ಏಷ್ಯಾ ಕಪ್: ಭಾರತ vs ಪಾಕಿಸ್ತಾನ ಕುತೂಹಲಕಾರಿ ಪಂದ್ಯದ ಪ್ರಮುಖಾಂಶಗಳು

ದುಬೈ, ಸೆಪ್ಟೆಂಬರ್ 22: ಏಷ್ಯಾ ಕಪ್ 2018ರ ಲೀಗ್ ಹಂತದ ಮೊದಲ ಮುಖಾಮುಖಿಯಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಒನ್ ಸೈಡ್ ಪಂದ್ಯದಲ್ಲಿ 8 ವಿಕೆಟ್ ಭರ್ಜರಿ ಜಯ ಗಳಿಸಿತ್ತು. ಆದರೆ ಸೆಪ್ಟೆಂಬರ್ 23ರಂದಿನ ಇತ್ತಂಡಗಳ ಸೆಣಸಾಟದಲ್ಲಿ ಭಾರತಕ್ಕೆ ಗೆಲುವು ಸುಲಭವಿಲ್ಲ.
ಭಾನುವಾರದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲೋದು ಯಾಕೆ ಸುಲಭವಿಲ್ಲವೆಂದರೆ, ಪಾಕಿಸ್ತಾನ ತಂಡದ ಆಟವನ್ನು ಹೀಗೇಯೇ ಎಂದು ನಿರ್ಧರಿಸುವಂತಿಲ್ಲ. ಇದಕ್ಕೆ ಸೆಪ್ಟೆಂಬರ್ 21ರಂದು ನಡೆದ ಅಫ್ಘಾನ್-ಪಾಕ್ ಪಂದ್ಯದಲ್ಲಿನ ಪಾಕ್ 3 ವಿಕೆಟ್ ರೋಚಕ ಗೆಲುವೇ ಸಾಕ್ಷಿ.
ಸೂಪರ್ ಫೋರ್ 3ನೇ ಪಂದ್ಯದಲ್ಲಿ ಎದುರುಬದುರಾಗುತ್ತಿರುವ ಪಾಕಿಸ್ತಾನ-ಭಾರತ ತಂಡಗಳ ಬಲಾಬಲಗಳು, ಪ್ರಮುಖಾಂಶಗಳಲ್ಲಿ ಕೆಲವು ಇಲ್ಲಿವೆ..

ಧವನ್-ರೋಹಿತ್ ಜೊತೆಯಾಟ
ಮೊದಲ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ಎದುರು ಸುಲಭ ಜಯ ಸಾಧಿಸುವಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಪ್ರಮುಖ ಪಾತ್ರ ವಹಿಸಿದ್ದರು. ಅದೂ ಪಾಕಿಸ್ತಾನ ಗರಿಷ್ಠ ರನ್ ಕಲೆ ಹಾಕುವಲ್ಲಿ ಎಡವಿದ್ದು ದೇಸೀ ತಂಡ ಭರ್ಜರಿ ಗೆಲುವು ದಾಖಲಿಸಲು ದಾರಿಯಾಗಿತ್ತು. ಆದರೆ ಈ ಸಾರಿ ಪಾಕಿಸ್ತಾನದ ಮಾರಕ ಬೌಲರ್ ಗಳ ಬಗ್ಗೆ ಭಾರತದ ಬ್ಯಾಟ್ಸ್ಮನ್ ಗಳು ಕೊಂಚ ಎಚ್ಚರಿಕೆ ವಹಿಸುವುದು ಒಳಿತು. ಯಾಕೆಂದರೆ ಪಾಕ್ ತಂಡದಲ್ಲಿ ಮೊಹಮ್ಮದ್ ಅಮೀರ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ ಅವರಂತ ಮಾರಕ ಬೌಲರ್ ಗಳಿದ್ದಾರೆ.

ಭುವನೇಶ್ವರ್, ಬೂಮ್ರಾ ಬಲ
ಭಾರತದ ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಜಸ್ ಪ್ರೀತ್ ಬೂಮ್ರಾ ಬಲವಾಗಿದ್ದರೆ, ಪಾಕ್ ಬ್ಯಾಟಿಂಗ್ ವಿಭಾಗಕ್ಕೆ ಫಖರ್ ಜಮಾನ್, ಬಾಬರ್ ಅಜಾಮ್, ಇಮಾಮ್ ಉಲ್ ಹಕ್ ಮತ್ತು ಶೋಯೇಬ್ ಬಲ್ಲಿಕ್ ಬಲವಿದೆ.

ಬ್ಯಾಲನ್ಸ್ ಬೇಕು
ಪಾಕ್ ವಿರುದ್ಧ ಪ್ರಮುಖ ಪಂದ್ಯ ಎದುರಿರುವಾಗ ಭಾರತ ತುಂಬಾ ಎಚ್ಚರಿಕೆಯಿಂದ ಆಡಬೇಕಾದ ಅನಿವಾರ್ಯತೆಯಿದೆ. ಭಾನುವಾರದ ಪಂದ್ಯಕ್ಕೆ ತಂಡಕ್ಕೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದ ಬೆಂಬಲ ಬೇಕು. ಜೊತೆಗೆ ಸ್ಪಿನ್ನರ್ ಗಳಾದ ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಅವರನ್ನೂ ಸಮರ್ಧವಾಗಿ ಬಳಸಿಕೊಳ್ಳಬೇಕಿದೆ. (ಚಿತ್ರದಲ್ಲಿ ಸೆಪ್ಟೆಂಬರ್ 19ರ ಪಂದ್ಯದಲ್ಲಿ ಪಾಕ್ ಆಟಗಾರ ಉಸ್ಮಾನ್ ಖಾನ್ ಅವರ ಶೂ ಲೇಸ್ ಕಟ್ಟಿ ಸಹಾಯ ಮಾಡಿ ಭಾರತ-ಪಾಕಿಸ್ತಾನ ಕ್ರೀಡಾಭಿಮಾನಿಗಳ ಮನ ಗೆದ್ದಿದ್ದ ಚಾಹಲ್)

ನೇರ ಪ್ರಸಾರ
ದುಬೈಯ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಈ ಪಂದ್ಯ ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ. ಭಾರತ ತಂಡ ಆಡುತ್ತಿರುವುದರಿಂದ ಡಿಡಿ ನ್ಯಾಷನಲ್ ಚಾನೆಲ್ ನಲ್ಲೂ ಪ್ರಸಾರಗೊಳ್ಳಲಿದೆ. 'ಮೈಖೇಲ್ ಕನ್ನಡ'ದಲ್ಲೂ ಲೈವ್ ಸ್ಕೋರ್ ವೀಕ್ಷಿಸಬಹುದು. ಇನ್ನು ಹಾಟ್ಸ್ ಸ್ಟಾರ್ ಡಾಟ್ ಕಾಮ್ ನಲ್ಲೂ ಪಂದ್ಯಗಳ ಲೈವ್ ಅಪ್ ಡೇಟ್ಸ್ ಸಿಗಲಿವೆ. ಭಾರತೀಯ ಕಾಲಮಾನ 5 pmಗೆ ಪಂದ್ಯ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications