ವಿಶ್ವಾಸದಲ್ಲಿ ಭಾರತ, ಒತ್ತಡದಲ್ಲಿ ಬಾಂಗ್ಲಾ, ಗೆಲುವು ಯಾರಿಗೆ?

ದುಬೈ, ಸೆಪ್ಟೆಂಬರ್ 21: ಒಂದೂ ಪಂದ್ಯ ಸೋಲದೆ ಸೂಪರ್-4 ಘಟ್ಟ ಪ್ರವೇಶಿಸಿರುವ ಭಾರತ ಇಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಪಾಕ್ ಮೇಲೆ ಅಧಿಕಾರಯುತವಾಗಿ ಗೆದ್ದು ವಿಶ್ವಾಸದ ಅಲೆಯ ಮೇಲೆ ಭಾರತ ಇದ್ದರೆ, ಅಫ್ಘಾನ್ ಮೇಲೆ ಸೋತಿರುವ ಬಾಂಗ್ಲಾ ಒತ್ತಡದಲ್ಲಿದೆ.
ನಿನ್ನೆ ನಡೆದ ಅನೌಪಚಾರಿಕ ಪಂದ್ಯದಲ್ಲಿ ಬಾಂಗ್ಲಾದೇಶವು ಅಫ್ಘಾನಿಸ್ತಾನ ತಂಡದ ವಿರುದ್ಧ ಭಾರಿ ಅಂತರದಿಂದ ಸೋಲನ್ನು ಕಂಡಿದೆ. ಕೆಲಸು ಸ್ಟಾರ್ ಆಟಗಾರರಿಗೆ ಅದು ವಿಶ್ರಾಂತಿ ನೀಡಿತ್ತಾದರೂ, ಭಾರಿ ಅಂತರದಲ್ಲಿ ಸೋತಿರುವುದು ಅದರ ವಿಶ್ವಾಸ ಕುಂದಿಸಿರಲಿಕ್ಕೂ ಸಾಕು.
ಮತ್ತೊಂದೆಡೆ ಭಾರತವು ಪಾಕಿಸ್ತಾನ ತಂಡದ ವಿರುದ್ಧ ಪಡೆದ ಭಾರಿ ವಿಜಯ ಅದರ ವಿಶ್ವಾಸವನ್ನು ಹೆಚ್ಚಿಸಿದ್ದು, ಆರಂಭಿಕ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳ ಉತ್ತಮ ಪ್ರದರ್ಶನ ತಂಡಕ್ಕೆ ಸಿಕ್ಕ ಧನಾತ್ಮಕ ಅಂಶವಾಗಿದೆ.
ಮೇಲ್ಮೋಟಕ್ಕೆ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಬಾಂಗ್ಲಾದೇಶ ತಂಡವು ಹಲವು ಬಾರಿ ಬಲಿಷ್ಠ ತಂಡಗಳಿಗೆ ಸೋಲುಣಿಸಿದ ಅನುಭವ ಹೊಂದಿದೆ. ಹಾಗಾಗಿ ಭಾರಿ ಎಚ್ಚರಿಕೆಯಿಂದಲೇ ಬಾಂಗ್ಲಾ ವಿರುದ್ಧ ಆಡಬೇಕಿರುತ್ತದೆ.

ಯಾರ ಮೇಲೆ ಭರವಸೆ?
ಭಾರತವು ಫಾರ್ಮ್‌ನಲ್ಲಿರುವ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೇಲೆ ಭರವಸೆ ಇಟ್ಟಿದೆ. ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಅಂಬಟಿ ರಾಯುಡು ಸಹ ಉತ್ತಮ ಆಟ ಪ್ರದರ್ಶಿಸುವ ಸೂಚನೆ ನೀಡಿದರು ಹಾಗಾಗಿ ಮಧ್ಯಮಕ್ರಮಾಂಕದ ಮೇಲೆಯೂ ಭರವಸೆ ಇಡಬಹುದಾಗಿದೆ. ಧೋನಿ ಒಬ್ಬರು ಫಾರ್ಮ್‌ಗೆ ಮರಳಬೇಕಿದೆ. ಇನ್ನು ಭಾರತದ ಬೌಲಿಂಗ್ ವಿಭಾಗ ಉತ್ತಮವಾಗಿ ಪ್ರದರ್ಶನ ತೋರುತ್ತಿದೆ. ರೋಹಿತ್ ಶರ್ಮಾ ಬಾಂಗ್ಲಾ ವಿರುದ್ಧ ಆಡಿರುವ ಕಳೆದ ಐದು ಪಂದ್ಯದಲ್ಲಿ ಎರಡು ಶತಕ ಒಂದು ಅರ್ಧ ಶತಕ ಗಳಿಸಿದ್ದಾರೆ.

ಗಾಯಾಳುಗಳ ಸಮಸ್ಯೆ
ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಆಡುವವೇಳೆ ಸೊಂಟದ ತೀವ್ರ ಸ್ನಾಯು ಸೆಳೆತಕ್ಕೆ ಒಳಗಾದ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರನಡೆದಿರುವುದು ಭಾರತಕ್ಕೆ ಅಲ್ಪ ಹಿನ್ನಡೆ ಆಗಿಸಿದೆ. ಜೊತೆಗೆ ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್ ಸಹ ಗಾಯಗೊಂಡು ಹೊರನಡೆದಿದ್ದಾರೆ. ಗಾಯಾಳುಗಳ ಚಿಂತೆ ಭಾರತಕ್ಕೆ ಕಾಡುತ್ತಿದೆ.

