗಿ ಕಟ್ಟಿಹಾಕಿತು.
ತಂಡದ ಯಾವ ಆಟಗಾರನೂ ಮೂವತ್ತರ ಗಡಿ ದಾಟಲಿಲ್ಲ. ರನ್ ಗಳಿಸಲು ಪರದಾಡಿದ ಹಾಂಕಾಂಗ್ , ಕಷ್ಟಪಟ್ಟು ನೂರರ ಗಡಿ ಮುಟ್ಟಿತು.
ಒಂದು ಹಂತದಲ್ಲಿ 44 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಮುಂಬೈ ಮೂಲದವರಾದ ಕಿಂಚಿತ್ ಶಾ (26) ಮತ್ತು ಐಜಾಜ್ ಖಾನ್ (27) ಆರನೇ ವಿಕೆಟ್‌ಗೆ 53 ರನ್‌ಗಳ ಜತೆಯಾಟ ನೀಡಿ ಕೊಂಚ ಚೇತರಿಕೆ ನೀಡಿದರು.
ಪಾಕಿಸ್ತಾನದ ಪರ ಉಸ್ಮಾನ್ ಖಾನ್ 19 ರನ್ ನೀಡಿ 3 ವಿಕೆಟ್ ಪಡೆದರು. ಹಸನ್ ಅಲಿ ಮತ್ತು ಶಬದ್ ಖಾನ್ ತಲಾ ಎರಡು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ಹಾಂಕಾಂಗ್: 116/10 (37.1) ಕಿಂಚಿತ್ ಶಾ 26, ಐಜಾಜ್ ಖಾನ್ 27, ಅಂಶುಮಾನ್ ರಾತ್ 19, ಉಸ್ಮಾನ್ ಖಾನ್ 19/3, ಹಸನ್ ಅಲಿ 19/1, ಶದಬ್ ಖಾನ್ 31/2
ಪಾಕಿಸ್ತಾನ: 120/2 (23.4) ಇಮಾಮ್ ಉಲ್ ಹಕ್ 50*, ಫಖರ್ ಜಮಾನ್ 24, ಬಾಬರ್ ಅಜಂ 33, ಎಹ್ಸಾನ್ ಖಾನ್ 34/2.