ಬಾಂಗ್ಲಾದೇಶಕ್ಕೂ ಗಾಯಾಳುಗಳ ಸಮಸ್ಯೆ
ಬಾಂಗ್ಲಾದೇಶ ತಂಡ ಸಹ ಗಾಯಾಳುಗಳ ಸಮಸ್ಯೆಯಿಂದ ಬಳಲುತ್ತಿದೆ. ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಬೆರಳು ಮುರಿದುಕೊಂಡು ಸರಣಿಯಿಂದ ಹೊರನಡೆದಿದ್ದಾರೆ ಅವರ ಸ್ಥಾನವನ್ನು ಹೊಸ ಆಟಗಾರ ನಜಿಮುಲ್ ಹುಸೇನ್ ತುಂಬಲಿದ್ದಾರೆ. ನಿನ್ನೆಯ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದ್ದ ಮುಶ್ಫಿಕುರ್ ರಹೀಮ್ ಮತ್ತು ಮುಸ್ತಫಿಜುರ್ ರೆಎಹಮಾನ್ ಅವರುಗಳು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಹಾರ್ದಿಕ್ ಪಾಂಡ್ಯಾ ಸ್ಥಾನ ತುಂಬುವರು ಯಾರು?
ವೇಗದ ಬೌಲರ್ ಕಮ್ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ ಗಾಯಗೊಂಡು ಹೊರಗುಳಿದಿದ್ದು ಅವರ ಸ್ಥಾನ ತುಂಬುವರು ಯಾರು ಎಂಬುದು ಪ್ರಶ್ನೆಯಾಗಿದೆ. ಬಿಸಿಸಿಐ ದೀಪಕ್ ಚಾಹರ್ ಹಾಗೂ ರವೀಂದ್ರ ಜಡೇಜಾ ಅವರನ್ನು ಕರೆಸಿಕೊಂಡಿದೆ ಆದರೆ ಇಬ್ಬರಲ್ಲಿ ಆಡುವ ಹನ್ನೊಂದರೊಳಗೆ ಸ್ಥಾನ ಪಡೆಯುವರು ಯಾರು ಎಂಬುದು ಮುಖ್ಯ. ಈಗಾಗಲೇ ತಂಡದಲ್ಲಿ ಮೂವರು ಸ್ಪಿನ್ನರ್‌ಗಳು ಇರುವ ಕಾರಣ ದೀಪಕ್ ಚಾಹರ್‌ಗೆ ಅವಕಾಶ ಸಿಗುವ ಸಾಧ್ಯೆ ಇದೆ. ಅಲ್ಲದಿದ್ದಲ್ಲಿ ಮೊದಲ ಪಂದ್ಯ ಆಡಿದ್ದ ಕಲೀಲ್ ಅಹ್ಮದ್‌ಗೂ ಅವಕಾಶ ದೊರೆಯುವ ಸಾಧ್ಯತೆ ಇದೆ.

ಬಲಾ-ಬಲಾ ಹೇಗಿದೆ?
ಈವರೆಗೆ ಭಾರತವು ಬಾಂಗ್ಲಾದೇಶದ ವಿರುದ್ಧ 33 ಏಕದಿನ ಪಂದ್ಯಗಳನ್ನು ಆಡಿದೆ ಅದರಲ್ಲಿ 27 ಪಂದ್ಯಗಳನ್ನು ಭಾರತ ಗೆದ್ದಿದೆ. ಐದು ಪಂದ್ಯಗಳಲ್ಲಿ ಬಾಂಗ್ಲಾದೇಶ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಬಂದಿಲ್ಲ. ಇಂದು ಇತ್ತಂಡಗಳಿಗೆ ಉತ್ತಮ ಪ್ರೇಕ್ಷಕರ ಬೆಂಬಲ ಸಹ ಸಮ ಪ್ರಮಾಣದಲ್ಲಿ ಇರಲಿದೆ. ಹೈಓಲ್ಟೇಜ್ ಪಂದ್ಯವೆಂದೇ ಪರಿಗಣಿತವಾಗಲಿದೆ.

ಎರಡು ಬಾರಿ ಗೆಲುವಿನ ಸನಿಹಕ್ಕೆ ಬಂದಿದ್ದ ಬಾಂಗ್ಲಾ
ಇದೇ ವರ್ಷಾರಂಭದಲ್ಲಿ ನಡೆದ ನಿಧಹಾಸ್ ಟ್ರೋಫಿಯಲ್ಲಿ ಗೆಲುವಿನ ಸನಿಹಕ್ಕೆ ಬಂದಿದ್ದ ಬಾಂಗ್ಲಾಕ್ಕೆ ಭಾರತ ಸೋಲುಣಿಸಿತ್ತು. ದಿನೇಶ್ ಕಾರ್ತಿಕ್ ಕೇವಲ 9 ಎಸೆತಗಳಲ್ಲಿ 43 ರನ್ ಭಾರಿಸಿ ಬಾಂಗ್ಲಾಕ್ಕೆ ಸಿಂಹಸ್ವಪ್ನವಾಗಿದ್ದರು. 2016ರಲ್ಲಿ ಕೊನೆಯ ಪಂದ್ಯದಲ್ಲಿ ಧೋನಿ ಅವರು ಮಾಡಿದ ವಿರೋಚಿತ ರನ್‌ಔಟ್‌ನಿಂದಾಗಿ ಭಾರತ ಕೇವಲ ಒಂದು ರನ್‌ನಿಂದ ಗೆದ್ದಿತ್ತು. ಇವೆರಡೂ ಸಹ ಬಾಂಗ್ಲಾ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಬಹುಕಾಲ ಉಳಿಯುವ ಕಹಿ ನೆನಪುಗಳಾಗಿವೆ. ಇವೆರಡೂ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿ ಬಾಂಗ್ಲಾ ಇಂದು ಕಣಕ್ಕಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications